ಲಕ್ಷ ಲಕ್ಷ ಕೊಟ್ಟು ಕೇರಳದಿಂದ ಆಮದು ಮಾಡಿಕೊಳ್ಳುವ ಪ್ರಭಾಷಣಕಾರರ ಬಗ್ಗೆ ಸಮುದಾಯ ಚಿಂತಿಸಬೇಕಾದ ಸಮಯವಿದು.!
ತಾಲ-ಮ್ಯಾಲ-ಕೊಲಕ್ಕೆ ರೆಡಿಯಾಯಿತು.. ಕುಕ್ಕಿಲರ ಸೊಂಟೆ.!!
ಎಲ್ಲೂ ಸಲ್ಲದವರು ಕೊನೆಗೆ ಸಲ್ಲುವುದು ಬುದ್ಧಿವಂತರ ಜಿಲ್ಲೆಯಲ್ಲಿ ಅನ್ನುವುದು ದಿಟ. ಇಲ್ಲಿ ಧಾರ್ಮಿಕತೆಯ ಹೆಸರಿನಲ್ಲಿ ಮಂಗ ಮರಳು ಮಾಡಿ ಹಣ, ಖ್ಯಾತಿ ಪಡೆಯುವುದು ಸುಲಭ. ಜಿಲ್ಲೆಯ ಬಹುತೇಕ ಮಸೀದಿ, ಸಂಘಸಂಸ್ಥೆಗಳು ಪ್ರಭಾಷಣಕ್ಕೆ ಕೇರಳದ ಬಿರುದುದಾರಿಗಳನ್ನು ನೆಚ್ಚಿಕೊಂಡಿರುವುದು ಇದಕ್ಕೆಲ್ಲ ಕಾರಣ. ನಮ್ಮಲ್ಲೇ ಒಳ್ಳೆಯ ಪ್ರಭಾಷಣಕಾರರು ಇದ್ದರೂ ಅವರಿಗೆ ವೇದಿಕೆ ನೀಡಲು ನಮ್ಮವರೇ ಹಿಂಜರಿಯುತ್ತಾರೆ. ಮಸೀದಿಯಲ್ಲಿ ಇಮಾಮ್, ಮುಅದ್ದೀನ್ ರಾಗಿ ಸೇವೆ ಮಾಡಲು ನಮ್ಭವರು ಬೇಕು. ಆದರೆ ವಾರ್ಷಿಕ, ಉರೂಸ್ ಸಮಾರಂಭಕ್ಕೆ ಒಂದೆರಡು ಗಂಟೆ ಪ್ರವಚನ ನೀಡಲು ಕೇರಳದ ಪ್ರವಚನಕಾರರಿಗೆ ಲಕ್ಷ ಕೊಡಲು ನಮ್ಮ ಸಮಿತಿಗಳು ಹಿಂಜರಿಯುವುದಿಲ್ಲ. ಒಂದು ಗಾದೆ ಮಾತು ಹಿಂದಿನಿಂದ ಚಾಲ್ತಿಯಲ್ಲಿದೆ. ಕಸ್ತೂರಿಯ ಪರಿಮಳ ಕತ್ತೆಗೇನು ಗೊತ್ತು..? ಇದು ಜಿಲ್ಲೆಯ ಮಸೀದಿ ಆಡಳಿತ ಕಮಿಟಿಯವರಿಗೆ ಹೇಳಿ ಮಾಡಿಸಿದಂತಿದೆ.
