ಯಾವುದೇ ಭೂಮಿ ಯನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸುವ ವಕ್ಫ್ ಮಂಡಳಿಯ ಪರಮಾಧಿಕಾರವನ್ನು ಕಡಿತಗೊಳಿಸುವುದು ಸೇರಿದಂತೆ ವಕ್ಫ್ ಕಾಯ್ದೆಯಲ್ಲಿ ಸುಮಾರು 40 ತಿದ್ದುಪಡಿಗಳನ್ನು ತರುವ ಮಸೂದೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವಕ್ಫ್ ಕಾಯ್ದೆಯನ್ನು ಮೊದಲು 1954 ರಲ್ಲಿ ಸಂಸತ್ತು ಅಂಗೀಕರಿಸಿತು. ಅದರ ನಂತರ, 1995 ರಲ್ಲಿ ತಿದ್ದುಪಡಿ ಮಾಡಲಾಯಿತು. ನಂತರ 2013 ರಲ್ಲಿ ಮಾಡಿದ ತಿದ್ದುಪಡಿಯು ವಕ್ಫ್ ಮಂಡಳಿಯ ಹಕ್ಕುಗಳನ್ನು ಮತ್ತಷ್ಟು ಬಲಪಡಿಸಿತು.
ವಕ್ಫ್ ಕಾಯ್ದೆ 1995 ರ ಪ್ರಕಾರ, ವಕ್ಫ್ ಎಂಬುದು ಮುಸ್ಲಿಂ ಕಾನೂನಿನಿಂದ ಪವಿತ್ರ, ಧಾರ್ಮಿಕ ಅಥವಾ ದತ್ತಿ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಅಥವಾ ಸಂಸ್ಥೆಯಿಂದ ಯಾವುದೇ ಉದ್ದೇಶಕ್ಕಾಗಿ ಚಲಿಸಬಲ್ಲ ಅಥವಾ ಸ್ಥಿರ ಆಸ್ತಿಯ ಶಾಶ್ವತ ಸಮರ್ಪಣೆಯಾಗಿದೆ.

ತಿದ್ದುಪಡಿ ವಿಧೇಯಕವು ವಕ್ಫ್ ಮಂಡಳಿಗಳು ತಮ್ಮ ಆಸ್ತಿಗಳನ್ನು ಜಿಲ್ಲಾಧಿಕಾರಿಗಳ ಬಳಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ. ದೇಶದಲ್ಲಿ 30 ವಕ್ಫ್ ಮಂಡಳಿಗಳು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ನೋಡಿಕೊಳ್ಳುತ್ತವೆ ಮತ್ತು ಎಲ್ಲಾ ವಕ್ಫ್ ಆಸ್ತಿಗಳಿಂದ ವಾರ್ಷಿಕವಾಗಿ 200 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂದು ಮೂಲಗಳು ತಿಳಿಸಿವೆ.
ನಾವು ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ, ವಕ್ಫ್ ಎಂಬುದು ಇಸ್ಲಾಂ ಧರ್ಮದಲ್ಲಿ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದಾನ ಮಾಡುವ ಆಸ್ತಿಯಾಗಿದೆ. ಇದನ್ನು ಧಾರ್ಮಿಕ ಚಟುವಟಿಕೆಗಳಿಗೆ, ಬಡವರಿಗೆ ಸಹಾಯ ಮಾಡಲು, ಶಿಕ್ಷಣ ಇತ್ಯಾದಿಗಳಿಗೆ ಬಳಸಲಾಗುತ್ತದೆ.
