ಹದಿಹರೆಯದ ಯುವತಿಯರು ಹೈ -ಫೈ ಬದುಕಿಗೆ ಬಟ್ಟೆ ಬಿಚ್ಚುವ ದಂಧೆ ಮಂಗಳೂರಿನಲ್ಲಿ ಸಕ್ರೀಯ.!
✍️. ಇಸ್ಮತ್ ಪಜೀರ್
ಈ ಹೆಸರನ್ನು ಎಷ್ಟು ಮಂದಿ ಕೇಳಿದ್ದೀರೆಂದು ನಾನರಿಯೆ. ಆದರೆ ಇದರ ಹಕೀಕತ್ತು ಅರಿತರೆ ನೀವು ಬೆಚ್ಚಿ ಬೀಳುವುದು ಖಚಿತ. ನಾನು ನಮ್ಮ ಮಂಗಳೂರಿನ ಕತೆ ಮಾತ್ರ ಅರಿತು ಬಲ್ಲೆ. ಬೇರೆ ನಗರಗಳಲ್ಲಿ ಹೇಗೋ ನಾನರಿಯೆ. ನೇರವಾಗಿ ಹೇಳಬೇಕೆಂದರೆ ಇದೊಂದು ಮೈ ಮಾರಾಟ ದಂಧೆ. ಆದರೆ ಇದು ಬಡತನದ ಕಾರಣಕ್ಕಾಗಿ ನಡೆಸುವ Professional Prostitution ಅಲ್ಲ. ಮಂಗಳೂರು ನಗರದಲ್ಲಿ ಮಧ್ಯ ವಯಸ್ಕ, ಅಥವಾ ರಿಟೈರ್ಡ್ ( 60 ದಾಟಿದ) ಅನುಕೂಲಸ್ಥರಿಗೆ ಹಾಸಿಗೆ ಸುಖ ಕೊಡುವ ದಂಧೆಯಿದು.

ಮಂಗಳೂರು ನಗರ ಮತ್ತು ಹೊರವಲಯದ ಕೆಲ ಕಾಲೇಜು ವಿದ್ಯಾರ್ಥಿನಿಯರು ತಮ್ಮ ಲ್ಯಾವಿಶ್ ಬದುಕಿಗಾಗಿ ಮಧ್ಯ ವಯಸ್ಕ ಮತ್ತು ರಿಟೈರ್ಡ್ ಅನುಕೂಲಸ್ಥರ ಜೊತೆ ಹಾಸಿಗೆ ಹಂಚುವ ಈ ನೀಚ ವೃತ್ತಿಗೆ ಮಂಗಳೂರು ನಗರದಲ್ಲಿ ಸುಗರ್ ಡ್ಯಾಡಿ ಎಂಬ ಹೆಸರಿದೆ. ಹೊಸ ತಲೆಮಾರಿನ ಕೆಲ ಕಾಲೇಜು ಯುವತಿಯರಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಐ ಫೋನ್, ದುಬಾರಿ ಬೆಲೆಯ ಡ್ರೆಸ್ಸಸ್, ದುಬಾರಿ ವಾಚ್, ಆಭರಣ , ಸ್ಯಾಂಡಲ್ಸ್‌ನ ಕ್ರೇಝ್ ಇರುತ್ತೆ. ತಮ್ಮ ಶ್ರೀಮಂತ ಸಹಪಾಠಿಗಳಲ್ಲಿ ಅವುಗಳನ್ನೆಲ್ಲಾ ಕಂಡಾಗ ತಮಗೂ ಬೇಕೆನಿಸುತ್ತದೆ. ಆದರೆ ಮಧ್ಯಮ ವರ್ಗದ, ಬಡ ಹೆತ್ತವರಿಂದ ಅವೆಲ್ಲಾ ಕೊಡಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಶ್ರೀಮಂತ ವಯಸ್ಕರೊಂದಿಗೆ ಯಾವ ಬಾಹ್ಯ ರಿಸ್ಕೂ ಇಲ್ಲದೇ ಹಾಸಿಗೆ ಹಂಚಿಕೊಳ್ಳುವ ನೀಚ ಕೃತ್ಯ ಮಂಗಳೂರಲ್ಲಿ ನಡೆಯುತ್ತಿದೆ. ಈ ಹೆಣ್ಮಕ್ಕಳ್ಯಾರೂ ಲಾಡ್ಜಿಗೆ ಹೋಗುವುದಿಲ್ಲ. ಅನುಕೂಲಸ್ಥರ ಫ್ಲ್ಯಾಟ್‌ಗಳಿಗೆ ಅವರನ್ನು ಕರೆದುಕೊಂಡು ಹೋಗಲು ಇವರು ಬಯಸಿದಲ್ಲಿಗೆ ಕಾರು ಬರುತ್ತದೆ.

