ಬಂಟ್ವಾಳ ಪುರಸಭೆ: ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಹಾಗೂ ಡಿಜಿಟಲ್ ವಹಿವಾಟಿನ ಬಗ್ಗೆ ಮಾಹಿತಿ ಕಾರ್ಯಕ್ರಮ

ಕರಾವಳಿ

ಬಂಟ್ವಾಳ ಪುರಸಭೆಯಲ್ಲಿ ಡೇ ನಲ್ಮ್‌ ಅಭಿಯಾನದಡಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್‌ ನಿಧಿ (ಪಿ.ಯಂ .ಸ್ವ ನಿಧಿ) , ಸ್ವ ನಿಧಿ ಸೆ ಸಮೃದ್ಧಿ ಮೇಳ ಹಾಗೂ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಮೂಲಕ ಡಿಜಿಟಲ್‌ ವಹಿವಾಟಿನ ಬಗ್ಗೆ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಪುರಸಭೆಯ ಅಧ್ಯಕ್ಷರಾದ ವಾಸು ಪೂಜಾರಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು . ‘ಬೀದಿ ಬದಿ ವ್ಯಾಪಾರಿಗಳು ಸರ್ಕಾರದಿಂದ ನೀಡುವಂತಹ ಸವಲತ್ತುಗಳನ್ನು ಬಳಸಿಕೊಂಡು ಭಾರತ ದೇಶವನ್ನು ಸರಳ ಭಾರತವನ್ನಾಗಿ ರೂಪಿಸುವಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ.ಮೊಬೈಲ್‌ ಮೂಲಕ ಹಣ ಪಾವತಿಸಲು ಡಿಜಿಟಲ್‌ ಪಾವತಿ ಒಳ್ಳೆಯ ಅವಕಾಶ’ ಎಂದರು. ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮಾತನಾಡಿ ‘ಡಿಜಿಟಲ್‌ ವ್ಯವಹಾರದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಡಿಜಿಟಲ್‌ ಆಪ್‌ ಗಳನ್ನು ಬಳಸುವಾಗ ಜಾಗೃತರಾಗಿರಬೇಕು. ಇದರ ಬಗ್ಗೆ ತಿಳಿದುಕೊಂಡು ವ್ಯವಹರಿಸಬೇಕು. ಎಲ್ಲರೂ ಡಿಜಿಟಲ್‌ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಧೃಡರಾಗಿರಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್‌ ಡಿಸೋಜ ಮಾತನಾಡಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್‌ ವ್ಯಹಾರದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು . ಆರೋಗ್ಯ ನಿರೀಕ್ಷಕರಾದ ರತ್ನ ಪ್ರಸಾದ್‌ ಸ್ವಚ್ಛತೆಯ ಬಗ್ಗೆ ಹಾಗೂ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಮಾಹಿತಿ ನೀಡಿದರು. ಅಭಿಯಾನ ವ್ಯವಸ್ಥಾಪಕರಾದ ಐರಿನ್‌ ರೆಬೆಲ್ಲೊ ಡೇ ನಲ್ಮ್‌ ಯೋಜನೆ ಹಾಗು ಪಿ.ಯಂ ಸ್ವ ನಿಧಿ ಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಸ್ವ ಸಹಾಯ ಸಂಘದವರಿಗೆ ಪ್ಲಾಸ್ಟಿಕ್‌ ಉಪಯೋಗಿಸದಂತೆ ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಪುರಸಭಾ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಗುರುತಿಸುವಿಕೆಗೆ ಗುರುತು ಪತ್ರ ವಿತರಿಸಲಾಯಿತು. ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ನ ಮ್ಯಾನೇಜರ್‌ ಶ್ರೀಹಾಸ್‌ ಹಾಗೂ ಸಿಬ್ಬಂದಿಗಳು ಭಾಗವಹಿಸಿ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಬಗ್ಗೆ ಮಾಹಿತಿ ನೀಡಿದರು. ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಮರ್ಚೆಂಟ್‌ ಕ್ಯೂ ಆರ್‌ ಕೋಡ್‌ ಹಾಗೂ ಪೋಸ್ಟ್‌ ಪೇಮೆಂಟ್‌ ಬ್ಯಾಂಕಿಂಗ್‌ ನ ಸದುಪಯೋಗ ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಿ.ಸಿ ರೋಡ್‌ ಶಾಖೆಯ ಸಿಬ್ಬಂದಿ, ಒಕ್ಕೂಟದ ಅಧ್ಯಕ್ಷರಾದ ವಸಂತಿ, ಪಟ್ಟಣ ಮಾರಾಟ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಿ. ಆರ್‌ ಪಿ.ಗೀತಾ ಸ್ವಾಗತಿಸಿ ಸಮುದಾಯ ಸಂಘಟಕಿಯಾದ ಉಮಾವತಿ ಕಾರ್ಯಕ್ರಮ ನಿರೂಪಿಸಿ ಸಿ. ಆರ್.ಪಿ. ಮಂಗಳ ಧನ್ಯವಾದಗೈದರು.