ಮಂಜನಾಡಿ ಅಡುಗೆ ಅನಿಲ ದುರಂತ, ಸಮಗ್ರ ತನಿಖೆ ನಡೆಯಬೇಕು, ಶಾಸಕ ಯು. ಟಿ ಖಾದರ್ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು: ಮುನೀರ್ ಕಾಟಿಪಳ್ಳ

ಕರಾವಳಿ

ಉಳ್ಳಾಲ ತಾಲೂಕು ಮಂಜನಾಡಿಯ ಮನೆಯೊಂದರಲ್ಲಿ ನಡೆದ ಅಡುಗೆ ಅನಿಲ ಸಿಲಿಂಡರ್ ಸ್ಪೋಟದಲ್ಲಿ ಮೃತ ಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಗಾಯಾಳುಗಳಾಗಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದ ತಾಯಿ ಹಾಗೂ ಮೂವರು ಹೆಣ್ಣುಮಕ್ಕಳಲ್ಲಿ ಮೂರು ವಾರಗಳ ಅವಧಿಯಲ್ಲಿ ಮೂವರು ಮೃತ ಪಟ್ಟಿದ್ದಾರೆ. ಈ ದುರಂತದ ದಾರುಣತೆಗೆ ಜನ ಸಮೂಹ ದುಃಖತಪ್ತವಾಗಿದೆ. ಜೊತೆಗೆ ಬೆಚ್ಚಿಬಿದ್ದಿದೆ. ರಾಜ್ಯ ಸರಕಾರ ಪರಿಹಾರ ಧನ ಘೋಷಿಸಲು ವಿಳಂಬ ಮಾಡುತ್ತಿರುವುದು ಜನತೆಯ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ನೋವಿನ ಜೊತೆಗೆ ಜನತೆ ಬೆಚ್ಚಿ ಬೀಳಲು ಪ್ರಮುಖ ಕಾರಣ, ಮನೆಯುಲ್ಲಿ ಹೆಚ್ಚುವರಿಯಾಗಿದ್ದ ಎರಡನೇ ಸಿಲಿಂಡರ್ ಸೋರಿಕೆ ಗೊಂಡಿರುವುದು, ವಿದ್ಯುತ್ ಸ್ವಿಚ್ ಆನ್ ಮಾಡುವಾಗ ಸೋರಿಕೆಯಾದ ಗ್ಯಾಸ್ ಗೆ ಬೆಂಕಿ ಹತ್ತಿ ಅನಾಹುತ ಸಂಭವಿಸಿರುವುದು. ಇದು ಖಂಡಿತವಾಗಿಯೂ ಭಯ ಹುಟ್ಟಿಸುವ ವಿದ್ಯಮಾನ. ಮಂಜನಾಡಿ ಮಾತ್ರ ಅಲ್ಲ, ಈ ಅವಧಿಯಲ್ಲಿ ಇನ್ನೂ ಕೆಲವೆಡೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅವಘಡಗಳು ಸಂಭವಿಸಿರುವುದು, ಪ್ರಾಣಹಾನಿ ಸಂಭವಿಸಿರುವುದೂ ವರದಿಯಾಗಿದೆ. ಹಲವು ಮನೆಗಳಲ್ಲಿ ಸಿಲಿಂಡರ್ ನಲ್ಲಿ ಸಣ್ಣ ಪ್ರಮಾಣದ ಸೋರಿಕೆಯಾಗುವ ಕುರಿತು ಆರೋಪಗಳೂ ಇವೆ‌. ಅದರಲ್ಲಿಯೂ ಸ್ಟೌ ಗೆ ಸಂಪರ್ಕಗೊಳ್ಳದ ಹೆಚ್ಚುವರಿ ಸಿಲಿಂಡರ್ ಸೋರಿಕೆಗೊಳ್ಳುವುದು ತೀರಾ ಅಪಾಯಕಾರಿ. ಇದೆಲ್ಲದರಿಂದಾಗಿ ಮಂಜನಾಡಿ ದುರಂತದಲ್ಲಿ ಪ್ರಾಣಹಾನಿ ಹೆಚ್ಚುತ್ತಲೆ ಅಡುಗೆ ಅನಿಲ ಬಳಸುವ ಜನರಲ್ಲಿ ಆತಂಕವೂ ಹೆಚ್ಚುತ್ತಿದೆ.

ಮಂಜನಾಡಿ ಮನೆಯಲ್ಲಿ ನಡೆದ ಅಡುಗೆ ಅನಿಲ ಸ್ಪೋಟದ ನೇರ ಹೊಣೆ ಅಡುಗೆ ಅನಿಲ ಒದಗಿಸುವ ಕಂಪೆನಿಯದ್ದಾಗಿದೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಜೊತೆಗೆ ಈ ಕುರಿತು ಪಾರದರ್ಶಕ ತನಿಖೆಗೆ ಸರಕಾರ ಆದೇಶಿಸಬೇಕಿದೆ. ಸ್ಥಳೀಯ ಶಾಸಕ ಯು ಟಿ ಖಾದರ್ ಅವರು ಈ ಪ್ರಕರಣವನ್ನು ನಿಯಮಗಳಿಗಿಂತ ಮಾನವೀಯ ದೃಷ್ಟಿಯಿಂದ ನೋಡುವಂತೆ, ಆ ದೃಷ್ಟಿಯಲ್ಲಿ ಪರಿಹಾರ ಒದಗಿಸುವಂತೆ ಅಧಿಕಾರಿಗಳು, ಗ್ಯಾಸ್ ಕಂಪೆನಿಗಳಿಗೆ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ.. ಶಾಸಕರ ಈ ಹೇಳಿಕೆ ಬಹಳಷ್ಟು ಪ್ರಚಾರವೂ ಆಗಿದೆ. ಆದರೆ, ಈ ಪ್ರಕರಣ ಮಾನವೀಯ ನೆಲೆಯಲ್ಲಿ ನೋಡಿ, ಅನುಕಂಪದ ಆಧಾರದಲ್ಲಿ ಕಂಪೆನಿ ಒಂದಿಷ್ಟು ಮೊತ್ತ ಪರಿಹಾರ ಒದಗಿಸಿ ಕೈ ತೊಳೆದು ಮುಗಿಸುವಷ್ಟು ಸರಳ ಅಲ್ಲ.

