ಸಿ.ಟಿ ರವಿ. ಕೇಸಲ್ಲಿ ಕಣ್ಣೀರು ಸುರಿಸಿದ್ದ ಸಚಿವೆ ತನ್ನ ಉಸ್ತುವಾರಿ ಕ್ಷೇತ್ರದಲ್ಲೇ ಮಹಿಳಾ ಪೀಡಕ ಅಧಿಕಾರಿಗೆ ಭಡ್ತಿ ನೀಡಿರುವುದು ಎಷ್ಟು ಸರಿ.?
ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿ ದಂಡನೆಗೆ ಗುರಿಯಾಗಿದ್ದ ಅಧಿಕಾರಿಗೆ ರಾಜ್ಯ ಕಾಂಗ್ರೆಸ್ ಸರಕಾರ ಉನ್ನತ ಹುದ್ದೆಯ ಭಡ್ತಿ ನೀಡಿದ ಘಟನೆ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾಮಣಿ ಉಸ್ತುವಾರಿ ಸಚಿವೆಯಾಗಿರುವ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿರುವ ಡಾ. ಅಶೋಕ ಹೆಚ್. ಇವರೇ, ಮಹಿಳಾ ಸಿಬ್ಬಂದಿಗಳಿಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿದ ಮತ್ತು ಈ ಸಂಬಂಧ ದಂಡನೆಗೆ ಗುರಿಯಾಗಿದ್ದ ಅಧಿಕಾರಿಯಾಗಿದ್ದಾರೆ.

2018ರಲ್ಲಿ ಮಂಗಳೂರಿನಲ್ಲಿ ಆರ್ ಸಿ ಹೆಚ್ ಅಧಿಕಾರಿಯಾಗಿದ್ದಾಗ ಡಾ. ಅಶೋಕ ಹೆಚ್. ಇವರು ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ಸಲ್ಲಿಕೆಯಾಗಿತ್ತು.
ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013 ರಡಿಯಲ್ಲಿ ರಚನೆಯಾದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಂತರಿಕ ದೂರು ಸಮಿತಿಯು ಸಂತ್ರಸ್ತ ಮಹಿಳಾ ಉದ್ಯೋಗಿಗಳ ವಿಚಾರಣೆ ನಡೆಸಿತ್ತು. ಡಾ. ಅಶೋಕ ಹೆಚ್. ಇವರ ಮೇಲೆ ಮಹಿಳಾ ಉದ್ಯೋಗಿಗಳು ಮಾಡಿದ ಆರೋಪಗಳು ಸತ್ಯವೆಂದು ಆಂತರಿಕ ದೂರು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಡೆಸಿದ ವಿಚಾರಣೆಯಲ್ಲಿ ಸಾಬೀತಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ಕೂಡಾ, ಈ ವಿಚಾರಣಾ ವರದಿಯನ್ನು ಮಾನ್ಯ ಮಾಡಿ ವರದಿಯೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಆಂತರಿಕ ದೂರು ಸಮಿತಿ ಮತ್ತು ಜಿಲ್ಲಾ ದಂಡಾಧಿಕಾರಿಗಳ ವಿಚಾರಣಾ ವರದಿಯ ಮೇಲೆ ಕರ್ನಾಟಕ ನಾಗರೀಕ ಸೇವಾ ನಿಯಮ 1957ರ 14 (ಬಿ) ಪ್ರಕಾರ ಡಾ. ಅಶೋಕ ಹೆಚ್. ಇವರ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸರಕಾರ 2023ರ ಫೆಬ್ರವರಿ 3 ರಂದು ಅಧಿಕಾರಿಗೆ ದಂಡನೆ ವಿಧಿಸಿದೆ. 2018ರಿಂದಲೇ ಜಾರಿಗೆ ಬರುವಂತೆ ಅಧಿಕಾರಿಯ ಇಂಕ್ರಿಮೆಂಟ್ ಐದು ವರ್ಷಗಳ ಕೆಳಗಿನ ಹಂತಕ್ಕೆ ಇಳಿಸಿ ಆದೇಶಿಸಿದೆ.
ಕೆಲಸದ ಸ್ಥಳದಲ್ಲಿ ಅಧಿಕಾರಿಯೊಬ್ಬರು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಒಂದು ಗಂಭೀರ ಲೈಂಗಿಕ ದೌರ್ಜನ್ಯದ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ಸರಕಾರ ಅಧಿಕಾರಿಗೆ ದಂಡನೆ ವಿಧಿಸಿದ ಒಂದೇ ತಿಂಗಳ ಅಂತರದಲ್ಲಿ ಸರಕಾರವೇ ದಂಡನೆಗೆ ಒಳಗಾದ ಅಧಿಕಾರಿಗೆ ಉನ್ನತ ಹುದ್ದೆಗೆ ನೇಮಕ ಮಾಡಿ ಆದೇಶಿರುವುದು ಆಶ್ಚರ್ಯ ಎಂದೇ ಹೇಳಬೇಕು.

ಮಹಿಳಾ ಉಸ್ತುವಾರಿ ಕ್ಷೇತ್ರದಲ್ಲೇ ಹೀಗಾದರೇ?
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನಪರಿಷತ್ತಿನಲ್ಲಿ ಸಿ.ಟಿ ರವಿ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ್ದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿರುವ ದ್ರೋಹವೆಂದು ಕಣ್ಣೀರು ಸುರಿಸಿದ್ದ ಸಚಿವೆ ತನ್ನ ಉಸ್ತುವಾರಿ ಕ್ಷೇತ್ರದಲ್ಲೇ ಮಹಿಳಾ ಪೀಡಕ ಅಧಿಕಾರಿಗೆ ಭಡ್ತಿ ನೀಡಿರುವುದು ಎಷ್ಟು ಸರಿ? ಹೇಳುವುದೊಂದು, ಮಾಡುವುದೊಂದು? ಅನ್ನುವುದು ಇದಕ್ಕೆನಾ?
ದಂಡನೆಗೆ ಒಳಗಾದ ಅಧಿಕಾರಿ ಡಾ. ಅಶೋಕ ಹೆಚ್. ಇವರು ಎನ್ ಎಂ ಸಿ ಇಲ್ಲವೇ ಎಂ ಸಿ ಐ ಯಿಂದ ಮಾನ್ಯತೆ ಪಡೆದ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಪಿಜಿ) ಮಾಡಿದವರಲ್ಲ. ಈ ಕಾರಣಕ್ಕೆ ಉನ್ನತ ಹುದ್ದೆಗೇರುವ ಯಾವ ಅವಕಾಶವೂ ನಿಯಮಾವಳಿಗಳ ಪ್ರಕಾರ ಇವರಿಗೆ ಇಲ್ಲ. ಆದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಶೇಷ ಆಸಕ್ತಿ ವಹಿಸಿ ಭಡ್ತಿ ನೀಡುವ ಆದೇಶ ಹೊರಡಿಸಿರುವುದು ಕೆಲವೊಂದು ಸಂಶಯಗಳಿಗೆ ಕಾರಣವಾಗಿದೆ.