ಹತ್ತು ಲಕ್ಷ ರೂಪಾಯಿಗೆ ಗಂಡನ ಕಿಡ್ನಿ ಮಾರಿಸಿ, ಪ್ರಿಯಕರನ ಜೊತೆ ಪರಾರಿಯಾದ ಚಾಲಾಕಿ ಮಹಿಳೆ.!

ರಾಜ್ಯ

ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುತ್ತಿಲ್ಲ… ನಿನ್ನ ಕಿಡ್ನಿ ಮಾರು ಎಂದು ಒತ್ತಾಯಿಸುತ್ತಿದ್ದ ಮಹಿಳೆಯೊಬ್ಬಳು ಕಿಡ್ನಿ ಮಾರಿದ ಹಣ ಕೈಗೆ ಬರುತ್ತಲೇ ತನ್ನ ಪ್ರಿಯಕರನ ಜೊತೆ ರಾತ್ರೋರಾತ್ರಿ ಪರಾರಿಯಾಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 10 ಲಕ್ಷ ರೂಪಾಯಿಗೆ ಕಿಡ್ನಿ ಮಾರಿದ ಪತಿ ಈಗ ತನ್ನ ಪತ್ನಿಯ ಕುಕೃತ್ಯದ ವಿರುದ್ಧ ಮನನೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಸಂತ್ರಸ್ತ ವ್ಯಕ್ತಿ ವೃತ್ತಿಯಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈತನಿಗೆ ಓರ್ವ ಮಗಳು ಕೂಡ ಇದ್ದಳು. ಮಗಳ ವಿದ್ಯಾಭ್ಯಾಸದ ವಿಚಾರ ಮುಂದಿಟ್ಟುಕೊಂಡು ಪತಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಮಹಿಳೆ, ನಿನ್ನ ಆದಾಯ ಸಾಲುತ್ತಿಲ್ಲ. ಮಗಳ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಹಣಬೇಕು ಎಂದು ಒತ್ತಡ ಹೇರುತ್ತಿದ್ದಳು. ಹೀಗಿರುವಾಗ ಕಿಡ್ನಿ ಮಾರಿದರೆ ಹಣ ಬರುತ್ತದೆ ಎಂಬ ವಿಚಾರ ಕೇಳಿ ತನ್ನ ಗಂಡನಿಗೆ ಕಿಡ್ನಿ ಮಾರುವಂತೆ ನಿತ್ಯ ಒತ್ತಡ ಹೇರುತ್ತಿದ್ದಳು. ಇವಳ ಹಿಂಸೆ ತಾಳಲಾರದೆ ಮತ್ತು ಮಗಳ ಭವಿಷ್ಯದ ನಿಟ್ಟಿನಲ್ಲಿ ಯೋಚಿಸಿ ಒಂದು ದಿನ ಗಂಡ ಕಿಡ್ನಿ ಮಾರುತ್ತೇನೆ ಎಂದು ಒಪ್ಪಿಕೊಂಡಿದ್ದ.

ಒಂದು ತಿಂಗಳ ನಂತರ, ಒಂದು ಮೂತ್ರಪಿಂಡವನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅದರಂತೆ ಸಂತ್ರಸ್ತ ವ್ಯಕ್ತಿಗೆ 10 ಲಕ್ಷ ರೂಪಾಯಿ ಹಣ ಕೂಡ ಸಂದಾಯವಾಗಿತ್ತು. ಆದರೆ ಹಣ ಕೈ ಸೇರುತ್ತಿದ್ದಂತೆಯೇ ನಾಟಕ ಶುರು ಮಾಡಿಕೊಂಡಿದ್ದ ಕಿಲಾಡಿ ಹೆಂಡತಿ ಈ ಹಣವನ್ನು ಬೆಳಿಗ್ಗೆ ಬ್ಯಾಂಕಿಗೆ ಜಮಾ ಮಾಡುತ್ತೇನೆ ಎಂದು ಹೇಳಿ ತನ್ನ ಬಳಿ ಇರಿಸಿಕೊಂಡಿದ್ದಾಳೆ. ಬಳಿಕ ನಡು ರಾತ್ರಿ ಹಣದೊಂದಿಗೆ ಮನೆಬಿಟ್ಟು ತನ್ನ ಫೇಸ್ ಬುಕ್ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ.