ಅಪಹಾಸ್ಯಕ್ಕೊಳಗಾದರೂ 1.50 ರೂಪಾಯಿ ಚಿಲ್ಲರೆ ನೀಡದ ಗ್ಯಾಸ್ ಏಜೆನ್ಸಿ ವಿರುದ್ಧ ಪಟ್ಟುಬಿಡದೆ ನಿರಂತರ 7 ವರ್ಷಗಳ ಹೋರಾಟ..

ರಾಜ್ಯ

ಗ್ಯಾಸ್ ಏಜೆನ್ಸಿಗೆ 4000 ರೂಪಾಯಿ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ; ಗ್ರಾಹಕರ ಹಕ್ಕುಗಳ ಹೋರಾಟದಲ್ಲೊಂದು ಮೈಲಿಗಲ್ಲು ಸೃಷ್ಟಿಸಿದ ಪ್ರಕರಣ..!

ಅನೇಕರು ತಮಗಾಗಿ ಇರುವ ಗ್ರಾಹಕ ಹಕ್ಕುಗಳ ಬಗ್ಗೆ ಚಿಂತಿಸುವುದಿಲ್ಲ. ಕೆಲವೊಮ್ಮೆ ಒಂದೋ ಅಥವಾ ಎರಡು ರೂಪಾಯಿ ಚಿಲ್ಲರೆ ಬಗ್ಗೆ ಚಿಂತಿಸದೇ ಬಿಟ್ಟು ಬಿಡುತ್ತಾರೆ. ಅದರೆ, ಒಂದು ವಿಚಾರ ಗೊತ್ತಿಲ್ಲ. ಕೆಲವೊಂದು ಕಂಪನಿಗಳು ಅಥವಾ ಕೆಲ ವ್ಯಾಪಾರಿಗಳು ತಮ್ಮ ಬಳಿ ಚಿಲ್ಲರೆ ಇದ್ದದ್ದು ಇಲ್ಲ ಅಂದು ಬಿಡುತ್ತಾರೆ. ಅಂತಹ ಸಂದರ್ಭದಲ್ಲಿ ಬಹುತೇಕ ಮಂದಿ ಪ್ರಶ್ನೆ ಮಾಡುವುದಿಲ್ಲ. ಆದರೆ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಚಕ್ರೇಶ್ ಜೈನ್ ಕೇವಲ ಒಂದೂವರೆ ರೂಪಾಯಿಗೆ ಏಳು ವರ್ಷಗಳ ಕಾಲ ಹೋರಾಡುವ ಮೂಲಕ ಗ್ರಾಹಕರ ಹಕ್ಕುಗಳ ಮಹತ್ವವನ್ನು ಎಲ್ಲೆಡೆ ಸಾರಿದ್ದಾರೆ.

2017, ನವೆಂಬರ್ 14 ರಂದು ಚಕ್ರೇಶ್ ಜೈನ್ ಅವರು ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದ್ದರು. ಸಿಲಿಂಡರ್ ಬೆಲೆ 753.50 ರೂಪಾಯಿ ಇತ್ತು. ಆದರೆ ಡೆಲಿವರಿ ಬಾಯ್ 755 ರೂಪಾಯಿ ಪಡೆದು ಚಿಲ್ಲರೆ ಇಲ್ಲ ಎಂದು ಹೇಳಿ 1.50 ರೂಪಾಯಿ ಕೊಡಲಿಲ್ಲ. ಚಕ್ರೇಶ್ ಚಿಲ್ಲರೆ ಕೇಳಿದರೂ ಇಲ್ಲ ಎಂದು ಅಲ್ಲಿಂದ ಹೊರಟು ಹೋದರು. ಇದಾದ ತಕ್ಷಣ ಚಕ್ರೇಶ್, ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿದರು. ಅಲ್ಲದೆ, ರಾಷ್ಟ್ರೀಯ ಗ್ರಾಹಕರ ವೇದಿಕೆಗೆ ನೇರವಾಗಿ ದೂರು ಸಲ್ಲಿಸಿದರು.

