ಮಂಗಳದ ಪ್ರಸಿದ್ಧ ನಾಟಿ ವೈದ್ಯ, ಜನಪದ ವೈದ್ಯರತ್ನ, ಎಂ. ಬಿ ಶಿವಣ್ಣಗೌಡ ಗುರುವಾರದಂದು ವಿಧಿವಶರಾಗಿದ್ದಾರೆ.

ರಾಜ್ಯ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಪ್ರಸಿದ್ಧ ನಾಟಿ ವೈದ್ಯ ಎಂ.ಬಿ ಶಿವಣ್ಣಗೌಡ ನಿಧನರಾಗಿದ್ದಾರೆ. ಜನಪದ ವೈದ್ಯರತ್ನ, ನಾಟಿ ವೈದ್ಯ ಎಂದೇ ಖ್ಯಾತಿ ಪಡೆದಿದ್ದ ಎಂ.ಬಿ.ಶಿವಣ್ಣಗೌಡ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಣ್ಣಗೌಡ ಗುರುವಾರ ಮುಂಜಾನೆ 4.45ಕ್ಕೆ ದೈವಾಧೀನರಾಗಿದ್ದಾರೆ. ಕಳೆದ ನಾಲ್ಕೈದು ದಶಕಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿಯಲ್ಲಿ ಯಾವುದೇ ಪ್ರಚಾರವಿಲ್ಲದೇ ಯಶಸ್ಸು ಕಂಡಿದ್ದರು.

ಜನಪದ ವೈದ್ಯರತ್ನ ಎಂದೇ ಖ್ಯಾತಿ,
ದೇಶ, ವಿದೇಶಗಳಿಂದ ಔಷಧಿಗಾಗಿ ಜನ ಇವರ ಬಳಿ ಬರುತ್ತಿದ್ದರು. ಅನೇಕ ಗಣ್ಯರ ಆರೋಗ್ಯದ ಸಮಸ್ಯೆಗಳನ್ನು ತಮ್ಮ ನಾಟಿ ವಿದ್ಯೆಯ ಮೂಲಕ ಗುಣಪಡಿಸಿದ್ದ ಹೆಗ್ಗಳಿಕೆ ಇವರದ್ದಾಗಿತ್ತು.

ಪಾರಂಪರಿಕ ನಾಟಿ ಔಷಧಿ ನೀಡುತ್ತ ಸಾವಿರಾರು ಜನರ ಬದುಕಿಗೆ ಆಶಾಕಿರಣರಾಗಿದ್ದ ಶಿವಣ್ಣ ಗೌಡರಿಂದ ಅನೇಕ ವ್ಯಕ್ತಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಮಾಜಿ ಸಚಿವೆ ಮನೋರಮ ಮದ್ವರಾಜ್, ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಚಂದ್ರಶೇಖರ್ ಕಂಬಾರ್, ಮಾಜಿ ಸಚಿವ ಈಶ್ವರಪ್ಪ ಹಾಗೂ ಹೊರರಾಜ್ಯಗಳ ಹಾಗೂ ಹೊರರಾಷ್ಟ್ರದ ಅನೇಕರು ಇವರಿಂದ ಔಷಧಿ ಪಡೆದು ಗುಣ ಮುಖರಾಗಿದ್ದರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಇವರ ಸೇವೆಯನ್ನು ಮೆಚ್ಚಿದ್ದರು. ಮಲೆನಾಡಿನ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಸಮೀಪದ ರಾಮನಸರ ಮಂಗಳ ಎಂ.ಬಿ.ಶಿವಣ್ಣ ಗೌಡ ಅವರ ಸ್ವಗ್ರಾಮವಾಗಿದ್ದು, ಇಂದು ರಾಜ್ಯಾದ್ಯಂತ ಪಾರಂಪರಿಕ ನಾಟಿ ಔಷಧಿಗೆ ಈ ಊರು ಹೆಸರುವಾಸಿಯಾಗಿದೆ. ಕೈಕಾಲು ಮುರಿತ, ಬೆನ್ನು ನೋವು, ಮೂಳೆ ನೋವುಗಳಿಗೆ ಹಾಗೂ ಸಂಧಿ ನೋವುಗಳಿಗೆ ಇವರು ವಿಶೇಷವಾಗಿ ಚಿಕಿತ್ಸೆ ನೀಡುತ್ತಿದ್ದರು. ಇವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರೇ ಇವರಿಗೆ ಪ್ರಚಾರ ನೀಡುತ್ತಿದ್ದರು. ಸುಮಾರು ನಲವತ್ತು ವರ್ಷಗಳ ಕಾಲ ನಾಟಿ ಔಷಧಿಯನ್ನು ನೀಡಿ ಈ ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಎಂ.ಬಿ.ಶಿವಣ್ಣ ಗೌಡ ಅವರಿಗೆ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನಿಂದ ಜಾನಪದ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.