ಇನ್ನು ಕೆಲವು ಯುವತಿಯರು ಮನೆಯಲ್ಲಿ “ಇಂದು ರಾತ್ರಿ ಬರುವುದಿಲ್ಲ, ಗೆಳತಿಯ ಮನೆಯಲ್ಲಿ ಕೂತು ಕಂಬೈನ್ ಸ್ಟಡಿಸ್ ಮಾಡುತ್ತೇನೆಂದು ಹೆತ್ತವರಿಗೆ ಹೇಳಿ ಮನೆಯಿಂದ ಹೊರಟು ಅನುಕೂಲಸ್ಥ ವೃದ್ಧ ವಿಟ ಪುರುಷರ ಜೊತೆ ಟ್ರಿಪ್ ಹೋಗುತ್ತಾರೆ. ಒಂದು ಬೆಳಿಗ್ಗೆ ಮನೆಯಿಂದ ಹೊರಟರೆ ಮಾರನೇ ದಿನ ಸಂಜೆ ಕಾಲೇಜು ತರಗತಿ ಮುಗಿಸಿ ವಾಪಸಾಗುವ ಹೊತ್ತಿಗೆ ಮತ್ತೆ ಮನೆ ತಲುಪುತ್ತಾರೆ. ಇಪ್ಪತ್ತೈದು ಸಾವಿರ, ಐವತ್ತು ಸಾವಿರವನ್ನು ಒಂದು ಊಟದ ದುಡ್ಡಿನಂತೆ ಉಡಾಯಿಸುವ ಶ್ರೀಮಂತರಿಗೆ ಇದೆಲ್ಲಾ ದೊಡ್ಡ ಸಂಗತಿಯೇನಲ್ಲ. ಸುಗರ್ ಡ್ಯಾಡಿಗೆ ಕಾಲೇಜು ಯುವತಿಯರನ್ನು ಸೆಟ್ ಮಾಡಿ ಕೊಡುವ ಪಿಂಪ್‌ಗಳು ಮಂಗಳೂರಲ್ಲಿದ್ದಾರೆ.

ಹೆಣ್ಣು ಹೆತ್ತವರೇ.. ನಿಮ್ಮ ಮಕ್ಕಳ ಕೈಯಲ್ಲಿ ದುಬಾರಿ ಫೋನ್, ಡ್ರೆಸ್ಸಸ್, ಸ್ಯಾಂಡಲ್ಸ್, ಫ್ಯಾನ್ಸಿ ಐಟಂಸ್ ಕಂಡರೆ ಕೂಲಂಕುಷವಾಗಿ ತನಿಖೆ ಮಾಡಿ. ಅವರು ಎಲ್ಲದಕ್ಕೂ ನನ್ನ ಫ್ರೆಂಡ್ ಗಿಫ್ಟ್ ಮಾಡಿದ್ದೆನ್ನಬಹುದು. ಯಾವ ಫ್ರೆಂಡೂ ದುಬಾರಿ ಬೆಲೆಯ ವಸ್ತುಗಳನ್ನು ಸುಮ್ಮನೆ ಗಿಫ್ಟ್ ಕೊಡುವುದಿಲ್ಲ. ನಿಮ್ಮ ಮಕ್ಕಳ ಅಟೆಂಡೆನ್ಸ್ ಕಾಲ ಕಾಲಕ್ಕೆ ಸರಿಯಾಗಿ ಚೆಕ್ ಮಾಡುತ್ತಿರಿ. ಪ್ರತೀ ಸಬ್ಜೆಕ್ಟ್ ಕ್ಲಾಸ್‌ನ ಅಟೆಂಡೆನ್ಸ್ ಚೆಕ್ ಮಾಡುತ್ತಿರಿ. ಕ್ಲಾಸಿಂದ ಹೊರಟ ಹೊತ್ತು ಮತ್ತು ಮನೆಗೆ ತಲುಪುವ ಹೊತ್ತನ್ನೂ ಗಮನಿಸಿ. ಕಂಬೈನ್ ಸ್ಟಡಿ ಮಾಡಲೇಬೇಕೆಂದಿಲ್ಲ. ಅವರವರೇ ಸ್ವಂತ ಓದಿದರೆ ಸಾಕು. ಲೈಬ್ರರಿಗೆ ಹೋಗಿ ಬರುತ್ತೇನೆಂದು ರಜಾದಿನಗಳಲ್ಲಿ ಹೊರಟರೆ ನೀವೇ ಕರೆದುಕೊಂಡು ಹೋಗಿ ಕರೆದುಕೊಂಡು ಬನ್ನಿ. ಇಂತಹ ದಂಧೆ ಬೇರೆ ವೇಶ್ಯಾವಾಟಿಕೆಯಂತೆ ನಡೆಯುವುದಲ್ಲ. ಇದರ ಹೆಡೆ ಮುರಿ ಕಟ್ಟಲು ಪೋಲೀಸರಿಗೋ, ಕಾನೂನಿಗೋ ಸಾಧ್ಯವಿಲ್ಲ. ಇಂತಹದ್ದನ್ನು ತಡೆಯಲು ಹೆತ್ತವರಿಗೆ ಮಾತ್ರ ಸಾಧ್ಯ.
(ಇದು ಐರೋಪ್ಯ ರಾಷ್ಟ್ರಗಳಲ್ಲಿ ಇದು ಹಳೇ ದಂಧೆ)
