ವಿಟ್ಲದ ಖಾಸಗಿ ಬಸ್ ಸ್ಟ್ಯಾಂಡ್ ಹಿಂಬದಿಯ ಕೆರೆಯಲ್ಲಿ ಸಿಕ್ಕಿದ್ದು ವೇಷಧಾರಿ ಸುಂದರನ ಮೃತದೇಹವೇ.?
ಇಲ್ಲಿನ ಖಾಸಗಿ ಬಸ್ ಸ್ಟ್ಯಾಂಡ್ ಹಿಂಬದಿಯ ಪಾಳುಬಿದ್ದ ಕೆರೆಯಲ್ಲಿ ಪುರುಷನ ಮೃತದೇಹದ ಅವಶೇಷಗಳು ಪತ್ತೆಯಾಗಿದೆ.
ಬಸ್ ಸ್ಟ್ಯಾಂಡ್ ಹಿಂಬದಿಯ ಕಾಲುದಾರಿ ಬದಿಯ ಖಾಸಗಿ ವ್ಯಕ್ತಿಯೊಬ್ಬರ ಆವರಣ ಗೋಡೆಯಿಲ್ಲದ ಗಿಡಗಂಟಿಗಳಿಂದ ಆವೃತವಾದ ಪಾಳುಬಿದ್ದ ಕೆರೆಯಲ್ಲಿ ಪತ್ತೆಯಾಗಿದೆ.
ಶುಕ್ರವಾರ ಸಂಜೆ ಏನೋ ದುರ್ನಾತ ಬರುತ್ತಿದ್ದ ಕಾರಣ ಮನೆಯವರು ಕೆರೆಯ ಕಡೆ ನೋಡಿದಾಗ ನೀರಿನಲ್ಲಿ ಪ್ಯಾಂಟ್, ಫುಲ್ ಕೈ ಶರ್ಟ್ ಧರಿಸಿದ್ಧ ಮೃತದೇಹದ ರೀತಿಯಲ್ಲಿ ಕಂಡುಬಂದಿತ್ತು. ತಕ್ಷಣವೇ ಪೊಲೀಸರಿಗೆ ಮನೆಯವರು ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಗುರುತು ಹಿಡಿಯಲಾರದ ಸ್ಥಿತಿಯಲ್ಲಿ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ.

ಸಾಮಾಜಿಕ ಕಾರ್ಯಕರ್ತ ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದವರು ಹಗ್ಗದ ಮೂಲಕ ಕೆರೆಗೆ ಇಳಿದಾಗ ಮಾಂಸದ ಮುದ್ದೆಯಂತಿರುವ ಮೃತದೇಹದ ಅವಶೇಷಗಳು ಕಂಡುಬಂದಿದೆ. ಬುಟ್ಟಿಯ ಮೂಲಕ ತುಂಬಿಸಿ ಪೊಲೀಸರ ಸಮ್ಮುಖದಲ್ಲಿ ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡದ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸುಮಾರು ಎರಡು-ಮೂರು ತಿಂಗಳ ಹಿಂದೆ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಆರು ತಿಂಗಳ ಹಿಂದೆ ನವರಾತ್ರಿ ಹಬ್ಬದ ಸಂದರ್ಭ ವೇಷ ಹಾಕಲು ಪರವಾನಿಗೆ ಪಡೆಯಲೆಂದು ಮನೆಯವರಲ್ಲಿ ಹೇಳಿ ಹೋಗಿದ್ದ ವಿಟ್ಲ ಪಳಿಕೆ ನಿವಾಸಿ ಸುಂದರ ನಾಯ್ಕ ಇನ್ನೂ ಪತ್ತೆಯಾಗಿಲ್ಲ. ಮೃತದೇಹದ ಅವಶೇಷಗಳು ಪತ್ತೆಯಾದ ಸುದ್ದಿ ಹಬ್ಬುತ್ತಿದ್ದಂತೆಯೇ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ವೇಷಧಾರಿ ಸುಂದರ ನಾಪತ್ತೆಯಾದ ದಿನ ಧರಿಸಿದ್ದ ಪಿಂಕ್ ಬಣ್ಣದ ಉದ್ದತೋಳಿನ ಅಂಗಿಯನ್ನೇ ಹೋಲುವ ಬಟ್ಟೆ ಮೃತದೇಹದ ಅವಶೇಷಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಇದು ವೇಷಧಾರಿ ಸುಂದರನ ಮೃತದೇಹವೇ ಎಂಬ ಸಂಶಯ ವ್ಯಕ್ತವಾಗಿದೆ.
ಆದರೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದ ವ್ಯಕ್ತಿಗಳ ಕುಟುಂಬಸ್ಥರನ್ನು ನಾಳೆ(ಶನಿವಾರ) ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ದು ಡಿ.ಎನ್.ಎ.ಪರೀಕ್ಷೆಗೆ ಒಳಪಡಿಸಿದ ಬಳಿಕವಷ್ಟೇ ಮೃತ ವ್ಯಕ್ತಿ ಯಾರು, ಎಲ್ಲಿಯವರೆಂಬ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