ಅಮಾಯಕ ಮೂರು ಹೆಣ್ಣು ಮಕ್ಕಳ ದಾರುಣ ಸಾವಿಗೆ ಕಾರಣವಾಗಿರುವ ಪ್ರಕರಣದಲ್ಲಿ ಗ್ಯಾಸ್ ಸೋರಿಕೆಗೆ ಕಂಪೆನಿಯ ತಪ್ಪುಗಳು ಕಾರಣ ಆಗಿದ್ದರೆ ಸಂಬಂಧ ಪಟ್ಟವರಿಗೆ ಕಠಿಣ ಶಿಕ್ಷೆ ಆಗಬೇಕು, ಕಂಪೆನಿಯ ಕಡೆಯಿಂದ ಸಂತ್ರಸ್ತ ಕುಟುಂಬಕ್ಕೆ ದೊಡ್ಡ ಪ್ರಮಾಣದ ಪರಿಹಾರವೂ ದೊರಕಬೇಕು. ಅದರ ಜೊತೆಗೆ ಈ ರೀತಿಯ ದುರಂತಗಳು (ಗ್ಯಾಸ್ ಸಿಲಿಂಡರ್ ) ಮುಂದಕ್ಕೆ ನಡೆಯದಂತೆ, ತಪ್ಪುಗಳು ಮರುಕಳಿಸದಂತೆ ಸರಿಯಾದ ಕ್ರಮಗಳು ಜರುಗಬೇಕಿದೆ. ಇಲ್ಲದಿದ್ದಲ್ಲಿ ಇಂತಹ ಮತ್ತಷ್ಟು ದುರುಂತಗಳನ್ನು ನಾವು ಕಾಣಬೇಕಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ತಕ್ಷಣವೇ ಈ ಕುರಿತು ಸರಿಯಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು, ರಾಜ್ಯ ಸರಕಾರ ತಜ್ಞರನ್ನು ಒಳಗೊಂಡ ಸಮಿತಿಯಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು‌‌. ಗ್ಯಾಸ್ ಕಂಪೆನಿಗಳಿಂದ ತಪ್ಪುಗಳು ನಡೆದಿದ್ದಲ್ಲಿ ಕಠಿಣ ಕ್ರಮಗಳನ್ನು ಜರುಗಿಸಬೇಕು. ಕಾಲ ಕಾಲಕ್ಕೆ ಮನೆ ಮನೆಗಳ ಗ್ಯಾಸ್ ಸಂಪರ್ಕ ಸಾಧನಗಳ ಸುರಕ್ಷತೆಯ ತಪಾಸಣೆ ನಡೆಯುವಂತೆಯೂ ನೋಡಿಕೊಳ್ಳಬೇಕು‌. ರಾಜ್ಯ ಸರಕಾರದ ತಲಾ ಐದು ಲಕ್ಷ ರೂಪಾಯಿ ಪರಿಹಾರ ಧನ ಮಾತ್ರ ಅಲ್ಲದೆ, ಅಡುಗೆ ಅನಿಲ ಒದಗಿಸಿರುವ ಪೆಟ್ರೋಲಿಯಂ ಕಂಪೆನಿಯಿಂದ ನ್ಯಾಯಯುತವಾದ ಗರಿಷ್ಟ ಪರಿಹಾರ ಸಂತ್ರಸ್ತ ಕುಟುಂಬಕ್ಕೆ ಒದಗಿಸಬೇಕು.

ಶಾಸಕ ಯು ಟಿ ಖಾದರ್ ಅವರು ಟೀಕಾಕಾರರನ್ನು ಹಂಗಿಸುವುದನ್ನು ಬಿಟ್ಟು, ದುರಂತ ಘಟಿಸಿದ ಆರಂಭದಲ್ಲಿ ತನ್ನಿಂದಾದ ಲೋಪಗಳನ್ನು ಸರಿಪಡಿಸಿಕೊಂಡು, ಈ ಪ್ರಕರಣದ ಸೂಕ್ಷ್ಮತೆಯನ್ನು ಅರಿತುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು, ಸರಕಾರ ಹಾಗೂ ವಿವಿಧ ಇಲಾಖೆಗಳಿಂದ ಆಗಬೇಕಾದ ಕೆಲಸಗಳು, ನಡೆಯಬೇಕಾದ ತನಿಖೆ, ಒದಗಿಸಬೇಕಾದ ಪರಿಹಾರಗಳು ಕ್ರಮ ಬದ್ದವಾಗಿ ಆಗುವಂತೆ ನೋಡಿಕೊಳ್ಳಬೇಕು.