ಮುಸ್ಲಿಮರು ಜಿಹಾದಿಗಳು ಅನ್ನುವವರೇ ಕರಾವಳಿಯ ಈ ಮನಕಲಕುವ ಘಟನೆಯನ್ನೊಮ್ಮೆ ಓದಿ
ಮುಸ್ಲಿಂ ಧರ್ಮಗುರುಗಳು ಜಿಹಾದಿಗಳು, ಮತಾಂತರ ಮಾಡುವವರು ಎಂದು ಒಂದು ವರ್ಗದ ಬ್ರೈನ್ ವಾಶ್ ಮಾಡಿ ರಾಜಕಾರಣದ ಲಾಭ ಪಡೆಯಲು ಯತ್ನಿಸುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಮದರಸಗಳು ಮಾನವೀಯತೆಯ ಮುಖವನ್ನು ಕಲಿಸುತ್ತದೆಯೇ ಹೊರತು, ಬೇರೇನೂ ಇಲ್ಲ. ಅಲ್ಲಿಯೂ ಕೆಲವು ಮತೀಯ ಶಕ್ತಿಗಳು ಭಯೋತ್ಪಾದನೆ ಕಲಿಸುತ್ತಾರೆ ಎಂದು ಇತರರನ್ನು ನಂಬಿಸುವ ಕೆಲಸ ಮಾಡಿಸುತ್ತಾರೆ. ಮೆದುಳನ್ನು ಅಡವಿಟ್ಟ ಮಂದಿ ಇದೇ ನಿಜವೆಂದು ಡಂಗುರ ಸಾರುತ್ತಾರೆ. ಆದರೆ ಕರಾವಳಿಯಲ್ಲಿ ನಡೆದ ಮನಕಲಕುವ ಕಥೆಯೊಂದು ಎಲ್ಲರ ಕಣ್ಣು ತೆರೆಸಬೇಕಾಗಿದೆ. ಹಿಂದೂ ಸಹೋದರನಿಗೆ ಆತನ ಬಾಂಧವರೇ ನೆರವಿಗೆ ಬಂದಿಲ್ಲ. ಬದಲಾಗಿ ಗಡ್ಡ, ಮುಂಡಾಸು ಧರಿಸಿದ ಧಾರ್ಮಿಕ ಗುರುವೊಬ್ಬರು ನೆರವಿಗೆ ಬರುವ ಮೂಲಕ ಕರಾವಳಿಯ ಸೌಹಾರ್ದತೆಗೆ ಮೆರುಗನ್ನು ಹೆಚ್ಚಿಸಿದ್ದಾರೆ. ಜೊತೆಗೆ ಹಿಂದೂ -ಮುಸ್ಲಿಂ ಎಂದು ಬಡಿದಾಡುವವರ ಕಣ್ಣು ತೆರೆಸಿದ್ದಾರೆ. ಯುವ ಲೇಖಕರಾದ ಇಸ್ಮತ್ ಪಜೀರ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ಕೆ.ಸಿ ರೋಡ್ ಶಾರದಾ ವಿದ್ಯಾಲಯದ ಬಳಿಯ ಹಿಂದೂ ವ್ಯಕ್ತಿಯೊಬ್ಬರು ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಅವರು ಹೈನುಗಾರಿಕೆ ವೃತ್ತಿ ಮಾಡುತ್ತಿದ್ದರು. ಅವರ ಬಳಿ ಒಳ್ಳೆಯ ಹಾಲು ಕೊಡುವ ಹದಿನಾಲ್ಕರಷ್ಟು ಒಳ್ಳೆಯ ತಳಿಯ ಹಸುಗಳಿದ್ದವು. ಅವು ಕೊಡುತ್ತಿದ್ದ ಹಾಲೇ ಈ ಕುಟುಂಬದ ಆಧಾರ ಸ್ತಂಭ ವಾಗಿತ್ತು. ಈ ಹಸುವಿನ ವ್ಯಾಪಾರ ಮಾಡಲು ಬ್ಯಾಂಕ್ ನಿಂದ ಸಾಲವನ್ನು ಮಾಡಿದ್ದರು.
