ಬಂಟ್ವಾಳ ತಾಲೂಕಿಗೊಳಪಟ್ಟ ಪೊಳಲಿ ಅಡ್ಡೂರು ಸೇತುವೆ ಬಿರುಕುಗೊಂಡ ಪರಿಣಾಮ ಕಳೆದ ಹಲವಾರು ತಿಂಗಳುಗಳಿಂದ ಈ ಸೇತುವೆಯಲ್ಲಿ ಬಸ್ಸು, ಲಾರಿ ಸೇರಿದಂತೆ ಘನ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿತ್ತು. ಕೈಕಂಬ -ಪೊಳಲಿ- ಬಿಸಿರೋಡ್ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಅಡ್ಡೂರಿನವರೆಗೂ ಮಾತ್ರ ಸಂಚರಿಸುತ್ತಿದ್ದು, ಆ ನಂತರ ಪ್ರಯಾಣಿಕರು ಸೇತುವೆಯಲ್ಲಿ ನಡೆದುಕೊಂಡು ಹೋಗಿ ಸೇತುವೆಯ ಇನ್ನೊಂದು ಬದಿಯಲ್ಲಿ ನಿಂತ ಬಸ್ಸು ಏರಿ ಪ್ರಯಾಣಿಸಲೇಬೇಕಾದ ಕಾರಣ ಈ ಭಾಗದ ಜನರು ತುಂಬಾ ತೊಂದರೆಗೆ ಒಳಗಾಗುತ್ತಿದ್ದರು. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಇದರಿಂದಾಗಿ ತೀವ್ರ ತೊಂದರೆ ಪಡುತ್ತಿದ್ದರು.

ಸ್ಥಳೀಯ ಶಾಸಕರಾದ ರಾಜೇಶ್ ನಾಯ್ಕ್ ಭೇಟಿ ನೀಡಿ ಈ ಸಂಬಂಧ ಇಲಾಖಾ ಅಧಿಕಾರಿಗಳಿಗೆ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದರೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಪಾಯದಲ್ಲಿರುವ ಪೊಳಲಿ -ಅಡ್ಡೂರು ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಇತಿಹಾಸ ಪ್ರಸಿದ್ಧ ಪೊಳಲಿ ಜಾತ್ರೋತ್ಸವ ಮುನ್ನ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಕಾಮಗಾರಿಗೆ ಚಾಲನೆ ನೀಡಿದ್ದರು.

ರಾಜ್ಯ ಸರಕಾರವು ಅಡ್ಡೂರು -ಪೊಳಲಿ ಸೇತುವೆ ದುರಸ್ತಿ ಕಾಮಗಾರಿಗೆ ಈಗಾಗಲೇ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಶ್ರೀಘ್ರವಾಗಿ ಮುಗಿಸಲು ಗುತ್ತಿಗೆದಾರರು ನದಿಯ ಎರಡು ಬದಿಗೆ ಮಣ್ಢು ಹಾಕಿ ಕಾಮಗಾರಿಯನ್ನು ಆರಂಭಿಸಿದ್ದರು. ಆದರೆ ಇಂದು ಸಂಜೆ ಕಾಮಗಾರಿ ನಡೆಯುತ್ತಿದ್ದ ವೇಳೆ ದುರಂತವೊಂದು ಸಂಭವಿಸಿದ್ದು, ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಕಾಮಗಾರಿ ನಡೆಸುತ್ತಿದ್ದ ವೇಳೆ ನದಿಯ ಬದಿಯಲ್ಲಿ ಮಣ್ಣು ಹಾಕಿದ್ದ ಜಾಗದಲ್ಲಿ ಸಂಚರಿಸುತ್ತಿದ್ದ ಕಾಮಗಾರಿ ನಡೆಸುತ್ತಿದ್ದವರ ವಾಹನವೊಂದು ನದಿಯಲ್ಲಿ ಮುಳುಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇಲ್ಲವಾದರೆ ದೊಡ್ಡ ದುರಂತಕ್ಕೆ ಕಾರಣವಾಗುತ್ತಿತ್ತು. ಗುತ್ತಿಗೆದಾರ ಕಂಪನಿಗಳು ಶ್ರೀಘ್ರ ಕಾಮಗಾರಿಗೆ ಕೆಲವೊಂದು ಮುನ್ನಚ್ಚರಿಕೆ ಕ್ರಮ ವಹಿಸದಿರುವುದು, ಜೀವದ ಬೆಲೆಗೆ ಗಮನ ಕೊಡದೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುವ ಕಾರಣ ಇಂತಹ ಅವಘಡಗಳು ಸಂಭವಿಸಲು ಕಾರಣವಾಗಿದೆ. ಈ ಹಿಂದೆಯೂ ಜಿಲ್ಲೆಯ ಹಲವು ಭಾಗಗಳಲ್ಲಿ ಗುತ್ತಿಗೆದಾರ ಕಂಪನಿಗಳ ನಿರ್ಲಕ್ಷ್ಯಕ್ಕೆ ಹಲವಾರು ಪ್ರಾಣಾಪಾಯಗಳು ನಡೆದಿರುವ ಘಟನೆಗಳು ವರದಿಯಾಗಿತ್ತು. ಇನ್ನಾದರೂ ಗುತ್ತಿಗೆದಾರ ಕಂಪನಿಗಳು ಜನರ ಜೀವದ ಮೇಲೆ ಚೆಲ್ಲಾಟವಾಡದೆ ಸಮರ್ಪಕ ರೀತಿಯಲ್ಲಿ ಕಾಮಗಾರಿ ನಡೆಸುವ ಕೆಲಸ ಮಾಡಲಿ. ದುರಂತದ ಬಗ್ಗೆ ಎಚ್ಚೆತ್ತುಕೊಳ್ಳಲಿ.