ಇನ್ನು ಕೇರಳದ ಪ್ರಭಾಷಣಕಾರರನ್ನು ಬುಕ್ ಮಾಡಲು ಆಡಳಿತ ಕಮಿಟಿಯವರು ಪಡುವ ಕಷ್ಟ ಒಂದೆರಡಲ್ಲ. ಕೆಲವು ವಿಶೇಷ ಬಿರುದು ಪಡೆದವರನ್ನು ತಾ ಮುಂದು, ನಾ ಮುಂದು ಎಂಬಂತೆ ವರ್ಷದ ಮುನ್ನ ಡೇಟ್ ಪಡೆಯಲು ಕ್ಯೂ ನಿಂತು ಕೆಲವು ಪ್ರಭಾಷಣಕಾರರನ್ನು ಆಮದು ಮಾಡಿಕೊಂಡು ಪ್ರಭಾಷಣ ವೇದಿಕೆಗೆ ಕರೆ ತರಲಾಗುತ್ತಿದೆ. ಇನ್ನು ಇವರ ಬುಕ್ಕಿಂಗ್ ಗೆ ಕೆಲವು ಬ್ರೋಕರ್ ಗಳ ಕೈ ಕಾಲು ಹಿಡಿಯಬೇಕು. ಅವರಿಗೆ ಇಂತಿಷ್ಟು ಕೊಡಬೇಕು. ಎಲ್ಲವೂ ಆದ ನಂತರ ಪ್ರಭಾಷಣಕಾರರು ರೆಡಿ. ಅವರು ಇಲ್ಲಿಗೆ ಪ್ರಭಾಷಣಕ್ಕೆ ಬರುವ ಮುನ್ನ ಅವರದ್ದೇ ಸೌಂಡ್ ಸಿಸ್ಟಮ್, ಯೂ ಟ್ಯೂಬರ್ ಗಳು ಇಲ್ಲಿಗೆ ದಾಪುಗಾಲು. ಕೆಲವೊಂದು ಪ್ರಭಾಷಣಕಾರರ ಷರತ್ತುಗಳು ಇರುತ್ತವೆಯಂತೆ. ಜನ ಹೆಚ್ಚು ಸೇರುವ ಉರೂಸ್ ಕಾರ್ಯಕ್ರಮಕ್ಕೆ ತಮ್ಮ ಡೇಟ್ ಸುಲಭವಾಗಿ ಕೊಡುತ್ತಾರೆ. ಉರೂಸಿಗೆ ಸೇರಿದ ಜನರನ್ನು ತಮ್ಮ ಯೂ ಟ್ಯೂಬರ್ ಮೂಲಕ ಚಿತ್ರೀಕರಿಸಿ ಇಂತಿಂತ ಪ್ರಭಾಷಣಗಾರರಿಗೆ ಸೇರಿದ ಜನಸ್ತೋಮ ಎಂದು ವಿಡಿಯೋ ಎಡಿಟ್ ಮಾಡಿ ಹರಿಯಬಿಡುತ್ತಾರೆ. ತಮ್ಮ ಮಾರ್ಕೆಟಿಂಗ್ ವಿಸ್ತರಿಸುತ್ತಾರೆ. ಕೇರಳದಿಂದ ಬಂದ ಪ್ರಭಾಷಣಕಾರರು ಒಂದು ಗಂಟೆಯೋ, ಒಂದೂವರೆ ಗಂಟೆಯೋ ರಾಗಾ, ಹಾಡು ಹಾಡಿ,ಅಬ್ಬರಿಸಿ ಪ್ರಭಾಷಣ ಮಾಡುತ್ತಾರೆ. ಇವರ ಉರ್ದಿ ಕೇಳಲು ಕೂತವರಿಗೆ ಅವರು ಹೇಳಿದ್ದು ಏನೂ ಎಂದು ಅರ್ಥವಾಗದೇ ಮುಖ ಮುಖ ನೋಡಿ ಅಲ್ಲಿಂದ ತೆರಳುತ್ತಾರೆ. ಇಲ್ಲಿ ಪ್ರಭಾಷಣಕ್ಕೆ ಬಂದವರು