ಬಿಜೆಪಿ ಯು.ಮೋ ಅಧ್ಯಕ್ಷರಾದವರು ಭವಿಷ್ಯತ್ತಿನ ರಾಜಕಾರಣಿ ಆಗುವುದು ಪಕ್ಕಾ. ಕಾಂಗ್ರೆಸ್ಸಿನಲ್ಲಿ ಅಂತಹ ಟ್ರೆಂಡ್ ಇಲ್ಲದೆ ಇರುವುದು ಪಕ್ಷ ಸೊರಗಲು ಕಾರಣ.
ಕಳೆದೊಂದು ತಿಂಗಳಿನಿಂದ ರಾಜ್ಯದ ಕಾಂಗ್ರೆಸ್‌ನಲ್ಲಿ ಹೆಚ್ಚು ಸುದ್ಧಿ ಮಾಡಿದ್ದು ಯುವ ಕಾಂಗ್ರೆಸ್ ಚುನಾವಣೆ. ಹಲವಾರು ತಿಂಗಳ ಹಿಂದೆ ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆದರೂ ಫಲಿತಾಂಶ ಹೊರಬಿದ್ದಿದ್ದು ಇತ್ತೀಚೆಗೆ, ಸ್ಪರ್ಧಿಸಿ ದವರೆಲ್ಲ ಗೆದ್ದಿದ್ದಾರೆ. ಕಾಂಗ್ರೆಸ್ ಯುವ ಕಾರ್ಯಕರ್ತರಂತೂ ಜಗತ್ತು ಗೆದ್ದ ಖುಷಿಯಲ್ಲಿದ್ದಾರೆ. ಅಲ್ಲಲ್ಲಿ ನಾಯಕರ ಭೇಟಿ, ಸನ್ಮಾನ, ಹಾರ, ತುರಾಯಿ ಎಲ್ಲವೂ ನಡೆಯುತ್ತಿದೆ. ಅಷ್ಟಕ್ಕೂ ಯುವ ಕಾಂಗ್ರೆಸ್ಸಿಗೇಕೆ ಅಷ್ಟು ಮಹತ್ವ? ಯುವಕಾಂಗ್ರೆಸ್ ಅಧ್ಯಕ್ಷರಾದವರು ರಾಜಕಾರಣದಲ್ಲಿ ಮಿಂಚುತ್ತಿದ್ದರಾ…. ಈ ಬಗೆಗಿನ ಸ್ಪೆಷಲ್ ವರದಿ ಇಲ್ಲಿದೆ.
ಭಾರತೀಯ ಜನತಾಪಾರ್ಟಿ ಕೇಡರ್ ಬೈಸ್ ಪಕ್ಷವಾಗಿದ್ದು, ಜನಪ್ರತಿನಿಧಿಗಿಂತ ಪಕ್ಷದ ಹುದ್ದೆಗೆ ಹೆಚ್ಚು ಮಹತ್ವ. ಪ್ರತಿಯೊಂದು ಘಟಕಗಳು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರುತ್ತಾರೆ. ಪಕ್ಷದ ಸಭೆಯಲ್ಲಿ ಶಾಸಕರು ಅಥವಾ ಜನಪ್ರತಿನಿಧಿಗಳು ಸಾಮಾನ್ಯ ಕಾರ್ಯ ಕರ್ತರ ರೀತಿ ಕುಳಿತು ಕೊಳ್ಳಬೇಕಾಗುತ್ತದೆ. ಪಕ್ಷದ ವಿವಿಧ ಘಟಕಗಳ ಜವಾಬ್ದಾರಿ ಹೊತ್ತವರೇ ಸುಪ್ರೀಂ. ಅವರ ಮಾತು, ನಿರ್ಣಯಕ್ಕೆ ಜನಪ್ರತಿನಿಧಿಗಳು ಸಾಥ್ ಕೊಡಲೇಬೇಕು. ಇಲ್ಲವಾದರೆ ಅಂತಹ ವ್ಯಕ್ತಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ತಪ್ಪಬಹುದು. ಪಕ್ಷದ ಜವಾಬ್ದಾರಿ ಹೊತ್ತವರು ತಳಮಟ್ಟದಲ್ಲಿ ವಿವಿಧ ಘಟಕಗಳನ್ನು ಪುನರ್ರಚಿಸಿ ಪಕ್ಷದ ಗೆಲುವಿಗೆ ಆಹೋರಾತ್ರಿ ದುಡಿಯುತ್ತಾರೆ. ಬಿಜೆಪಿಯಲ್ಲಿ ನಾಯಕರ ಹಿಂಬಾಲಕರು ಕಡಿಮೆ. ಖದ್ದರ್ ತೊಟ್ಟು ಹಿಂದೆ ಮುಂದೆ ಸುತ್ತಾಡುವುದಿಲ್ಲ. ಸೆಲ್ಫಿಗಂತೂ ಅವಕಾಶವೇ ಇಲ್ಲ. ಅಂತಹ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲ. ನಾಯಕನಾದವನು ಪಕ್ಷದ ಕಾರ್ಯಕರ್ತರ ಬಳಿ ಬರಲೇಬೇಕು. ಬಿಜೆಪಿಯ ಗೆಲುವಿನ ದೊಡ್ಡ ರಹಸ್ಯವೇ ಇದು.

