ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆ ಗಣೇಶ್ ಮಿಲ್ ಬಳಿ ಇರುವ ಒಳ ರಸ್ತೆಯಲ್ಲಿ ಡಿ. 12ರಂದು ಮಧ್ಯಾಹ್ನ ವೇಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ಸ್ಕೂಟರ್ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹಳೆಯಂಗಡಿ ಇಂದಿರಾ ನಗರದ ನಿವಾಸಿ ಅಬ್ದುಲ್ ರವೂಫ್ ಯಾನೆ ಆಟೋ ರವೂಫ್(30) ಎಂದು ಗುರುತಿಸಲಾಗಿದೆ.

ಆರೋಪಿ ಮತ್ತು ಕಳವು ಮಾಡಿದ ಸೊತ್ತು ಪತ್ತೆಯ ಬಗ್ಗೆ ವಿಶೇಷ ತಂಡ ರಚಿಸಿದ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ಅವರು ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿಯಿಂದ ಸುಮಾರು 70,000 ರೂ. ಮೌಲ್ಯದ ಚಿನ್ನದ ಸರ, 50,000 ರೂ. ಮೌಲ್ಯದ ಸ್ಕೂಟರ್, ಸುಮಾರು 50,000 ರೂ. ಮೌಲ್ಯದ ಆಟೋ ರಿಕ್ಷಾ ಮತ್ತು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಆರೋಪಿ ವಿರುದ್ಧ ಮೂಡುಬಿದಿರೆ, ಮೂಲ್ಕಿ, ಬಜಪೆ, ಉಪ್ಪಿನಂಗಡಿ ಪೊಲೀಸ್ ಠಾಣೆ ಮತ್ತು ಹಾಸನ ಜಿಲ್ಲೆಯ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಸುಲಿಗೆ ಮತ್ತು ಕಳವಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳಲ್ಲಿ ಆರೋಪಿ 2 ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದುಕೊಂಡಿದ್ದ.
ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ರವರ ಮಾರ್ಗದರ್ಶನದಂತೆ, DCP ಯವರಾದ ಸಿದ್ದಾರ್ಥ ಗೋಯೆಲ್ (ಕಾ&ಸು) ಮತ್ತು ಕೆ ರವಿ ಶಂಕರ್ (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀಕಾಂತ K ಮತ್ತು ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ PSI ರೇವಣಸಿದ್ದಪ್ಪ, PSI ಕುಮಾರೇಶನ್, PSI ಲತಾ, ಸಿಬ್ಬಂದಿಯವರಾದ ಸುಜನ್, ಮಂಜುನಾಥ, ರಶೀದ ಶೇಖ್, ಬಸವರಾಜ್ ಪಾಟೀಲ್, ಚಿದಾನಂದ, ಚಂದ್ರಕಾಂತ್, ಕೆಂಚಪ್ಪ, ಭರಮಾ ಬಡಿಗೇರ್, ದುರ್ಗಾ ಪ್ರಸಾದ, ಪ್ರೇಮ್ ಕುಮಾರ್, ವಿರುಪಾಕ್ಷ, ಪರಸಪ್ಪ, ಪ್ರಜ್ವಲ್ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
