✍️. ಕಾಮ್ರೇಡ್ ಮುನೀರ್ ಕಾಟಿಪಳ್ಳ
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಪೂರ್ತಿಯಾಗಿ ದಂಧೆಕೋರರ ಸ್ವರ್ಗವಾಗಿ ಬಿಟ್ಟಿದೆ. ಅದರಲ್ಲೂ, ಮರಳು ಮಾಫಿಯಾದವರನ್ನು ಹೇಳುವವರು, ಕೇಳುವವರು ಇಲ್ಲ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಪೊಲೀಸ್ ಕಮೀಷನರೇಟ್ ಮರಳು ದಂಧೆಕೋರರ ಜೊತೆಗೆ ನೇರವಾಗಿ ಗುರುತಿಸಿಕೊಂಡರೆ, ಜಿಲ್ಲಾಧಿಕಾರಿ ಕಚೇರಿ ಮೌನ ಶಾಮೀಲಾತಿ ಹೊಂದಿದೆ. ದೂರು ನೀಡಿದವರ ಮಾಹಿತಿಯನ್ನು ಪೂರ್ಣ ವಿಳಾಸದೊಂದಿಗೆ ಮರಳು ದಂಧೆಕೋರರಿಗೆ ತಿಳಿಸಿ, ಅವರನ್ನು ಅಪಾಯಕ್ಕೊಡ್ಡುವ ಕಾರ್ಯವೂ ಮಂಗಳೂರಿನಲ್ಲಿದೆ. ಉಡುಪಿ ಪೊಲೀಸ್ ವರಿಷ್ಟಾಧಿಕಾರಿ, ಜಿಲ್ಲಾಧಿಕಾರಿಗಳು ನಿರ್ಬಂಧಿತ ಪ್ರದೇಶಗಳಲ್ಲಿ ಒಂದು ಹಿಡಿ ಮರಳು ತೆಗೆಯಲೂ ಅವಕಾಶ ಒದಗಿಸಿರುವುದು, ಮಂಗಳೂರಿನ ಮರಳು ದಂಧೆಕೋರರ ಪಾಲಿಗೆ ವರದಾನವಾಗಿದೆ. ಪ್ರತಿದಿನ ನೂರಾರು ಟಿಪ್ಪರ್ ಗಳು ಮಂಗಳೂರಿನ ನದಿಗಳಿಂದ ಅಕ್ರಮ ಮರಳು ಸಂಗ್ರಹಿಸಿ ಉಡುಪಿಗೆ ಸಾಗಾಟ ಮಾಡುತ್ತಿವೆ. ಬಂಪರ್ ಲಾಭಗಳಿಸುತ್ತಿವೆ. ಈ ಅಕ್ರಮದ ಪಾಲು ಮಂಗಳೂರು ಪೊಲೀಸ್ ಇಲಾಖೆಗೆ, ಜಿಲ್ಲಾಡಳಿತಕ್ಕೆ, ಸಲ್ಲ ಬೇಕಾದವರಿಗೆ ದೊಡ್ಡ ಗಂಟಾಗಿ ಸಲ್ಲಲ್ಪಡುತ್ತಿದೆ.
ಇದರಿಂದಾಗಿ ಮಂಗಳೂರಿನ ನದಿಗಳು ತನ್ನ ಸತ್ವ ಹಾಗೂ ನೀರಿಂಗಿಸುವ ಶಕ್ತಿ ಕಳೆದುಕೊಂಡರೆ, ಸೇತುವೆಗಳು, ಚೆಕ್ ಡ್ಯಾಂ ಗಳು ದುರ್ಬಲಗೊಳ್ಳುತ್ತಾ ಅಪಾಯಕ್ಕೀಡಾಗುತ್ತಿವೆ. ಮೂಲರಪಟ್ಣ, ಮಲವೂರು, ಅಡ್ಡೂರು, ಪೊಲಳಿ ಸೇತುವೆಗಳು ಕುಸಿದದ್ದು, ಬಿರುಕು ಬಿಟ್ಟದ್ದು ಸೇತುವೆಯ ಸುತ್ತ ಅನಿಯಂತ್ರಿತ ಮರಳುಗಾರಿಕೆಯ ಪರಿಣಾಮದಿಂದ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಬಿರುಕು ಬಿಟ್ಟ ಅಡ್ಡೂರು – ಪೊಳಲಿ ಸೇತುವೆ ಹಾಗೂ ಅಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ವೀಕ್ಷಣೆಗೆ ಬಂದ ಉಸ್ತುವಾರಿ ಸಚಿವರೂ ಇದೇ ಮಾತನ್ನು ಆಡಿದ್ದಾರೆ. ಸೇತುವೆಯ 500 ಮೀ ಸುತ್ತಲು ಮರಳುಗಾರಿಕೆ ನಡೆಸಿದರೆ ಪಿಲ್ಲರ್ ಗಳು ದುರ್ಬಲ ಆಗುತ್ತದೆ, ಸೇತುವೆ ಸುತ್ತ ಅಕ್ರಮ ಮರಳು ಗಾರಿಕೆ ತಡೆಯಿರಿ ಎಂದು ಸ್ಥಳದಲ್ಲೆ ತಾಕೀತು ಮಾಡಿದ್ದಾರೆ.
