ಬಂಟ್ವಾಳ: ಸರಕಾರಿ ಅಧಿಕಾರಿ ಮಟ್ಕಾ ದಾಸ.! ಅಕ್ರಮ-ಸಕ್ರಮದಲ್ಲೂ ಸಖತ್ ಲೂಟಿ

ಕರಾವಳಿ

ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಬಕಾಸುರರ ಕಥೆಗಳನ್ನು ಪತ್ರಿಕೆಯ ಕಳೆದ ಸಂಚಿಕೆಯಲ್ಲಿ ಓದಿದ್ದೀರಿ ತಾನೇ. ಬಂಟ್ವಾಳ ಹೃದಯ ಭಾಗದ ಮಿನಿ ವಿಧಾನಸೌಧದಲ್ಲಿ ಮುಕ್ಕಲು ರೆಡಿಯಾಗಿ ಕೂತ ತಿಮಿಂಗಿಲಗಳ ಬಗ್ಗೆ ವಿಸ್ತೃತ ವರದಿಯನ್ನು ದಾಖಲಿಸಿದ್ದೆವು. ಅಲ್ಲಿ ಕುರ್ಚಿಗೆ ಅಂಟಿಕೊಂಡು ಕೂತಿರುವ ಅಧಿಕಾರಿಯೊಬ್ಬನ ರಗಳೆಯನ್ನು ಓದಿರಬೇಕು ತಾನೇ. ಇದೀಗ ಈತನ ಒಂದೊಂದು ಬಣ್ಣ ಬಯಲಾಗುತ್ತಿದೆ. ಬಂಟ್ವಾಳ ತಾಲೂಕಿನಲ್ಲೇ ಪರಮಭ್ರಷ್ಟ ಈತ. ವಿವಿಧ ನಾಮಕರಣದಿಂದ ಬಂಟ್ವಾಳ ತಾಲೂಕಿನಲ್ಲಿ ಕುಖ್ಯಾತಿಯ ಈತನ ದಗಲ್ಬಾಜಿ ಪುರಾಣಗಳು ಒಂದೊಂದಾಗಿ ಹೊರಬರುತ್ತಿದೆ.