ಆಡಂಭರವಿಲ್ಲ. ಪಕ್ಷ ಸಂಘಟನೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಅಂತಹವರಿಗೆ ಪಕ್ಷದ ನಾಯಕರಿಂದ ಬೆಂಬಲವೂ ದೊರೆಯುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ತದ್ವಿರುದ್ದ. ಇಲ್ಲಿ ನಾಯಕನಿಗೆ ಬೆಲೆ ಜಾಸ್ತಿ, ಪಕ್ಷದ ಕಾರ್ಯಕರ್ತರಿಗೆ ಬೆಲೆನೇ ಇಲ್ಲ. ದುಡ್ಡಿದ್ದವರು, ಕೆಫಾಸಿಟಿ ಇದ್ದವರು ಬೆಂಗಳೂರಿಗೆ ತೆರಳಿ ಪಕ್ಷದ ಹುದ್ದೆ ಪಡೆದುಕೊಂಡು ಬರುತ್ತಾರೆ. ವಲಯ, ಬೂತ್, ಬ್ಲಾಕ್ ಕಮಿಟಿಗಳೆಲ್ಲ ನಾಮ್‌ಕಾವಸ್ಥೆ, ಪಕ್ಷದ ವಿವಿಧ ಘಟಕಗಳು ಜೀವಂತವೇ ಇರುವುದಿಲ್ಲ. ಹೆಸರಿಗಷ್ಟೇ ಚುನಾವಣೆ ಬಂದಾಗ ವರ್ಷಕ್ಕೊಂದು ಸಭೆ ನಡೆಸುತ್ತಾರೆ. ಶಾಸಕ ಅಥವಾ ಜನಪ್ರತಿನಿಧಿಗಳು ಸಭೆಯನ್ನು ಹೈಜಾಕ್ ಮಾಡುತ್ತಾರೆ. ತಮ್ಮ ಹಿಂಬಾಲಕರದ್ದೇ ಅಲ್ಲಿ ನಡೆಯುವುದು. ಸಾಮಾನ್ಯ ಕಾರ್ಯಕರ್ತರು ಗಪ್‌ಚುಪ್, ಖದ್ದರ್ ಬಟ್ಟೆ ತೊಟ್ಟು ನಾಯಕರ ಎಡ-ಬಲಗಳಲ್ಲಿ ಸುತ್ತಾಡುವವರಿಗೆ ಇಲ್ಲಿ ಬೆಲೆ. ಕನಿಷ್ಠ ಐದು, ಹತ್ತು ಓಟು ಗಿಟ್ಟಿಸಿಕೊಳ್ಳಲು ಕೆಫಾಸಿಟಿ ಇಲ್ಲದವರು ನಾಯಕರಂತೆ ಪೋಸ್ ಕೊಡುತ್ತಾರೆ. ಪ್ರಾಮಾಣಿಕ ಕಾರ್ಯಕರ್ತನಿಗಂತೂ ಇಲ್ಲಿ ಬೆಲೆ ಇಲ್ಲ. ಹೆಸರಿಗೊಂದು ಹುದ್ದೆ ಇರುತ್ತದೆ. ವೇದಿಕೆ ಸನ್ಮಾನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಪಕ್ಷವನ್ನು ತಳಮಟ್ಟದಲ್ಲಿ ಕಟ್ಟುವ ಯೋಚನೆಯಂತೂ ಇರುವುದಿಲ್ಲ. ಪ್ರಾಮಾಣಿಕ ಕಾರ್ಯಕರ್ತರಿಗೆ ನಾಯಕರು ಕೂಡಾ ಸಾಥ್ ಕೊಡುವುದಿಲ್ಲ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದರಲ್ಲಿಯೇ ಖುಷಿ ಕಾಣುತ್ತಾರೆ. ಪಕ್ಷವನ್ನು ಅಧೋ ಗತಿಗೆ ತಳ್ಳುತ್ತಾರೆ.