ಸಂಘಟಕರಿಂದ ಐವತ್ತೊ.. ಲಕ್ಷವೋ ಬಾಚಿ ಅಲ್ಲಿಂದ ಟೈಟ್ ಸೆಕ್ಯೂರಿಟಿಯಿಂದ ತೆರಳುತ್ತಾರೆ. ಜೊತೆಗೆ ಸೌಂಡ್ ಸಿಸ್ಟಮ್, ಯೂ ಟ್ಯೂಬರ್ ಗಳಿಂದ ಕಮೀಷನ್ ಕೂಡ ಬೇರೆ. ಬಹುತೇಕ ಜಿಲ್ಲೆಗಳಲ್ಲಿ ಇಂದು ಮಸೀದಿಗಳಲ್ಲಿ ಇಂತಹದ್ದೇ ಪ್ರಭಾಷಣಕ್ಕೆ ಡಿಮ್ಯಾಂಡ್. ಕೇರಳದವರು ಬಂದರೆ ಇಲ್ಲಿನ ಉದ್ಯಮಿಗಳು ಮಸೀದಿಗೆ ದುಡ್ಡು ಕೊಡುತ್ತಾರಂತೆ.. ವೇದಿಕೆಗಳಲ್ಲಿ ಆ ಉಸ್ತಾದರು ಉದ್ಯಮಿಗಳನ್ನು ವಿವಿಧ ಬಿರುದುಗಳಿಂದ ಹಾಡಿ ಹೊಗಳಿದರೆ ದುಡ್ಡು ಬಿಸಾಕುತ್ತಾರಂತೆ.! ಇದು ಧಾರ್ಮಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ಬ್ಯುಸಿನೆಸ್ ಅಲ್ಲದೇ ಮತ್ತೇನು..? ಕೇರಳದಿಂದ ಜಿಲ್ಲೆಗೆ ಬಂದು ಉರ್ದಿ ಮಾಡುವ ಉಸ್ತಾದರುಗಳ ತವರೂರಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ನೋಡಿದರೆ ಅಬ್ಬಬ್ಬಾ..ಹೀಗೂ ಉಂಟೆ.? ಎಂದು ಮೂಕರಾಗಿ ನೋಡಬೇಕು. ತಮ್ಮ ತವರೂರಲ್ಲೇ ವಿವಿಧ ನಮೂನೆಯ ಅನಾಚಾರಗಳು ವಿಜೃಂಭಿಸುತ್ತಿರುವಾಗ, ಅವುಗಳಿಗೆ ಕಡಿವಾಣ ಹಾಕಲು ಸಾಧ್ಯವಾಗದೆ ಇವರು ಇಲ್ಲಿಗೆ ಬಂದು ಉರ್ದಿ ಹೇಳಿ ಏನು ಪ್ರಯೋಜನ.? ಇಂದು ಕೇರಳದಿಂದ ಪ್ರಭಾಷಣಕಾರರನ್ನು ಆಮದು ಮಾಡಿಕೊಂಡಂತೆ ಅಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಆಮದು ಮಾಡಿಕೊಂಡು ಅದೆಲ್ಲ ಧಾರ್ಮಿಕತೆಯ ಹೆಸರಿನಲ್ಲಿ ನುಸುಳಿಕೊಂಡಿದೆ. ಇದರ ಬಗ್ಗೆ ಧ್ವನಿ ಎತ್ತುವವರೇ ಇಲ್ಲವಾಗಿದ್ದಾರೆ.