ಅದರೆ, ಉಸ್ತುವಾರಿ ಸಚಿವರ ಮಾತಿಗೆ ಮಂಗಳೂರಿನಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅವರು ಅತ್ತ ಹೋಗುತ್ತಲೆ, ಇತ್ತ ಅಡ್ಡೂರು ಸೇರಿದಂತೆ ಮಂಗಳೂರಿನ ಎಲ್ಲಾ ಸೇತುವೆಗಳ ಸುತ್ತ ಸಂತೆಯಲ್ಲಿ ವ್ಯಾಪಾರಿಗಳು ನೆರೆದಂತೆ ದೋಣಿಗಳಲ್ಲಿ ದಂಧೇಕೋರರು ನೆರೆದಿದ್ದಾರೆ. ಹಗಲೂ ರಾತ್ರಿ ಅಕ್ರಮವಾಗಿ ಮರಳು ಎತ್ತುತ್ತಿದ್ದಾರೆ.
ಹೊಸ ಸೇತುವೆಗಳು ನಿರ್ಮಾಣ ಆಗುತ್ತಿರುವ ಪಲ್ಗುಣಿ ನದಿಯ ಕೂಳೂರು, ಪೊಳಲಿ – ಅಡ್ಡೂರುಗಳಲ್ಲಿ, ಹೊಸ ಸೇತುವೆ ನಿರ್ಮಾಣಗೊಂಡಿರುವ ಮರವೂರು, ಗುರುಪುರಗಳಲ್ಲಿ ಸೇತುವೆಯ ಸುತ್ತ ನೂರಾರು ದೋಣಿಗಳು ಸಾಂಪ್ರದಾಯಿಕ ಮೀನುಗಾರಿಕೆಯಷ್ಟೆ ನಿರಾಳವಾಗಿ ಮರಳು ತೆಗೆಯುತ್ತಿದ್ದಾರೆ. ಇದರಿಂದ ಹೊಸ ಸೇತುವೆಗಳ ಬಾಳಿಕೆ, ಭವಿಷ್ಯದ ಕುರಿತು ಈಗಾಗಲೆ ಆತಂಕ ಶುರುವಾಗಿದೆ. ಈ ಸೇತುವೆಗಳಲ್ಲದೆ, ನೇತ್ರಾವತಿಯ ಹರೇಕಳ ಹೊಸ ಡ್ಯಾಂ ನ ಸಮೀಪವೂ ಮರಳು ದಂಧೆ ಜೋರಾಗಿದೆ. ಸ್ಥಳೀಯ ಕೊಣಾಜೆ ಪೊಲೀಸರು ಶಾಸಕರಿಗೆ ಹೊಡೆದಷ್ಟೆ ಭಯ ಭಕ್ತಿ, ಗೌರವದಿಂದ ಈ ಮರಳು ಸಾಗಾಟದ ಖದೀಮರಿಗೆ ಸೆಲ್ಯೂಟ್ ಹೊಡೆಯುತ್ತಾರೆ.
ಹಾಗೆಯೆ, ಮೂಲ್ಕಿ ಕ್ಷೇತ್ರದ ಚೇಳಾಯೂರು ಚೆಕ್ ಡ್ಯಾಂ ನಲ್ಲಿ ಮರಳು ತೆಗೆಯುವ ರಭಸಕ್ಕೆ ಬಿರುಕುಗಳು ಕಾಣಿಸಿಕೊಂಡಿರುವುದು ವರದಿಯಾಗಿದೆ. ಮೂಲ್ಕಿ ತಾಲೂಕಿನ ಶಾಂಭವಿ, ನಂದಿನಿ ನದಿಗಳು ಅಕ್ರಮ ಮರಳು ದಂಧೆಯವರಿಗೆ ಪೂರ್ಣವಾಗಿ ಬಿಟ್ಟು ಕೊಡಲಾಗಿದೆ. ಮಂಗಳೂರು ಉತ್ತರದ ಕೂಳೂರು, ಅದ್ಯಪಾಡಿ, ಮಳಲಿ ಗಳಲ್ಲಿ ಮರಳು ದಂಧೆಕೋರರದ್ದೆ ಸಾಮ್ರಾಜ್ಯವಾಗಿದೆ. ಇಲ್ಲಿ ಫಲ್ಗುಣಿ ನದಿ ಭವಿಷ್ಯದಲ್ಲಿ ನಿರ್ಜೀವಗೊಂಡರೂ ಅಚ್ಚರಿ ಇಲ್ಲ.