ಒಂದು ರಾಜಕೀಯ ಪಕ್ಷ ಜೀವಂತಿಕೆ ಪಡೆಯುವುದಾದರೆ ಅದಕ್ಕೊಂದು ಯುವ ಕಾರ್ಯಕರ್ತರ ದಂಡು ಇರಬೇಕು. ಬಿಜೆಪಿಯಲ್ಲಿ ಸಶಕ್ತ ಯುವ ಪಡೆಗಳಿವೆ. ಆದರೆ ಕಾಂಗ್ರೆಸ್ಸಿನಲ್ಲಿ ಇರುವ ಯುವ ಪಡೆ ಒಬ್ಬೊಬ್ಬ ನಾಯಕರ ಹಿಂಬಾಲಕರಾಗಿಯೇ ಕೆಲಸ ಮಾಡುತ್ತದೆಯೇ ಹೊರತು ಪೂರ್ಣವಾಗಿ ಪಕ್ಷದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವುದಿಲ್ಲ. ಇದು ಕಾಂಗ್ರೆಸ್ಸಿನ ಒಟ್ಟಾರೆ ಹಿನ್ನಡೆಗೆ ಕಾರಣ.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ದಶಕಗಳ ಕಾಲ ಕೆಲಸ ಮಾಡಿದವರು ರಮಾನಾಥ ರೈ, ಆ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಶಾಸಕರಾಗಿ, ಮಂತ್ರಿಯಾಗಿ ಉನ್ನತ ಸ್ಥಾನಕ್ಕೇರಿದರು. ರಮಾನಾಥ ರೈಯವರನ್ನು ಬಿಟ್ಟರೆ ಬೇರೆ ಯಾವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೇರಿದ ಇತಿಹಾಸವೇ ಇಲ್ಲ. ಮಿಥುನ್ ರೈ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆ ನಂತರ ಮೂಡಬಿದ್ರೆ ವಿಧಾನ ಸಭಾ, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲುವು ಕಾಣಲು ಸಾಧ್ಯವಾಗಿಲ್ಲ. ಕಾಂಗ್ರೆಸ್ಸಿನ ದುರಂತ ನಾಯಕ ಅನ್ನುವ ಕೀರ್ತಿ ಇವರದ್ದು. ಕಳ್ಳಿಗೆ ತಾರನಾಥ ಶೆಟ್ಟಿ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದರೆ ಅವರು ಆನಂತರ ರಾಜಕಾರಣದಲ್ಲಿ ಎದ್ದೇಳಲೇ ಇಲ್ಲ.