12 ವರ್ಷಗಳ ಮುಂಚೆ ಪಾಣೆಮಂಗಳೂರು ಕಸ್ಬಾದಲ್ಲಿ ಗ್ರಾಮಕರಣೀಕನಾಗಿದ್ದ. ಅಲ್ಲಿ ಪೂರ್ತಿ ಮೇಯ್ದ ಪರಿಣಾಮ ಇಲಾಖೆಗೆ ಕಪ್ಪು ಚುಕ್ಕೆ ತಂದಿದ್ದ. ಅಲ್ಲಿಂದ ನೇರವಾಗಿ ಬಂದಿದ್ದೆ ಕೋಟೆಕಾರು ಗ್ರಾಮ ಕರಣಿಕನಾಗಿ. ಇಲ್ಲಿ ಈತ ಆಡಿದ್ದೇ ಆಟವಾಗಿತ್ತು. ಲಂಚ.. ಲಂಚ.. ಲಂಚ ಎಲ್ಲೆಲ್ಲೂ ಲಂಚದ್ದೇ ಹಾವಳಿ. ಈತ ಆವಾಗಲೇ ಬಲು ಚಾಲಾಕಿ. ಸಂತತಿ ನಕ್ಷೆಯಿಂದ ಹಿಡಿದು ಸಂತಾನ ಇಲ್ಲದ ಯಾವುದೇ ರೀಸ್ಕ್ ನ ಕೆಲಸದ ಫೈಲ್ ಟೇಬಲ್ಲಿಗೆ ಬಂದು ಬಿಟ್ಟರೆ ಈತ ಮಾಡುತ್ತಿದ್ದ ಮೊದಲ ಕೆಲಸ ಅಂದರೆ ಅಲ್ಲಿನ ಜನಪ್ರತಿನಿಧಿಗಳು ಅಥವಾ ಕೌನ್ಸಿಲರ್ ಸಹಿಯನ್ನು ಯಾವ್ಯಾವ ವಾರ್ಡಿನಿಂದ ಫೈಲ್ ಬಂದಿದೆಯೋ, ಆಯಾ ವಾರ್ಡ್ ನ ಕೌನ್ಸಿಲರ್ ಸಹಿಯನ್ನು ಅರ್ಜಿಯಲ್ಲಿ ನಮೂದಿಸಿ ತಾನು ಕೆಲಸ ಮಾಡಿಕೊಳ್ಳುತ್ತಿದ್ದ. ಒಂದು ವೇಳೆ ಅದು ಡುಪ್ಲಿಕೇಟ್ ಅಥವಾ ಹಗರಣದ ಫೈಲ್ ಆಗಿಬಿಟ್ಟರೆ ಮೊದಲು ಬಲಿಪಶು ಆಗುತ್ತಿದ್ದುದ್ದು ಸ್ಥಳೀಯ ಜನಪ್ರತಿನಿಧಿಗಳು. ಈತನಿಗೆ ದುಡ್ಡು ಸಿಗುತ್ತಿತ್ತು. ಬಚಾವು ಆಗುತ್ತಿದ್ದ. ಚಾಣಾಕ್ಷ ಅಧಿಕಾರಿಯಾಗಿದ್ದ. ಆನಂತರ ಕಂದಾಯ ನಿರೀಕ್ಷಕನಾಗಿ ಭಡ್ತಿ ಪಡೆದು ಮೂಡಬಿದ್ರೆ, ಕೆಐಎಡಿಬಿ ಬೈಕಂಪಾಡಿಗೆ ವರ್ಗಾವಣೆಯಾಗಿದ್ದ. ಜಾತಿ ಬಲದಿಂದ ಕೆಲವೊಂದು ಪ್ರಕರಣಗಳಲ್ಲಿ ಬಚಾವಾಗುತ್ತಿದ್ದ.

ಯಾವ ಸರಕಾರ ಬರಲಿ. ಆ ಸರಕಾರಕ್ಕೆ ಸುಲಭವಾಗಿ ಅಡ್ಜೆಸ್ಟ್ ಮೆಂಟ್ ಆಗುತ್ತಿದ್ದ ಮನುಷ್ಯ. ಬದುಕುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದ. ಸಂಘ ಪರಿವಾರದ ಮುಖಂಡರೊಬ್ಬರ ಅತ್ಯಂತ ಆತ್ಮೀಯ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದ.

ಸಂದರ್ಭಕ್ಕೆ ತಕ್ಕಂತೆ ನಾನಾ ವೇಷ ಧರಿಸಿ ಎಲ್ಲರನ್ನೂ ಕೈಯೊಳಗೆ ಮಾಡಿಕೊಂಡು ತನ್ನ ಹುದ್ದೆಯನ್ನು ಸೇಫ್ ಮಾಡುತ್ತಿದ್ದ. ಕಂದಾಯ ನಿರೀಕ್ಷಕ ಹುದ್ದೆಯಿಂದ ಭಡ್ತಿಗೊಂಡು ಮೂಡಬಿದ್ರೆಗೆ ದಾಂಗುಡಿ ಇಟ್ಟರೂ, ಕೆಲವೇ ಸಮಯದಲ್ಲಿ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ವಕ್ಕರಿಸಿ ತನ್ನ ಅಡ್ಡೆಯನ್ನಾಗಿ ಪರಿವರ್ತಿಸಿದ. ಬ್ರೋಕರ್ ಗಿರಿ ಕೆಲಸವನ್ನು ಮಾಡಿ ದುಡ್ಡಿನ ಮೂಟೆ ಕಟ್ಟಿಕೊಂಡಿರುವ ಸಾವಿರದ ಗಿರಾಕಿ ಈತ! ಕೆಲವೊಂದು ಫೈಲ್ ಗಳನ್ನು ತಹಶೀಲ್ದಾರರ ಕಚೇರಿಗೆ ಈತನೇ ಕೊಂಡುಹೋಗುವುದು. ಕಮಾಯಿ ಹೆಚ್ಚಿರುವ ಫೈಲ್ ಗಳನ್ನು ತಹಶೀಲ್ದಾರರನ್ನು ಮಂಕು ಮರಳು ಮಾಡಿ ಸಹಿ ಹಾಕಿಸಿಕೊಂಡು ಬರುವ ನಿಸ್ಸೀಮನೀತ.