ನಲಿನಲಿಯುತ್ತಾ ಇದ್ದ ಈ ಕುಟುಂಬದ ಆಧಾರ ಸ್ತಂಭ ವಾಗಿದ್ದ ಯಜಮಾನನಿಗೆ ವಿಪರೀತ ಸೊಂಟ ನೋವು ಆರಂಭವಾಗಿತ್ತು. ಕೊನೆಗೆ ಅದು ಡಿಸ್ಕ್ ಸಂಬಂಧಿತ ಕಾಯಿಲೆ ಎಂದು ತಿಳಿದು ಬಂತು. ಹೋಗದ ಆಸ್ಪತ್ರೆ ಇಲ್ಲ, ಭೇಟಿಯಾಗದ ವೈದ್ಯರಿಲ್ಲ, ಎಷ್ಟೇ ಔಷಧಿ ಮಾಡಿದರೂ ಡಿಸ್ಕ್ ಖಾಯಿಲೆ ಗುಣವಾಗಲೇ ಇಲ್ಲ. ದೈನಂದಿನ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ಬಂದು ತಲುಪಿದರು. ಶಾರದಾ ವಿದ್ಯಾಲಯದ ಕೆಲಸವೂ ಹೋಯಿತು. ಜೊತೆಗೆ ಹಾಲು ಕೊಡುತ್ತಿದ್ದ ಹಸುಗಳು ಒಂದೊಂದಾಗಿ ಖಾಯಿಲೆಗೆ ತುತ್ತಾಗಿ ಪ್ರಾಣ ಬಿಟ್ಟವು. ದಿಕ್ಕೇ ತೋಚದಂತಾಯಿತು. ಇತ್ತ ಸಾಲದ ಕಂತು ಕಟ್ಟಲಾಗದ ಪರಿಸ್ಥಿತಿ, ಮನೆ ಜಪ್ತಿಯ ನೋಟಿಸ್. ಒಂದೊಂದಾಗಿ ಸಮಸ್ಯೆ ಬಂಡೆಕಲ್ಲಿನಂತೆ ಎರಗಿದವು. ಸ್ಥಳೀಯ ಕ್ರಿಕೆಟ್ ತಂಡದವರು ಕೊಟ್ಟ ಕಿಟ್ ಅವರ ಹಸಿವನ್ನು ನೀಗಿಸುತ್ತಿತ್ತು. ಮನೆಯಲ್ಲಿ ಕತ್ತಲೆಯೇ ಆವರಿಸಿತು. ಪುಟ್ಟ ಮಗಳು ತಂದೆಯ ಸ್ಥಿತಿ ಕಂಡು ಕಣ್ಣೀರು ಹಾಕುವಂತಾಯಿತು. ಆ ಮಗಳ ಬೇಕು ಬೇಡಗಳನ್ನು ತೀರಿಸಲು ಈ ತಂದೆಗೆ ಸಾಧ್ಯವಾಗಲೇ ಇಲ್ಲ.
