ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ಧರ್ಮಗಳ ಮಧ್ಯೆ ಅವಹೇಳನಕಾರಿ ಪೋಸ್ಟ್ ಬರೆದು ವೈರಲ್ ಮಾಡಿದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನವಗ್ರಾಮ ಸೈಟ್ ನಿವಾಸಿ ಜಯ ಪೂಜಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಬರಹ ಬರೆದು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ . ಬಂಟ್ವಾಳ ಗ್ರಾಮಾಂತರ ಪೋಲೀಸರು ಈತನನ್ನು ಬಂಧಿಸಿ ಸುಮೋಟೋ ಕೇಸ್ ದಾಖಲಿಸಿದ್ದಾರೆ.

ಆರೋಪಿ ಜಯ ಪೂಜಾರಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಧರ್ಮ, ಧರ್ಮಗಳ ಮಧ್ಯೆ ಕೋಮುಭಾವನೆ ಕೆರಳುವ ರೀತಿಯಲ್ಲಿ, ಮಹಿಳೆಯರ ಮಾನಕ್ಕೆ ಕುಂದುಂಟಾಗುವ, ತೇಜೋವಧೆಯುಂಟಾಗುವ ರೀತಿಯಲ್ಲಿ ಅವಹೇಳನಕಾರಿಯಾಗಿ ಬರಹ ಬರೆದು ಪೋಸ್ಟ್ ಮಾಡಿದ್ದ. ಈತ ಈ ಹಿಂದೆಯೂ ಇದೇ ರೀತಿ ಕೋಮು ಭಾವನೆ ಕೆರಳಿಸಿ ಪೋಸ್ಟ್ ಬರೆದು, ತಪ್ಪೊಪ್ಪಿಗೆ ಕೇಳುವ ಚಾಳಿ ಬೆಳೆಸಿಕೊಂಡಿದ್ದ. ಆದರೆ ಈ ಬಾರಿ ಮಾತ್ರ ಪೊಲೀಸರು ಈತನ ಚಳಿ ಬಿಡಿಸಿದ್ದಾರೆ. ಸುಮೋಟೋ ಕೇಸ್ ಬುಕ್ ಮಾಡಿ ಈತನನ್ನು ಬಂಧಿಸಿ , ನ್ಯಾಯಾಲಯಕ್ಕೆ ಹಾಜರು ಪಡಿಸಿದ್ಧರು. ಈತನಿಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