ಈತ ಒಬ್ಬ ಸರಕಾರಿ ಅಧಿಕಾರಿ. ಮಟ್ಕಾ, ಇಸ್ಪೀಟ್ ಕ್ಲಬ್ಬಿನ ಗಿರಾಕಿ. ‘ಕಸಿನೋ’ ಆಡಲು ಗೋವಾಕ್ಕೂ ಹೋಗಿ ಬರುತ್ತಿದ್ದಾನಂತೆ. ಅಲ್ಲಿನ ಥಳುಕು ಬಳುಕಿನೊಂದಿಗೂ ನಂಟು ಹೊಂದಿದ್ದಾನೆ ಎಂಬ ಗುಸು ಗುಸು ಇದೆ. ಬಂಟ್ವಾಳವನ್ನು ಪರಮ ಭ್ರಷ್ಟಾಚಾರದ ಅಡ್ಡೆಯನ್ನಾಗಿ ಬದಲಾಯಿಸಿಕೊಂಡಿರುವ ಈತ ಅಕ್ರಮ-ಸಕ್ರಮದಲ್ಲೂ ಸಖತ್ ಲೂಟಿ ಹೊಡೆಯುತ್ತಿದ್ದಾನೆ. (ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನಮ್ಮಲ್ಲಿ ಲಭ್ಯವಿದೆ) ಮಂಗಳೂರಿನಲ್ಲಿ 2.75 ಸೆಂಟ್ಸ್ ಜಾಗ ಅಕ್ರಮ ಸಕ್ರಮದಲ್ಲಿ ಪಾಸಾದರೆ, ಬಂಟ್ವಾಳದಲ್ಲಿ 8 ಸೆಂಟ್ಸ್ ವರೆಗೂ ಸಿಗುತ್ತದೆ. ಇದನ್ನೇ ಕಮಾಯಿ ಮಾಡಿಕೊಂಡಿರುವ ಈತ ದುಡ್ಡು ಬಾಚಿಕೊಳ್ಳುತ್ತಿದ್ದಾನೆ. ಒಂದೊಂದು ಹಕ್ಕುಪತ್ರಕ್ಕೂ 50 ಸಾವಿರದವರೆಗೆ ಹಣ ಪೀಕಿಸುತ್ತಿದ್ದಾನೆ. ಇನ್ನು ದರಖಾಸ್ತು, ಸಾಗುವಳಿ ಚೀಟಿ ಜಾಗವನ್ನು ಸರಕಾರೀ ದರಕ್ಕಿಂತ ಕಡಿಮೆ ರೇಟು ಫಿಕ್ಸ್ ಮಾಡಿಸಿ ಅರ್ಧದಷ್ಟು ದುಡ್ಡು ಹೊಡೆಯುತ್ತಿದ್ದಾನೆ. ಇನ್ನು ರೆಕಾರ್ಡ್ ರೂಂ ಫೈಲ್ ಗಳನ್ನು ತಿದ್ದುವುದರಲ್ಲಿ ಈತನಷ್ಟು ನಿಪುಣರು ಬೇರೆ ಯಾರೂ ಇಲ್ಲ. ಹೊಸ ಹೊಸ ಯುವಕ- ಯುವತಿಯರು ಗ್ರಾಮಕರಣಿಕರಾದರೆ ಅವರೆಲ್ಲರೂ ಈತನ ತಾಳಕ್ಕೆ ಕುಣಿಯಲೇಬೇಕು. ಇಲ್ಲವಾದರೆ ನೋಟಿಸು ಇಶ್ಯೂ ಮಾಡಿ ಬೆದರಿಸುತ್ತಾನೆ. ಇದು ಒಂದರ್ಥದಲ್ಲಿ ಕಾಲೇಜಿನಲ್ಲಿ ಸೀನಿಯರ್ ಗಳು ಜೂನಿಯರ್ ಗಳಿಗೆ ರ್ಯಾಗಿಂಗ್ ಮಾಡಿದ ರೀತಿ. ಈತ ಹೇಳಿದ್ದೆಲ್ಲವನ್ನು ಕೇಳದಿದ್ದರೆ ಈತನ ಕೈ ಕೆಳಗಿನ ಯುವ ಅಧಿಕಾರಿಗಳಿಗೆ ಮಾನಸಿಕ ರೀತಿಯ ಕಿರುಕುಳ ನೀಡುತ್ತಾನೆ. ಈತನ ಇನ್ನಷ್ಟು ಅಸಹ್ಯಕರ ಪುರಾಣಗಳಿವೆ. ಬರೆದರೆ ಅದೊಂದು ಕಾದಂಬರಿಯಾಗಬಹುದು. ತಿಂಗಳಿಗೆ ನಾಲ್ಕೈದು ಬಾರಿ ಗೋವಾಕ್ಕೆ ‘ಆಟ’ ಆಡಲು ಹೋಗುವ, ಅದರ ಹಿಂದಿನ ರಹಸ್ಯಗಳೆಲ್ಲ ಬೆಟ್ಟದಷ್ಟಿದೆ. ದಾರ ಕಡಿದ ಪ್ರಕರಣಗಳು ಇವೆ. ಇಂತಹ ದಗಲ್ಬಾಜಿತನ ಹೊಂದಿರುವ ಈತ ತಾನು ಮಾತ್ರ ಸುಬಗನಂತೆ ವರ್ತಿಸುತ್ತಿದ್ದಾನೆ. ಸಂದರ್ಭ ಬಂದರೆ ಅವೆಲ್ಲವನ್ನೂ ಬಿಚ್ಚಿಡುತ್ತೇವೆ.