ಕೊನೆಗೆ ತನ್ನ ಈ ಯಾತನಾಮಯ ಪರಿಸ್ಥಿತಿಯ ಬಗ್ಗೆ ಕೆ.ಸಿ ರೋಡ್ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಯವರಲ್ಲಿ ವಿಷಯ ಪ್ರಸ್ತಾಪಿಸಿದ್ದರು. ನೆರವಿಗೆ ಬರುವುದರಲ್ಲಿ ಮುಸಲ್ಮಾನರು ಯಾವತ್ತಿದ್ದರೂ ಫಸ್ಟ್. ಈ ನಂಬಿಕೆಯಿಂದಲೇ ತನ್ನ ಕಷ್ಟವನ್ನು ತೋಡಿಕೊಂಡಿದ್ದರು. “ನನಗೀಗ ಬೇರೆ ದಾರಿಯಿಲ್ಲ. ನಾನು ನನ್ನ ಕಿಡ್ನಿ ಮಾರಲು ತೀರ್ಮಾನಿಸಿರುವೆ. ನಿಮ್ಮಲ್ಲಿ ಯಾರಿಗಾದರೂ ಕಿಡ್ನಿಯ ಅವಶ್ಯಕತೆ ಇದ್ದರೆ ತಿಳಿಸಿ ಎಂದು ಮುಗ್ಧವಾಗಿ ಹೇಳಿದ್ದರು. ಒಟ್ಟಾರೆ ಅವರ ಪರಿಸ್ಥಿತಿ ತಿಳಿದ ಸಖಾಫಿ ಉಸ್ತಾದರು ತನ್ನ ಜಮಾಅತಿನ ವಾಟ್ಸಾಪ್ ಗ್ರೂಫಿನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಉಸ್ತಾದರು ತಾನೇ ಕೈಯಾರೆ ಒಂದು ಸಾವಿರ ರೂಪಾಯಿ ಬರೆದರು. ಉಸ್ತಾದರ ಮನವಿಗೆ ಸ್ಪಂದಿಸಿದ ಜಮಾಅತಿಗರು ಒಂದೇ ದಿನದಲ್ಲಿ ಮೂವತ್ತು ಸಾವಿರ ರೂಪಾಯಿ ಸಂಗ್ರಹಿಸಿ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
ಇಂತಹ ಘಟನೆಗಳು ದಿನನಿತ್ಯ ನಡೆಯುವಂತಹದ್ದೇ. ಆದರೆ ಅದು ಯಾವುದೂ ಬೆಳಕಿಗೆ ಬರುವುದೇ ಇಲ್ಲ. ಹಿಂದೂ ನಾವೆಲ್ಲ ಒಂದು ಅನ್ನುವುದು ಕೇವಲ ಬಾಯಿಮಾತಿಗೆ, ಓಟು ಪಡೆಯಲು ಮಾತ್ರ ಸೀಮಿತವಾಗುತ್ತಿದೆ. ಇಲ್ಲಿ ಮುಸಲ್ಮಾನನೊಬ್ಬನಿಗೆ ಹಿಂದೂ ಬಾಂಧವರು ನೆರವಾಗುತ್ತಾರೆ. ಹಿಂದೂ ವಿಗೆ ಮುಸಲ್ಮಾನರು ನೆರವಾಗುತ್ತಾರೆ. ಆದರೆ ಕೆಲವೇ ಕೆಲವು ಕೋಮುವಾದಿಗಳು ಇಂತಹ ಸೌಹಾರ್ದ ವಾತಾವರಣವನ್ನು ಕೆಡಿಸುತ್ತಾರೆ. ಧರ್ಮ ಧರ್ಮ ಎಂದೇಳಿ ಬಡಿದಾಡುತ್ತಾರೆ. ಹೆಣ್ಣಿನ ಕಣ್ಣು ವೈರಲ್ ಆಗುವಷ್ಟು ಇಂತಹ ಮಾನವೀಯ ಸ್ಪಂದನೆಗಳ ಘಟನೆಗಳು ವೈರಲ್ ಆಗುವುದಿಲ್ಲ ಅನ್ನುವುದೇ ದುರ್ದೈವ. ಮನುಷ್ಯ ಮನುಷ್ಯರಾಗಿ ಬಾಳೋಣ. ಯಾವೊಂದು ಜಾತಿ, ಧರ್ಮಗಳು ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಮಾನವೀಯತೆಯನ್ನು ಕಲಿಸುತ್ತದೆ. ಈ ಘಟನೆಯೇ ಇದಕ್ಕೊಂದು ಅಪ್ಪಟ ಉದಾಹರಣೆ.