ವಕ್ಫ್‌ನ ಉತ್ತಮ ಆಡಳಿತ ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ ಸ್ಥಾಪನೆಗಾಗಿ ವಕ್ಫ್ ಕಾಯಿದೆ, 1995 ಅನ್ನು ತರಲಾಯಿತು. ಈ ಕಾಯಿದೆಯ ಮೂಲಕ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ವಕ್ಫ್ ಮಂಡಳಿಯನ್ನು ಸ್ಥಾಪಿಸಲಾಯಿತು. ಅದರ ವಿಭಾಗ 32 ಮಂಡಳಿಯ ಶಕ್ತಿ ಮತ್ತು ಕಾರ್ಯನಿರ್ವಹಣೆಯನ್ನು ಉಲ್ಲೇಖಿಸುತ್ತದೆ. ಇದರ ಪ್ರಕಾರ, ಔಕಾಫ್ (ದೇಣಿಗೆ ನೀಡಿದ ಆಸ್ತಿ) ಆದಾಯವನ್ನು ಔಕಾಫ್ ಅನ್ನು ರಚಿಸಲಾದ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ಮಂಡಳಿಯು ಖಚಿತಪಡಿಸಿಕೊಳ್ಳಬೇಕು. ಇದಲ್ಲದೇ ವಕ್ಫ್ ಮಂಡಳಿಯ ಕೆಲಸವು ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಮತ್ತು ಮುಸಾಫಿರ್ಖಾನಾಗಳಿಗೆ ಸಮಾಜ ಕಲ್ಯಾಣಕ್ಕಾಗಿ ಸಹಾಯ ಮಾಡುವುದು.
ಪ್ರಸ್ತುತ, ಭಾರತದಲ್ಲಿ ಸುಮಾರು 30 ವಕ್ಫ್ ಮಂಡಳಿಗಳಿವೆ. ಈ ವಕ್ಫ್ ಮಂಡಳಿಗಳೊಂದಿಗೆ ಸಮನ್ವಯಗೊಳಿಸಲು ಕೇಂದ್ರೀಯ ವಕ್ಫ್ ಕೌನ್ಸಿಲ್ ಅನ್ನು ರಚಿಸಲಾಗಿದೆ.
ಪ್ರಸ್ತುತ, ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ವಕ್ಫ್ ಮಂಡಳಿಗಳಿವೆ. 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಅದಕ್ಕೆ 2013ರಲ್ಲಿ ಕೆಲ ತಿದ್ದುಪಡಿ ತರಲಾಗಿದೆ. ಬಿಜೆಪಿ ಮತ್ತು ಸಂಘಪರಿವಾರ ವಕ್ಫ್ ಕಾಯ್ದೆ ಮತ್ತು ಮಂಡಳಿಗಳನ್ನು ವಿರೋಧಿಸುತ್ತಾ ಬಂದಿವೆ.
ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್ ಮಂಡಳಿಗಳ ಅಧಿಕಾರವನ್ನು ಕಡಿತಗೊಳಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ಆಸ್ತಿ ಮಾಲೀಕತ್ವ: ಡಿ.ಸಿ ತನಿಖೆ
1995ರ ಕಾಯ್ದೆಯ 3ನೇ ಸೆಕ್ಷನ್‌ಗೆ ಮೂರು ಹೊಸ ಉಪ ಸೆಕ್ಷನ್‌ಗಳನ್ನು (3ಎ, 3ಬಿ, 3ಸಿ) ಮಸೂದೆಯಲ್ಲಿ ಸೇರಿಸಲಾಗಿದೆ. 3ಬಿ ಪ್ರಕಾರ, ಎಲ್ಲ ವಕ್ಫ್ ಆಸ್ತಿಯನ್ನು ಈ ಕಾಯ್ದೆಯ ಅಡಿಯಲ್ಲಿ ನೋಂದಣಿ ಮಾಡಬೇಕು. 2024ರ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಕ್ಕೂ ಮೊದಲು ನೋಂದಣಿ ಮಾಡಿಕೊಂಡಿರುವ ಆಸ್ತಿಯ ವಿವರಗಳನ್ನು ಆರು ತಿಂಗಳ ಒಳಗಾಗಿ ಪೋರ್ಟಲ್, ಡಾಟಾಬೇಸ್‌ಗೆ ಅಪ್‌ಲೋಡ್ ಮಾಡಬೇಕು. 3ಸಿ ಪ್ರಕಾರ, ಈ ಕಾಯ್ದೆ ಜಾರಿಗೆ ಬರುವುದಕ್ಕೆ ಮುನ್ನ ಅಥವಾ ನಂತರ ವಕ್ಫ್ ಆಸ್ತಿ ಎಂದು ಗುರುತಿಸಲಾದ ಅಥವಾ ಘೋಷಿಸಲಾದ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸುವಂತಿಲ್ಲ. ಒಂದು ವೇಳೆ, ನಿರ್ದಿಷ್ಟ ಆಸ್ತಿ ಸರ್ಕಾರಕ್ಕೆ ಸೇರಿದೆಯೇ ಎಂಬ ಪ್ರಶ್ನೆ ಬಂದರೆ ಈ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು. ಅವರು ಈ ಬಗ್ಗೆ ತನಿಖೆ ನಡೆಸಿ ಅದು ಸರ್ಕಾರಿ ಆಸ್ತಿಯೇ ಅಲ್ಲವೇ ಎಂಬುದನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅವರು ವರದಿ ಸಲ್ಲಿಸುವವರೆಗೂ ಆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಗುರುತಿಸುವಂತಿಲ್ಲ.
ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿ
ಮೂಲ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸರ್ವೆ ನಡೆಸಲು ರಾಜ್ಯ ಸರ್ಕಾರ ಸರ್ವೆ ಆಯುಕ್ತರನ್ನು ನೇಮಕ ಮಾಡಬೇಕು. ಆದರೆ, ಈಗಿನ ತಿದ್ದುಪಡಿ ಮಸೂದೆಯಲ್ಲಿ ಈ ಜವಾಬ್ದಾರಿಯನ್ನು ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಯವರ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳ ಅನುಸಾರ ಆಸ್ತಿಗಳ ಸರ್ವೆ ಕಾರ್ಯ ನಡೆಯಬೇಕು. ನಂತರ ಅವರು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸೆಕ್ಷನ್ 5ರ 2ಎ ಮತ್ತು 3ಬಿ ಉಪ ಸೆಕ್ಷನ್‌ಗಳನ್ನು ಸೇರಿಸಲಾಗಿದ್ದು, ಆಸ್ತಿಯ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿದ 15 ದಿನಗಳ ಒಳಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಆಸ್ತಿಯ ವಿವರಗಳನ್ನು ಪೋರ್ಟಲ್ ಮತ್ತು ಡಾಟಾಬೇಸ್‌ಗೆ ಅಪ್‌ಲೋಡ್ ಮಾಡಬೇಕು. ಜಮೀನಿನ ದಾಖಲೆಗಳ ಹಕ್ಕು ಬದಲಾವಣೆಗಳ ಬಗ್ಗೆ ನಿರ್ಧರಿಸುವುದಕ್ಕೂ 90 ದಿನಗಳ ಮೊದಲು ಈ ಬಗ್ಗೆ ಸಾರ್ವಜನಿಕ ನೋಟಿಸ್ ನೀಡಬೇಕು.
