ರಂಜಾನ್ 25 ಶುಕ್ರವಾರ ಉದ್ಯಮಿಗೆ ಖೆಡ್ಡಾ ತೋಡಿ 596 ಪವನ್ ಚಿನ್ನಾಭರಣ ಲೂಟಿದ ಮಾಟಗಾತಿ ಜಿನ್ನುಮ್ಮ!

ರಾಷ್ಟ್ರೀಯ

ಹನಿಟ್ರ್ಯಾಪ್, ಮಾಟ ಮಂತ್ರದಲ್ಲಿ ನಿಸ್ಸೀಮಳು ಈಕೆ

ಭಾರೀ ಸಂಚಲನ ಸೃಷ್ಟಿಸಿದ ಪ್ರಕರಣ.. ಆರೋಪಿಗಳು ಅಂದರ್

ಗಲ್ಫ್ ರಾಷ್ಟ್ರಗಳಲ್ಲಿ ಹಲವಾರು ಸೂಪರ್ ಮಾರ್ಕೆಟ್ ಗಳು ಮತ್ತು ಇತರ ಉದ್ಯಮಗಳನ್ನು ಹೊಂದಿದ್ದ ಅನಿವಾಸಿ ಉದ್ಯಮಿ ಕಾಸರಗೋಡು ಫಾರೂಖಿಯ ನಿವಾಸಿ ಎಂ.ಸಿ ಅಬ್ದುಲ್ ಗಫೂರ್ ಹಾಜಿ ಏಪ್ರಿಲ್ 14, 2023 ರಂದು ಮುಂಜಾನೆ ಅವರ ಮನೆಯ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅದು ಮುಸ್ಲಿಮರ ಪವಿತ್ರ ಮಾಸ ರಂಜಾನ್ 25 ನೇ ಶುಕ್ರವಾರದ ದಿನವಾಗಿತ್ತು. ರಂಜಾನ್ ತಿಂಗಳಾಗಿದ್ದರಿಂದ ಅದು ಸಹಜ ಸಾವು ಆಗಿರಬಹುದೆಂದು ಕುಟುಂಬಸ್ಥರು ತೀರ್ಮಾನಿಸಿ ಮೃತದೇಹವನ್ನು ಸಮಾಧಿ ಮಾಡಿದ್ದರು. ಆ ನಂತರ ಕುಟುಂಬಸ್ಥರು ಗಫೂರ್ ಹಾಜಿ ಅವರು ಸಾಲ ಮಾಡಿ ಖರೀದಿಸಿದ್ದ ಚಿನ್ನಾಭರಣಗಳನ್ನು ಎಣಿಕೆ ಮಾಡಿದಾಗ 596 ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡುಬಂತು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಗಫೂರ್ ಸಾವಿನ ಬಗ್ಗೆ ಸಂಶಯಗೊಂಡು ಈ ಬಗ್ಗೆ ಬೇಕಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಫೂರ್ ಪುತ್ರ ಮೂಸಾ ದೂರು ನೀಡಿದ್ದರು. 2023, ಏಪ್ರಿಲ್ 27 ರಂದು ಗಫೂರ್ ಹಾಜಿ ಅವರ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ತಲೆಗೆ ಗಾಯವಾಗಿರುವ ಸುಳಿವು ಲಭ್ಯವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಶಿಲ್ಪಾ ಅವರ ಮಾರ್ಗದರ್ಶನದಲ್ಲಿ, ಡಿಸಿಆರ್ ಬಿ ಡಿವೈಎಸ್ಪಿ ಕೆ.ಜೆ. ಜಾನ್ಸನ್ ಮತ್ತು ಬೇಕಲ್ ಇನ್ಸ್ ಪೆಕ್ಟರ್ ಕೆ.ಪಿ ಶೈನ್ ನೇತೃತ್ವದಲ್ಲಿ ತನಿಖೆಗೆ ಇಳಿದ ಪೊಲೀಸರಿಗೆ ಚಿನ್ನ ಲಪಟಾಯಿಸಿ ಗಫೂರ್ ಹಾಜಿ ಅವರನ್ನು ಕೊಲೆಗೈದಿರುವುದು ದೃಡಪಟ್ಟಿತು. ಈ ಸಂಬಂಧ ಮಾಟಗಾತಿ ಜಿನ್ನುಮ್ಮ ಎಂದು ಕರೆಯಲ್ಪಡುವ ಮಹಿಳೆ, ಆಕೆಯ ಪತಿ ಉಬೈದ್, ಪೂಚ್ಕಾಡ್ ನಿವಾಸಿ ಅಸ್ನೀಫಾ, ಮಧೂರ್ ನಿವಾಸಿ ಆಯೇಷಾ ಎಂಬವರನ್ನು ಬಂಧಿಸಲಾಗಿದೆ.