ಬೊಂಡಾಲ ಜಗನ್ನಾಥ ಶೆಟ್ಟಿ 2001ರಿಂದ 2009ರ ಅವಧಿಗೆ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಡೈನಾಮಿಕ್ ರಾಜಕಾರಣಿ, ಶಾಸಕನಾಗುವ ಎಲ್ಲಾ ಅರ್ಹತೆಯೂ ಇತ್ತು. ಆದರೆ ಬೆಳೆಯುತ್ತಿರುವಾಗಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಲುಕ್ಮಾನ್ ಬಂಟ್ವಾಳ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದರೆ ಯುವ ಕಾಂಗ್ರೆಸ್ ಬಣ ಬಡಿದಾಟದಿಂದ ಲುಕ್ಮಾನ್ ಮೇಲೇಳಲೇ ಇಲ್ಲ. ಯುವ ಕಾಂಗ್ರೆಸ್ಸಿನಲ್ಲಿ ಕಾರ್ಯಾಧ್ಯಕ್ಷ ಅನ್ನುವ ಹುದ್ದೆ ಸೃಷ್ಟಿಸಿ ಲುಕ್ಮಾನ್ ರನ್ನು ಕಾಂಗ್ರೆಸ್ಸಿಗರೇ ಚಿವುಟಿ ಹಾಕಿದರು. ಇದೀಗ ನವಾಝ್ ಗಾಣೆಮಾರ್ ಅನ್ನುವ ಯುವ ನಾಯಕನಿಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ದೊರಕಿದೆ. ನವಾಝ್ ಎಸ್‌ಡಿಪಿಐನಿಂದ ರಾಜಕಾರಣ ಆರಂಭಿಸಿ ಆನಂತರ ಕಾಂಗ್ರೆಸ್ ಪಕ್ಷ ಸೇರಿದವರು. ಸಂಘಟಕ ಅನ್ನುವುದರಲ್ಲಿ ಎರಡು ಮಾತಿಲ್ಲ. ಪಾಣೆ ಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಹಲವಾರು ಕಾರ್ಯಕ್ರಮ ನಡೆಸಿ ಪಕ್ಷದ ಬೆಳವಣಿಗೆಗೆ ಸಹ ಕಾರಿಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನವಾಝ್‌ರ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದರು. ಆದರೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವೇ? ಬಣ ಬಡಿದಾಟ ಮೀರಿ ಯುವ ಕಾಂಗ್ರೆಸ್ಸಿಗೆ ಪುನರ್ಜನ್ಮ ತರುವರೇ? ರಮಾನಾಥ ರೈಯವರ ನಂತರ ಯುವಕಾಂಗ್ರೆಸ್ ಅಧ್ಯಕ್ಷರಾದವರು ಉನ್ನತ ಹುದ್ದೆಗೇರಿದ ಇತಿಹಾಸ ಇಲ್ಲ. ಇದನ್ನು ನವಾಝ್ ತೊಡೆದು ಹಾಕುವರೇ? ಕಾದು ನೋಡಬೇಕಿದೆ.

ಇನ್ನು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದವರು ಆನಂತರ ರಾಜಕಾರಣದ ಉತ್ತುಂಗದ ಶಿಖರಕ್ಕೇರಿದ್ದು ಇದೆ. ಕೆಲವೊಬ್ಬರಿಗೆ ಆ ಅವಕಾಶ ಸಿಗಲಿಲ್ಲ ಅಷ್ಟೇ. 2016ರಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾಗಿದ್ದರು. ಇದೀಗ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಪ್ರಸ್ತುತ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿರುವ ಹರೀಶ್ ಪೂಂಜಾ ಇಂದು ಬೆಳ್ತಂಗಡಿಯ ಶಾಸಕರಾಗಿದ್ದಾರೆ. ಹಿಂದುತ್ವದ ನಾಯಕರಾಗಿ ಮಿಂಚುತ್ತಿದ್ದಾರೆ. ಕಿಶೋರ್ ಕುಮಾರ್ ಪುತ್ತೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿದ್ದರು.
ಇದೀಗ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಪ್ರಸ್ತುತ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾಗಿರುವ ಉಳ್ಳಾಲ ನಂದನ್ ಮಲ್ಯ ಯುವ ಉದ್ಯಮಿಯಾಗಿದ್ದು, ಮುಂದಿನ ಉಳ್ಳಾಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದವರು ಭವಿಷ್ಯತ್ತಿನ ರಾಜಕಾರಣಿ ಆಗುವುದು ಪಕ್ಕಾ. ಆದರೆ ಕಾಂಗ್ರೆಸ್ಸಿನಲ್ಲಿ ಅಂತಹ ಟ್ರೆಂಡ್ ಇಲ್ಲದೆ ಇರುವುದು ಪಕ್ಷ ಸೊರಗಲು ಕಾರಣ.