ಕೇಂದ್ರ ಸರ್ಕಾರದಿಂದ ಆಡಿಟ್
ವಕ್ಫ್ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಗೆ (ಆಡಿಟ್) ಸಂಬಂಧಿಸಿದ ಸೆಕ್ಷನ್ 47ಕ್ಕೆ ಹೊಸ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದ್ದು, ರಾಜ್ಯ ಸರ್ಕಾರ ಸಿದ್ಧಪಡಿಸುವ ಲೆಕ್ಕ ಪರಿಶೋಧಕರ ಸಮಿತಿಯು ಲೆಕ್ಕ ಪರಿಶೋಧನೆ ಮಾಡಬೇಕು. ಮೂಲ ಕಾಯ್ದೆಯಲ್ಲಿ, ವಕ್ಫ್ ಮಂಡಳಿ ನೇಮಿಸುವ ಲೆಕ್ಕಪರಿಶೋಧಕರು ಲೆಕ್ಕಪರಿಶೋಧನೆ ಮಾಡಲು ಅವಕಾಶ ಇತ್ತು. ಇದರೊಂದಿಗೆ ರಾಜ್ಯ ಸರ್ಕಾರವೂ ಲೆಕ್ಕ ಪರಿಶೋಧನೆ ಮಾಡಬಹುದಿತ್ತು. ಸೆಕ್ಷನ್ 48ಕ್ಕೆ ಮಾಡಿರುವ ತಿದ್ದುಪಡಿಯು ಲೆಕ್ಕಪರಿಶೋಧನೆ ನಡೆಸಲು ಕೇಂದ್ರ ಸರ್ಕಾರಕ್ಕೂ ಅವಕಾಶ ನೀಡುತ್ತದೆ. ಕೇಂದ್ರ ಸರ್ಕಾರವು ಯಾವುದೇ ಸಂದರ್ಭದಲ್ಲಿ ಮಹಾಲೇಖಪಾಲರು ನೇಮಿಸುವ ಲೆಕ್ಕಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಲು ಆದೇಶ ನೀಡಬಹುದು. ಲೆಕ್ಕಪರಿಶೋಧನಾ ವರದಿಯನ್ನು ಯಾವುದೇ ರೂಪದಲ್ಲಿ ಪ್ರಕಟ ಮಾಡಲೂ ಕೇಂದ್ರ ಆದೇಶಿಸಬಹುದು.
ಮಹಿಳೆ, ಮುಸ್ಲಿಮೇತರರಿಗೆ ಸ್ಥಾನ
ಮಸೂದೆಯಲ್ಲಿ ಕಾಯ್ದೆಯ 9ನೇ ಸೆಕ್ಷನ್ನಿನ 2ನೇ ಉಪ ಸೆಕ್ಷನ್‌ಗೆ ತಿದ್ದುಪಡಿ ತರಲಾಗಿದ್ದು, ಅದರ ಪ್ರಕಾರ, ಕೇಂದ್ರ ವಕ್ಫ್ ಮಂಡಳಿಯನ್ನು ರಚಿಸುವಾಗ ಕೇಂದ್ರ ಸರ್ಕಾರ ನೇಮಕ ಮಾಡುವ ಸದಸ್ಯರಲ್ಲಿ ಇಬ್ಬರು ಮಹಿಳೆಯರು ಇರಬೇಕು. ಅದೇ ರೀತಿ, ಮುಸ್ಲಿಮೇತರ ಸಮುದಾಯದ ಇಬ್ಬರು ಸದಸ್ಯರನ್ನು ನೇಮಕ ಮಾಡಬೇಕು ಎಂದು ಹೇಳಿದೆ. ಉಳಿದಂತೆ ಮಂಡಳಿಯ ಸ್ವರೂಪ ಮೂಲ ಕಾಯ್ದೆಯಲ್ಲಿ ನಿರೂಪಿಸಿದಂತೆಯೇ ಇದೆ. ಸೆಕ್ಷನ್ 14, ರಾಜ್ಯ ವಕ್ಫ್ ಮಂಡಳಿ ರಚನೆಯ ಕುರಿತಾಗಿದ್ದು, ಹೊಸ ಮಸೂದೆಯಲ್ಲಿ ಉಪ ಸೆಕ್ಷನ್‌ಗಳಾದ 1, 1ಎ, 2, 3 ಮತ್ತು 4ಕ್ಕೆ ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, ರಾಜ್ಯ ವಕ್ಫ್ ಮಂಡಳಿಗಳಿಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮುಸ್ಲಿಮೇತರರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ಶಿಯಾ, ಸುನ್ನಿ ಮತ್ತು ಮುಸ್ಲಿಂ ಸಮುದಾಯದ ಇತರ ಹಿಂದುಳಿದ ವರ್ಗಗಳಿಂದ ತಲಾ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು.
ಇದೀಗ ಬಿಜೆಪಿ ವಕ್ಫ್ ಕಾಯ್ದೆ ತಿದ್ದುಪಡಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ದೇಶಾದ್ಯಂತ ಮುಸ್ಲಿಮರು ಹೋರಾಟಕ್ಕೆ ಇಳಿದಿದ್ದಾರೆ.