ಗಫೂರ್ ಹಾಜಿ ಕೊಲೆಗೆ ಸಂಬಂಧಿಸಿದಂತೆ ಕೇರಳ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಗಫೂರ್ ಹಾಜಿ ಅವರ ಕುಟುಂಬದ ಸದಸ್ಯರು, ಸ್ಥಳೀಯರು ಸೇರಿದಂತೆ 40 ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆಸಿತ್ತು. ಚಿನ್ನವನ್ನು ಸುಮಾರು ಮೂರು ಆಭರಣ ಮಳಿಗೆಗಳಲ್ಲಿ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೃತ ವ್ಯಕ್ತಿ ಮತ್ತು ಮಹಿಳೆ ನಡುವೆ ವಾಟ್ಸಾಪ್ ಸಂದೇಶಗಳು ವಿನಿಮಯವಾಗಿದ್ದವು. ಮೃತ ಗಪೂರ್ ಹಾಜಿಯಿಂದ ಮಹಿಳೆ ಈ ಹಿಂದೆ 10 ಲಕ್ಷ ರೂಪಾಯಿ ಹಾಗೂ ಚಿನ್ನಾಭರಣ ಪಡೆದಿರುವ ದಾಖಲೆಗಳನ್ನು ತನಿಖಾ ತಂಡ ಸಂಗ್ರಹಿಸಿತ್ತು. ಅರ್ಧ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನದ ಬಣ್ಣದ ಸೀಸದ ಕಾಗದದ ಮೇಲೆ ಬರೆದಿಟ್ಟ ಮ್ಯಾಜಿಕ್ ಪ್ಲೇಟ್ ಗಾಗಿ ಈ ಗುಂಪು ಸಂತ್ರಸ್ತೆಯಿಂದ 55 ಸಾವಿರ ರೂಪಾಯಿ ವಸೂಲಿ ಮಾಡಿದೆ ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಮಾಟಗಾತಿ ಜಿನ್ನುಮ್ಮ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಹಿನ್ನೆಲೆ ಹೊಂದಿದ್ದು, ಹನಿಟ್ರ್ಯಾಪ್, ಮಾಟ ಮಂತ್ರದಲ್ಲಿ ನಿಸ್ಸೀಮಳು. ಈ ಹಿಂದೆ ಹನಿಟ್ರ್ಯಾಪ್ ಬಳಸಿ ಚಿನ್ನಾಭರಣ ಹಾಗೂ ಹಣ ದೋಚಿದ್ದ ಪ್ರಕರಣದಲ್ಲಿ ಜಿನ್ನುಮ್ಮ, ಆಕೆಯ ಪತಿ 14 ದಿನಗಳ ಕಾಲ ರಿಮಾಂಡ್ ನಲ್ಲಿದ್ದರು. ಮಹಿಳೆ ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಚಿನ್ನ ಕದ್ದ ಪ್ರಕರಣವೂ ದಾಖಲಾಗಿತ್ತು. ಅನಿವಾಸಿ ಉದ್ಯಮಿ ಗಫೂರ್ ಹಾಜಿ ಅವರನ್ನು ಮಾಟ ಮಂತ್ರದ ಮೂಲಕ ವಶೀಕರಣ ನಡೆಸಿ ಅವರ ಮನೆ ಸೇರಿದ್ದಳು.

ಮಧ್ಯರಾತ್ರಿಯಲ್ಲಿ ವಾಮಾಚಾರ, ಗುಡಿಸಲು ತೋಡುವುದು, ಮಂತ್ರಾಕ್ಷತೆ ಕಟ್ಟುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪತ್ತುತ್ತಿ ಎಂಬ ಮಲೆಯಾಳಂ ಭಾಷಿಕ ಕರ್ನಾಟಕ ಯುವತಿಯ ಆತ್ಮ ಪ್ರವೇಶಿಸಿದ್ದು , ಮಾಟ ಮಂತ್ರ ಪರಿಹಾರ ಸೂಚಿಸಿ, ಮಾಟ ಮಂತ್ರ ಮುಗಿದ ಬಳಿಕ ವಂಚನೆ ತಂಡ ಸಂತ್ರಸ್ತ ಮಹಿಳೆಯಿಂದ ಚಿನ್ನಾಭರಣ ಸೇರಿದಂತೆ ಲಕ್ಷಗಟ್ಟಲೆ ದೋಚಿದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.