ವಿಟ್ಲದಲ್ಲಿ ಗಣಿ ಮಾಫಿಯಾದ ಅಟ್ಟಹಾಸ. ಭಾರಿ ಪ್ರಮಾಣದಲ್ಲಿ ಸ್ಫೋಟಕ ಸಿಡಿದು ನಲುವತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿ.‌

ಕರಾವಳಿ

ಮುತ್ತಿಗೆ ಹಾಕಿ ಅಧಿಕಾರಿಗಳ ಚಳಿ ಬಿಡಿಸಿದ ಗ್ರಾಮಸ್ಥರು.

ವಿಟ್ಲ : ಕ್ವಾರಿಯಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಅಕ್ರಮವಾಗಿ ಗುಡ್ಡದಲ್ಲಿ ದಾಸ್ತಾನು ಇರಿಸಿದ್ದ ಭಾರಿ ಪ್ರಮಾಣದ ಸ್ಫೋಟಕಗಳು ಸಿಡಿದು ವಿಟ್ಲ ಸುತ್ತಮುತ್ತ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸ್ಫೋಟದ ಸದ್ದಿನೊಂದಿಗೆ ಕಂಪನ ಸಂಭವಿಸಿ ಐವತ್ತಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡತ್ತಡ್ಕ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ವಿಟ್ಲ ಸುತ್ತಮುತ್ತ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭಾರಿ ಕಂಪನ ನಡೆದಿದೆ. ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿದ್ಜು ಈ ಪೈಕಿ ಎಂಟು ಮನೆಗಳು ಭಾರಿ ಪ್ರಮಾಣದಲ್ಲಿ ಧ್ವಂಸಗೊಂಡಿವೆ. ಕಿಟಕಿ. ಗಾಜುಗಳು, ಬಾಗಿಲುಗಳು, ಮನೆಯ ಮೇಲ್ಛಾವಣಿ ಇಪ್ಪತ್ತು ಅಡಿಗಳಷ್ಟು ದೂರ ಹಾರಿ ಹೋಗಿರುವುದು ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ಜ ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷರನ್ನು, ಪಿ.ಡಿ.ಒ. ಮತ್ತು ಪೊಲೀಸ್ ಅಧಿಕಾರಿಗಳನ್ನು ಮನಬಂದಂತೆ ನಿಂದಿಸುತ್ತಾ ತರಾಟೆಗೆ ತೆಗೆದು ಝಾಡಿಸಿದ್ದಾರೆ. ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಐದು ಕ್ವಾರಿಗಳಿವೆ. ನಾಳೆ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಕ್ವಾರಿಗಳ ಪರವಾನಿಗೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ನಿರ್ಣಯ ಮಾಡುತ್ತೇವೆಂದು ಪಂ.ಅಧ್ಯಕ್ಷ ಪುನೀತ್ ಮಾಡತ್ತಾರು ಸ್ಪಷ್ಟನೆ ನೀಡಿದ್ದಾರೆ. ಘಟನೆಯ ಬಗ್ಗೆ ಪಿ.ಡಿ.ಒ.ಶ್ರೀಮತಿ ಸುಜಯ ಮಾತನಾಡುತ್ತಾ ಜನರ ಬದುಕಿನಲ್ಲಿ ಚೆಲ್ಲಾಟವಾಡುವ ಕ್ವಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆಂದು ಪ್ರತಿಕ್ರಿಯೆ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರರು, ವಿಟ್ಲ ಕಂದಾಯ ನಿರೀಕ್ಷಕರು ಆಗಮಿಸಿ ಪರಿಶೀಲನೆ ನಡೆಸಿದ್ದಲ್ಲದೇ ಜನರ ಹೇಳಿಕೆ ಪಡೆದು ಕ್ವಾರಿ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ದ.ಕ.ಜಿಲ್ಲಾ ಎಸ್ಪಿ ಎನ್.ಸತೀಶ್ ಸ್ಥಳಕ್ಕಾಗಮಿಸಿ ಸ್ಫೋಟದ ಸ್ಥಳ ಮತ್ತು ಕ್ವಾರಿಯನ್ನು ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮಗಳ ಜೊತೆ ಎಸ್ಪಿಯವರು ಮಾತನಾಡುತ್ತಾ, ಅಕ್ರಮವಾಗಿ ಶೇಖರಿಸಿಟ್ಟ ಸ್ಫೋಟಕಗಳು ಬಿಸಿಲಿನ ತಾಪಕ್ಕೆ ಆಕಸ್ಮಿಕವಾಗಿ ಸ್ಫೋಟಗೊಂಡಿವೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿಟ್ಲ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಫೋಟದಿಂದಾಗಿ ಹಾನಿಗೊಳಗಾದ ಮನೆಗಳ ಮಾಲಿಕರು ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸ್ಪೋಟ ಸಂಭವಿಸುವ ಸಂದರ್ಭ ಮಧ್ಯಾಹ್ನ ಸಮಯವಾಗಿದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.‌ ವಿಟ್ಲ ವ್ಯಾಪ್ತಿಯ ಅಳಿಕೆ, ಅನಂತಾಡಿ, ವಿಟ್ಲ ಕಸಬಾ, ವಿಟ್ಲ ಮುಡ್ನೂರು ಗ್ರಾಮಗಳಲ್ಲಿ ಹದಿಮೂರಕ್ಕೂ ಹೆಚ್ಚು ಕ್ವಾರಿಗಳು ತಮ್ಮ ಹಣ ಬಲದಿಂದಾಗಿ ಕಾನೂನಿಗೆ ಸಡ್ಡು ಹೊಡೆದು ಯಾರು ಮುಲಾಜಿಲ್ಲದೇ ನಡೆಯುತ್ತಿದೆ. ಈ ಬಗ್ಗೆ ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಸಾಮೂಹಿಕ ಹೋರಾಟ ನಡೆಸುತ್ತೇವೆಂದು ಜನ ಎಚ್ಚರಿಕೆ ನೀಡಿದ್ದಾರೆ.