ದುರಂತ ಅಂದರೆ, ಈ ಎಲ್ಲಾ ಮರಳು ಗಾರಿಕೆಗಳೂ ನಿರ್ಬಂಧಿತ ಪ್ರದೇಶಗಳಲ್ಲೆ ನಡೆಯುತ್ತದೆ. ಮೊದಲೆಲ್ಲ ರಾತ್ರೆಯ ಕತ್ತಲಲ್ಲಿ ನಡೆಯುತ್ತಿದ್ದರೆ, ಈಗಿನ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಹಗಲು ಹೊತ್ತಿನಲ್ಲೆ ಅಕ್ರಮ ಮರಳುಗಾರಿಕೆಯ ದೋಣಿಗಳ ನೂರಾರು ಸಂಖ್ಯೆಯಲ್ಲಿ ನಿರ್ಬೀತಿಯಿಂದ ನದಿಗೆ ಇಳಿಯುತ್ತಿವೆ, ನಿರಾತಂಕವಾಗಿ ಮರಳು ಎತ್ತುತ್ತಿವೆ. ಉಡುಪಿ ಜಿಲ್ಲೆಯ ಎಸ್ ಪಿ ಅಕ್ರಮ ಮರಳು ಸಾಗಾಟಕ್ಕೆ ಸಹಕರಿಸಿದ ಆರೋಪದಲ್ಲಿ ಹತ್ತಾರು ಸಂಖ್ಯೆಯ ಪೊಲೀಸರನ್ನು ಅಮಾನತು ಮಾಡಿ ಮನೆಗೆ ಕಳುಹಿಸಿದ್ದಾರೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ಪೊಲೀಸರನ್ನು ಅಕ್ರಮ ಮರಳು ಸಾಗಾಟದ ಟಿಪ್ಪರ್ ಗಳಿಗೆ ಬೆಂಗಾವಲು ಒದಗಿಸಲು ನಿಯೋಜಿಸಿದ ರೀತಿಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಕುರಿತು ಧ್ವನಿ ಎತ್ತುವವರು ದೂರು ನೀಡಿ, ನೀಡಿ ಸುಸ್ತಾಗಿದ್ದಾರೆ, ಜನಪರ ಪತ್ರಕರ್ತರು ವರದಿ ಮಾಡಿ ಮಾಡಿ ಸುಸ್ತಾಗಿದ್ದಾರೆ.
(ಕೆಳಗಡೆಯ ವೀಡಿಯೊ ಫಲ್ಗುಣಿ ನದಿಯ ಅಡ್ಡೂರು -,ಪೊಳಲಿ ಸೇತುವೆ ಸಮೀಪದಲ್ಲಿ ಸ್ಥಳೀಯರು ಭಯದಿಂದ ಅಡಗಿ ಚಿತ್ರೀಕರಿಸಿದ್ದು. ಇಲ್ಲಿ ಮರಳು ದಂಧೆಯಿಂದ ಸೇತುವೆ ಬಿರುಕು ಬಿಟ್ಟು ಸಂಚಾರ ನಿರ್ಬಂಧಿಸಲ್ಪಟ್ಟಿದೆ. ಈಗ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಇದೇ ಸ್ಥಳಕ್ಕೆ ಮೊನ್ನೆಯಷ್ಟೆ ಉಸ್ತಾವಾರಿ ಸಚಿವರು ಭೇಟಿ ನೀಡಿ ಸೇತುವೆಗಗಳ ಸಮೀಪ ಅಕ್ರಮ ಮರಳುಗಾರಿಕೆ ಪೂರ್ಣವಾಗಿ ತಡೆಯುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ತಾಕೀತು ಮಾಡಿದ್ದರು. ಸಚಿವರ ಮಾತಿಗೆ ಇಲ್ಲಿ ಒಂದು ದೋಣಿ ಮರಳಿಗೆ ಇರುವಷ್ಟೂ ಬೆಲೆ ಇಲ್ಲ. ಉಸ್ತುವಾರಿ ಸಚಿವರು ಒಂತರಾ ಬೆಳ್ಚಪ್ಪನಂತೆ ಜಿಲ್ಲೆಯ ಜನತೆಗೆ ಗೋಚರಿಸತೊಡಗಿದ್ದಾರೆ).