ಆರಂಭಿಕ ದೂರಿನ ಬಗ್ಗೆ ಗ್ಯಾಸ್ ಏಜೆನ್ಸಿ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಚಕ್ರೇಶ್ ಅವರು 2019, ಜುಲೈ ಜುಲೈ 15 ರಂದು ಸಾಗರ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದರು. ಗ್ಯಾಸ್ ಏಜೆನ್ಸಿಯವರು ಈ ವಿಷಯವನ್ನು ತುಂಬಾ ಲಘುವಾಗಿ ತೆಗೆದುಕೊಂಡರು. ಇದಲ್ಲದೆ, ಈ ವಿಚಾರದಲ್ಲಿ ಚಕ್ರೇಶ್ ಅವರನ್ನು ಅಪಹಾಸ್ಯ ಸಹ ಮಾಡಿದರು. ಆದರೂ, ಚಕ್ರೇಶ್ ಹಿಂದೆ ಸರಿಯಲಿಲ್ಲ. ತಮ್ಮ ವಕೀಲ ರಾಜೇಶ್ ಸಿಂಗ್ ಮೂಲಕ ನ್ಯಾಯಕ್ಕಾಗಿ ತೀವ್ರ ಹೋರಾಟ ನಡೆಸಿದರು.

ಸುಮಾರು ಐದು ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ ಗ್ರಾಹಕರ ವೇದಿಕೆ ಸಂಚಲನಾತ್ಮಕ ತೀರ್ಪು ನೀಡಿದೆ. ಏಜೆನ್ಸಿಯ ಸೇವೆಗಳಲ್ಲಿ ದೋಷವಿದೆ ಎಂದು ಅದು ನ್ಯಾಯಾಲಯ ಸ್ಪಷ್ಟವಾಗಿ ತೀರ್ಮಾನಿಸಿದ್ದು, 1.50 ರೂಪಾಯಿಯನ್ನು ಮರುಪಾವತಿಸುವಂತೆ ಏಜೆನ್ಸಿಗೆ ಆದೇಶಿಸಿದೆ. ಅದಲ್ಲದೆ, 6% ವಾರ್ಷಿಕ ಬಡ್ಡಿಯನ್ನು ಸೇರಿಸಿ ಎರಡು ತಿಂಗಳೊಳಗೆ ಚಕ್ರೇಶ್ ಗೆ ನೀಡುವಂತೆ ನ್ಯಾಯಾಲಯ ಹೇಳಿದೆ.

ಇದಿಷ್ಟೇ ಅಲ್ಲದೆ, ಚಕ್ರೇಶ್ ಅವರು ಅನುಭವಿಸಿರುವ ಮಾನಸಿಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಪರಿಹಾರವಾಗಿ 2,000 ಮತ್ತು ನ್ಯಾಯಾಲಯದ ವೆಚ್ಚಕ್ಕಾಗಿ 2,000 ರೂಪಾಯಿಯನ್ನು ಚಕ್ರೇಶ್ ಗೆ ಪಾವತಿ ಮಾಡುವಂತೆ ಕೋರ್ಟ್ ಆದೇಶಿಸಿದೆ. ಈ ಒಂದು ಪ್ರಕರಣವು ಗ್ರಾಹಕರ ಹಕ್ಕುಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಚಕ್ರೇಶ್ ಜೈನ್ ಅವರ ಈ ಹೋರಾಟ ಉದ್ಯಮಗಳಿಗೆ ಎಚ್ಚರಿಕೆಯಾಗಿದೆ. ಈ ತೀರ್ಪು ಗ್ರಾಹಕರನ್ನು ನ್ಯಾಯಯುತವಾಗಿ ಪರಿಗಣಿಸಲು ಮತ್ತು ಕಂಪನಿಗಳು ನೈತಿಕ ಮೌಲ್ಯಗಳನ್ನು ಅನುಸರಿಸಲು ನೆನಪಿಸುತ್ತದೆ. ಇದು ಕೇವಲ ಒಂದೂವರೆ ರೂಪಾಯಿಯ ಹೋರಾಟವಲ್ಲ; ನಮ್ಮ ಹಕ್ಕು ಮತ್ತು ಸ್ವಾಭಿಮಾನದ ಹೋರಾಟ ಎಂದು ಜೈನ್ ಹೆಮ್ಮೆಯಿಂದ ಹೇಳುತ್ತಾರೆ.