ಇದೇ ಹೊತ್ತಿನಲ್ಲಿ ಜಿಲ್ಲೆಯ ಕೆಲವು ಬ್ಯಾರಿ ಪ್ರಭಾಷಣಕಾರರ ಮತ ಪ್ರಸಂಗಗಳು ಭಾರೀ ವೈರಲ್ ಆಗುತ್ತಿದೆ. ಅದರಲ್ಲೂ ಕುಕ್ಕಿಲ ದಾರಿಮಿಯಂತವರ ಬ್ಯಾರಿ ಪ್ರಭಾಷಣಕ್ಕೆ ಜಿಲ್ಲೆಯ ಜನ ಫಿದಾ ಆಗಿದ್ದಾರೆ. ಮದುವೆ ಹೆಸರಿನಲ್ಲಿ ನಡೆಯುತ್ತಿರುವ ದುಂದುವೆಚ್ಚ, ಮದುವೆ ಹೆಸರಿನಲ್ಲಿ ನುಸುಳಿಕೊಂಡಿರುವ ಅನಾಚಾರದ ಬಗ್ಗೆ ಧೈರ್ಯವಾಗಿಯೇ, ಇಲ್ಲಿನ ಮುಸಲ್ಮಾನರಿಗೆ ಸರಳ ಭಾಷೆಯಲ್ಲಿ ಅರ್ಥವಾಗುವಂತೆ ಹೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲೆಯಲ್ಲಿ ಕುಕ್ಕಿಲ ದಾರಿಮಿ, ಸಿದ್ದೀಕ್ ಜಲಾಲಿ ಸೇರಿದಂತೆ ಹತ್ತಾರು ಬ್ಯಾರಿ ಪ್ರಭಾಷಣಕಾರರು ನಿರರ್ಗಳವಾಗಿ ವೇದಿಕೆಯಲ್ಲಿ ನಿಂತು ಪ್ರಭಾಷಣ ನಡೆಸಿದರೆ ಅದು ಇಲ್ಲಿನ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಇಲ್ಲಿನ ಸಮುದಾಯ ತಮ್ಮಲ್ಲಿರುವ ಮುತ್ತು ಮಾಣಿಕ್ಯವನ್ನು ಬಿಟ್ಟು ಪರವೂರಿನಿಂದ ಲಕ್ಷಗಟ್ಟಲೆ ಕೊಟ್ಟು ಪ್ರಭಾಷಣಕಾರರನ್ನು ಕರೆಯಿಸಿಕೊಂಡ ಪರಿಣಾಮ ಇಂತಹ ಪ್ರತಿಭಾನ್ವಿತ ಧಾರ್ಮಿಕ ಉಸ್ತಾದರುಗಳಿಗೆ ವೇದಿಕೆಯೇ ಇಲ್ಲವಾಯಿತು. ಇದರ ಪರಿಣಾಮವಾಗಿ ಇಂದು ಅನಾಚಾರಗಳು ಮೇಳೈಸಲು ಕಾರಣವಾಗಿದೆ.

ಕೇರಳ ಹಾಗೂ ಕರಾವಳಿ ಭಾಗದಲ್ಲಿ ಹಲವು ಕಡೆ ತಾಲದ ಹೆಸರಿನಲ್ಲಿ ಅನಾಚಾರಗಳು ನಡೆಯುತ್ತಿದೆ. ಮುಸ್ಲಿಂ ಸಮುದಾಯ ‘ಕುಂತುಮ್ ಖೈರಾ ಉಮ್ಮ ‘ ಅತ್ಯುತ್ತಮ ವರ್ಗ ಎಂದು ಕರೆಸಿಕೊಂಡಿದ್ದು, ಆದರೆ ಈ ಸಮುದಾಯದ ಕೆಲವರ ವರ್ತನೆಯಿಂದ ಇಡೀ ಸಮುದಾಯವೇ ಅಡಕತ್ತರಿಗೆ ಸಿಲುಕಿದೆ. ತಾಲಕ್ಕೆ ಹೋದ ಹುಡುಗರು ಅಲ್ಲಿ ಚಿತ್ರ ವಿಚಿತ್ರ ಕೀಟಲೆ ಕೊಡುತ್ತಾರೆ. ವಧುವಿನ ಮನೆಯಲ್ಲಿ ಹೊಟ್ಟೆ ಪೂರ್ತಿ ತಿಂದುಂಡು