45 ಮಂದಿ ರೌಡಿ ಶೀಟರ್ ಗಳು ಗಡೀಪಾರು ; ಗೂಂಡಾ ಕಾಯ್ದೆ ಹಾಕಲು ಚಿಂತನೆ

ರಾಜ್ಯ

ಗಂಭೀರ ಪ್ರಕರಣದ ಕೆಲವು ಅಪರಾಧಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಗಡೀಪಾರು ಮಾಡಿದ ಪೊಲೀಸ್ ಆಯುಕ್ತರು

ಹುಬ್ಬಳ್ಳಿ -ಧಾರವಾಡ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿ-ಧಾರವಾಡದ 45 ಮಂದಿ ಅಪರಾಧಿಗಳನ್ನು ವಿವಿಧ ಜಿಲ್ಲೆಗೆ ಆರು ತಿಂಗಳ ಕಾಲ ಗಡೀಪಾರು ಮಾಡಿ ಆದೇಶಿಸಿದ್ದಾರೆ.

ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಕಳ್ಳತನ, ಹಲ್ಲೆ, ದೊಂಬಿ, ಮಾನಭಂಗ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರನ್ನು ಗುರುತಿಸಿ 45 ಜನರನ್ನು ಬೀದರ್, ಕಲಬುರಗಿ, ಯಾದಗಿರಿ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಹಲವರನ್ನು ಗಡಿಪಾರು ಮಾಡಲು ಯೋಜಿಸಲಾಗಿದೆ. ಕೆಲವರು ನ್ಯಾಯಾಂಗ ವಶದಲ್ಲಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ಪಟ್ಟಿ ಸಿದ್ಧಪಡಿಸಲಾಗುವುದು. ಕೆಲವರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಶಶಿಕುಮಾರ್ ಈ ಹಿಂದೆ ಮಂಗಳೂರು ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು.