ಮೂರು ದಿನಗಳಿಂದ ಕಳೆಂಜಿಮಲೆ ರಕ್ಷಿತಾರಣ್ಯ ಹೊತ್ತಿ ಉರಿಯುತ್ತಿದ್ದು ಬೆಂಕಿಯನ್ನು ಹತೋಟಿಗೆ ತರಲು ಎರಡು ಅಗ್ನಿಶಾಮಕ ವಾಹನಗಳು ಸಾರ್ವಜನಿಕರ ಸಹಕಾರದೊಂದಿಗೆ ಸತತ ಏಳು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿವೆ. ಕೊಳ್ನಾಡು ಗ್ರಾಮದ ಕಳೆಂಜಿಮಲೆ ರಕ್ಷಿತಾರಣ್ಯ ಕಳೆದ ಮೂರು ದಿನಗಳಿಂದ ಕಿಡಿಗೇಡಿಗಳ ವಕ್ರದೃಷ್ಟಿಗೆ ಹೊತ್ತಿ ಉರಿಯುತ್ತಿದೆ.

ಭಾನುವಾರ ಮತ್ತು ಸೋಮವಾರ ಸತತ ಮೂರು ಗಂಟೆಗಳ ಕಾಲ ಸ್ಥಳೀಯರ ಜೊತೆ ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸದಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ಜರು. ಮಂಗಳವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಮತ್ತೆ ರಕ್ಷಿತಾರಣ್ಯದ ಕುಂಟ್ರಕಳ ಪರಿಶಿಷ್ಟ ಪಂಗಡ ಪರಿಸರದ ಸಾವಿರಾರು ಮೀಟರ್ ಅಂತರದ ಎತ್ತರದ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೆಳಭಾಗದ ರಸ್ತೆ ಬದಿ ವಿದ್ಯುತ್ ತಂತಿಗಳು ಹಾದು ಹೋಗುವುದು ಬಿಟ್ಟರೆ ಅರಣ್ಯದೊಳಗೆ ಬೆಂಕಿ ಹತ್ತಿಕೊಳ್ಳಲು ಇನ್ಯಾವುದೇ ಕಾರಣಗಳಿಲ್ಲ. ಇದರಿಂದಾಗಿ ಇದೊಂದು ಕಿಡಿಗೇಡಿಗಳ ಕೃತ್ಯ ಎಂಬುದನ್ನು ಸ್ವತಃ ಅರಣ್ಯಾಧಿಕಾರಿಗಳೇ ಒಪ್ಪಿದ್ದಾರೆ.

ಪ್ರತೀ ವರ್ಷ ಸರ್ಕಾರ ಅರಣ್ಯ ಇಲಾಖೆಯ ಮೂಲಕ ಸಸಿ ನೆಡಲು, ರಕ್ಷಿತಾರಣ್ಯದ ನಿರ್ವಹಣೆಗಾಗಿ ಕೋಟಿ, ಕೋಟಿ ಅನುದಾನ ಖರ್ಚು ಮಾಡುತ್ತಿದೆ. ಆದರೆ ಅವುಗಳ ರಕ್ಷಣೆ ಮಾಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಾಯಿತೇ.? ಅರಣ್ಯದೊಳಗೆ ಬೆಂಕಿ ಹತ್ತಿಕೊಂಡರೆ ವಾಹನ ಹೋಗುವುದು ಸಾಧ್ಯವೇ.? ಕನಿಷ್ಠ ನಡೆದಾಡಲೂ ಅಸಾಧ್ಯವಾದ ದಟ್ಟ ರಕ್ಷೀತಾರಣ್ಯದೊಳಗೆ ಇಂತಹ ಆಪತ್ಕಾಲದಲ್ಲಿ ಅಗ್ನಿಶಾಮಕ ವಾಹನ ಸಂಚರಿಸಲು ರಸ್ತೆ ನಿರ್ಮಿಸಬೇಕೆಂಬ ಬುದ್ಧಿಶಕ್ತಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇಲ್ಲದಿರುವುದು ವೃಕ್ಷ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