ತಮಾಷೆಯ ಹೆಸರಿನಲ್ಲಿ ವಧುವಿನ ಮನೆಯವರ ಸಾಮಾಗ್ರಿಗಳನ್ನು ಹಾಳು ಮಾಡುವುದು, ಮಧ್ಯರಾತ್ರಿ ಪಟಾಕಿ ಹಚ್ಚಿ ಸುತ್ತಮುತ್ತಲಿನವರಿಗೆ ತೊಂದರೆ ಕೊಡುವುದು, ವರನನ್ನು ಎತ್ತಾಕಿಕೊಂಡು ಹೋಗುವುದು ಇಂತಹ ಹಲವಾರು ಅನಾಚರಗಳು ಮೇಳೈಸುತ್ತಿದೆ. ಇದರಿಂದ ಹಲವಾರು ಅನಾಹುತಗಳು ನಡೆದಿದ್ದು ಇದೆ. ಮದುವೆಯೇ ದಿನವೇ ತಲಾಖ್ ಕೊಟ್ಟ ಹಲವು ಪ್ರಸಂಗಗಳು ಇವೆ. ಅಲ್ಲದೇ ವಿಟ್ಲ ಭಾಗದಲ್ಲಿ ಮದುಮಗಳನ್ನು ತಾಲಕ್ಕೆ ಕರೆದುಕೊಂಡು ಹೋಗುವಾಗ ಕೊರಗಜ್ಜನ ವೇಷ ಹಾಕಿ ಕರೆದುಕೊಂಡು ಹೋಗಿದ್ದು, ಈ ವಿಡಿಯೋ ವೈರಲ್ ಆಗಿ ಕೋಮು ಸಂಘರ್ಷಕ್ಕೂ ಕಾರಣವಾಗುವಂತಹ ವಾತಾವರಣ ಇಲ್ಲಿ ಸೃಷ್ಟಿಯಾಗಿತ್ತು. ಇಂತಹ ತಾಲದ ಬಗ್ಗೆ ‘ಬಚ್ಚಲಿಗಳಿಗೆ ಸೋಂಟೆಯಿಂದ ಕೊಡಿ’ ಅನ್ನುವ ಗಟ್ಟಿ ಧ್ವನಿಯಲ್ಲಿ ಮಾತನಾಡಿರುವುದು ಅದು ಜಿಲ್ಲೆಯ ಸಮುದಾಯಕ್ಕೆ ಇಷ್ಟವಾಗಿರುವುದು ತಾಲದ ಆವಾಂತರದ ಬಗ್ಗೆ ಸಮುದಾಯ ಎಷ್ಟೊಂದು ಪರಿತಪಿಸುತ್ತಿದೆ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.

ತಾಲ ಮಾತ್ರವಲ್ಲ ಮದುವೆಯ ಹೆಸರಿನಲ್ಲಿ ನುಸುಳಿಕೊಂಡಿರುವ ಮೆಹಂದಿ, ಹಳದಿ ಅನ್ನುವ ಕೆಟ್ಟ ಸಂಪ್ರದಾಯ ಹಾಗೂ ಇದರಿಂದ ವಧುವಿನ ತಂದೆ ಅನುಭವಿಸುವ ಸಂಕಷ್ಟಗಳ ಬಗ್ಗೆ ಕುಕ್ಕಿಲ ದಾರಿಮಿ ಈ ಹಿಂದೆ ಪ್ರಭಾಷಣ ಮಾಡಿದ್ದರು. ಇಸ್ಲಾಂ ಸರಳ ಮದುವೆಗೆ ಪ್ರೋತ್ಸಾಹಿಸಿದೆ. ಆದರೆ ತಂದೆಯ ಕಷ್ಟ ಅರಿಯದ ಮಗಳು ಮೆಹಂದಿ, ಹಳದಿ ಅನ್ನುವ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ತಂದೆಯನ್ನು ಸಾಲದ ಸುಳಿಗೆ ಸಿಲುಕಿಸುವ ದೃಷ್ಟಾಂತಗಳನ್ನು ಅತ್ಯಂತ ಮನೋಜ್ಞವಾಗಿ ವಿವರಿಸಿದ್ದಾರೆ. ಇನ್ನು ಮಸೀದಿಗಳು