ತಹಶೀಲ್ದಾರ್ ಇತ್ತ ಗಮನಹರಿಸಲಿ

ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಒಳ್ಳೆಯ ಅಧಿಕಾರಿ ಅನ್ನುವುದು ನಾಗರಿಕ ವಲಯಗಳಿಂದ ಕೇಳಿ ಬರುತ್ತಿದೆ. ಜನಸ್ನೇಹಿ ಅಧಿಕಾರಿ ಅನ್ನುವ ಇಮೇಜಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ ಅನ್ನುವ ಮಾತುಗಳು ಇವೆ. ಉತ್ತಮ ಅಧಿಕಾರಿಯಾದರೂ ತನ್ನ ಕೈಕೆಳಗಿನ ಅಧಿಕಾರಿಗಳನ್ನು ನಿಯಂತ್ರಿಸದೆ ಇದ್ದರೆ ದಕ್ಷರಾದರೂ ಕೆಟ್ಟ ಹೆಸರು ಬರುತ್ತದೆ. ಬಂಟ್ವಾಳ ಮಿನಿ ವಿಧಾನಸೌಧ ಬ್ರೋಕರ್ ಗಳ ಅಡ್ಡೆಯಾಗುತ್ತಿದೆ. ಒಬ್ಬ ಅಕ್ರಮ ಸಕ್ರಮದಲ್ಲೂ ಸಾಕಷ್ಟು ಮುಂಡಮೋಚಿದ್ದಾರೆ. ಪರಮಭ್ರಷ್ಟ ಅಧಿಕಾರಿ. ಈತನ ದಗಲ್ಬಾಜಿತನಕ್ಕೆ ಇನ್ನಾದರೂ ಕಡಿವಾಣ ಹಾಕಬೇಕಿದೆ.