ಹೈಕಮಾಂಡ್ ಬುಲಾವ್ ಮೇರೆಗೆ ಕಾವು ಹೇಮನಾಥ ಶೆಟ್ಟಿ ದೆಹಲಿಗೆ.

ಕರಾವಳಿ

ನಾಮಪತ್ರ ಸಲ್ಲಿಕೆಗೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇರುವಾಗ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಎ.ಹೇಮನಾಥ ಶೆಟ್ಟಿ ಕಾವು,ದಿಢೀರ್ ಆಗಿ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಯಾವ ಕಾರಣಕ್ಕೆ ವರಿಷ್ಠರಿಂದ ಬುಲಾವ್ ಬಂದಿದೆ ಎಂಬುದು ತಿಳಿದಿಲ್ಲ.ಹಿಂದಿನ ಮೂರು ಚುನಾವಣೆಗಳಲ್ಲೂ ಹೇಮನಾಥ ಶೆಟ್ಟಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ತಮಗೇ ಟಿಕೆಟ್‌ ನೀಡಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದರು. ಈ ಮಧ್ಯೆ ಇವರ ದಿಢೀರ್‌ ದಿಲ್ಲಿ ಭೇಟಿ ಚರ್ಚೆಗೀಡಾಗಿದೆ.

ಕಾಂಗ್ರೆಸ್‌ ಸೇರಿದ್ದ ಶಕುಂತಳಾ ಟಿ. ಶೆಟ್ಟಿ ಅವರಿಗೆ ಅವಕಾಶ ನೀಡಿದ್ದಾಗಲೂ ಹೇಮನಾಥ ಶೆಟ್ಟರ ಹೆಸರು ಚಾಲ್ತಿಯಲ್ಲಿತ್ತು. 2018 ರಲ್ಲಿ ನಡೆಸಿದ ಪ್ರಯತ್ನವೂ ಕೈಗೂಡಿರಲಿಲ್ಲ. ಭಿನ್ನಮತದ ಲಕ್ಷಣ ತೋರಿದಾಗ ಹೇಮನಾಥ ಶೆಟ್ಟಿ ಅವರಿಗೆ ವರಿಷ್ಠರು ಕರೆಸಿ ಮಾತನಾಡಿಸಿದ್ದರು. ಅದಾಗ್ಯೂ ಹೇಮನಾಥ ಶೆಟ್ಟಿ ಹಾಗೂ ಶಕುಂತಳಾ ಟಿ. ಶೆಟ್ಟಿ ಗುಂಪಿನ ನಡುವಿನ ಮುನಿಸು ಸಂಪೂರ್ಣ ತಣಿದಿರಲಿಲ್ಲ. ಈ ಚುನಾವಣೆ ವೇಳೆಯಲ್ಲಿಯೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಎರಡನೇ ಪಟ್ಟಿ ಪ್ರಕಟಿಸುವ ದಿನಗಳು ಹತ್ತಿರವಾಗಿದ್ದು, ಒಂದುವೇಳೆ ಅವಕಾಶ ಸಿಗದಿದ್ದರು ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಎಂದು ತಾಕೀತು ಮಾಡುವುದಕ್ಕೆ ವರಿಷ್ಠರು ಕರೆದಿರಬಹುದೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.ಹೇಮನಾಥ ಶೆಟ್ಟಿ ಶುಕ್ರವಾರ ಸಂಜೆ ದಿಲ್ಲಿ ತಲುಪಿದ್ದು ಶನಿವಾರ ಪಕ್ಷದ ಪ್ರಮುಖರನ್ನು ಭೇಟಿಯಾಗುವರು.

ಶಕುಂತಳಾ ಟಿ ಶೆಟ್ಟಿ,ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿರುವ ಉದ್ಯಮಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಕೂಡ ಪ್ರಬಲ ಆಕಾಂಕ್ಷಿಗಳು. ಧನಂಜಯ ಅಡ್ವಂಗಾಯ, ಭರತ್‌ ಮುಂಡೋಡಿ ಹೆಸರೂ ಇದೆ. ಉಳಿದಂತೆ ಸತೀಶ್‌ ಕೆಡೆಂಜಿ, ಡಾ| ರಾಜಾರಾಂ, ಪ್ರತಿಭಾ ಕುಳಾಯಿ ಅವರ ಹೆಸರು ಚರ್ಚೆಯಲ್ಲಿದೆ. ಪಕ್ಷದವರೇ ಎಂಬ ಲೆಕ್ಕಾಚಾರ ಹಾಕಿದರೆ ಶಕುಂತಲಾ ಶೆಟ್ಟಿ, ಹೇಮನಾಥ ಶೆಟ್ಟಿ ಸೇರಿದಂತೆ ಯಾರಾದರೊಬ್ಬರನ್ನು ಆರಿಸಬಹುದು.ಮೂಲ-ವಲಸಿಗರೆಂಬ ಬೇಧವಿಲ್ಲದೇ ಹೊಸ ಅಭ್ಯರ್ಥಿಗೆ ಹೈಕಮಾಂಡ್‌ ಮಣೆ ಹಾಕಿದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಬಳಗದ ಅಶೋಕ್‌ ಕುಮಾರ್‌ಗೂ ಅವಕಾಶ ಸಿಗಬಹುದು. ಹೀಗಾಗಿ ಟಿಕೆಟ್‌ ಘೋಷಣೆಯ ಬಳಿಕ ಉದ್ಭವಿಸಬಹುದಾದ ಬಿಕ್ಕಟ್ಟು ಅನ್ನು ಪೂರ್ವದಲ್ಲೇ ಶಮನಗೊಳಿಸುವ ತಂತ್ರವೂ ಇದಾಗಿದೆ ಎನ್ನಲಾಗುತ್ತಿದೆ