ಭಿಕ್ಷಾಟನೆಗೆ ಸರ್ಟಿಫಿಕೇಟ್ ನೀಡುವ ಏಕೈಕ ವಿಶ್ವವಿದ್ಯಾಲಯ ಎಂದು ಅತ್ಯಂತ ಕಠಿಣ ಭಾಷೆಯಲ್ಲಿಯೇ ವಿವರಿಸಿದ್ದಾರೆ. ಬದ್ರಿಯಾ ಜುಮ್ಮಾ ಮಸೀದಿ, ರಹ್ಮಾನಿಯಾ ಜುಮಾ ಮಸೀದಿ, ರಿಫಾಯಿ ಜುಮಾ ಮಸೀದಿ, ಮುಹ್ಯುದ್ದೀನ್ ಜುಮಾ ಮಸೀದಿ ಹೀಗೆ ಹೆಸರಿರುವ ಮಸೀದಿಗಳು ಇಂದು ಭಿಕ್ಷಾಟನೆಗೆ ಸರ್ಟಿಫಿಕೇಟ್ ನೀಡುತ್ತಿರುವುದು ದುರಂತ. ಯಾವೊಂದು ದೇವಸ್ಥಾನಗಳು, ಚರ್ಚುಗಳು ಮಗಳ ಮದುವೆಗೆ ತಂದೆಗೆ ಭಿಕ್ಷಾಟನೆಗೆ ಇಳಿಸಲು ಪತ್ರ ಕೊಡುವುದಿಲ್ಲ, ಆದರೆ ಅತ್ಯುತ್ತಮ ವರ್ಗ ಅನ್ನುವ ಮುಸ್ಲಿಮರು ಮಸೀದಿ ಹೆಸರಿನಲ್ಲಿ ಆಡಳಿತ ಕಮಿಟಿಗಳು ಸಹಿ ಹಾಕಿ ವಧುವಿನ ತಂದೆಗೆ ಭಿಕ್ಷಾಟನೆ ನಡೆಸಲು ಪ್ರೋತ್ಸಾಹ ನೀಡುತ್ತಿರುವುದು ಅಕ್ಷಮ್ಯ ಅಪರಾಧ. ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದ ಇಸ್ಲಾಂ ನ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಇಸ್ಲಾಂ ಧರ್ಮದೊಳಗೆ ನುಸುಳಿಕೊಂಡು ಹಲಾಲ್ ರೀತಿಯಾಗುತ್ತಿರುವ ಇಂತಹ ಅನಾಚಾರದ ಬಗ್ಗೆ ಸಾಮಾನ್ಯ ವ್ಯಕ್ತಿಗಳು ಹೇಳಿದರೆ ಅದಕ್ಕೆ ಬೇರೇನೇ ಅರ್ಥ ಬರುತ್ತದೆ. ಆದರೆ ಧಾರ್ಮಿಕ ಮುಖಂಡರು ಆ ಬಗ್ಗೆ ಧ್ವನಿ ಎತ್ತಿದರೆ ಇಂತಹ ಅನಾಚಾರಕ್ಕೆ ಕಡಿವಾಣ ಸಾಧ್ಯ. ಕುಕ್ಕಿಲ ದಾರಿಮಿಯವರ ಪ್ರಯತ್ನವನ್ನು ಶ್ಲಾಘಿಸಬೇಕಿದೆ. ಅವರ ಧೈರ್ಯವನ್ನು ಮೆಚ್ಚಬೇಕಿದೆ. ಇನ್ನಾದರೂ ಮಸೀದಿ ಆಡಳಿತ ಕಮಿಟಿಯವರು ಲಕ್ಷ, ಲಕ್ಷ ಕೊಟ್ಟು ಕೇರಳದ ಪ್ರಭಾಷಣಕಾರರನ್ನು ಕರೆಯುವ ಮುನ್ನ ನಮ್ಮಲ್ಲಿರುವ ಮುತ್ತು, ಮಾಣಿಕ್ಯಗಳಿಗೆ ವೇದಿಕೆ ನೀಡಿದರೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಕ್ಕೆ ಕಡಿವಾಣ ಬೀಳಬಹುದಾಗಿದೆ.
