ಮಂಗಳೂರಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಅತ್ತಾವರದ ನಂದಿಗುಡ್ಡೆ ಫ್ಲ್ಯಾಟ್‌ನಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲಾ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. 2022 ರಲ್ಲಿ ಈ ಘಟನೆ ನಡೆದಿತ್ತು.
ಮಂಗಳೂರಿನ ಮುಸ್ಲಿಂ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದ ಹಿಂದೆ ಪ್ರಭಾವೀಗಳು, ರಾಜಕಾರಣಿಗಳು ಶಾಮೀಲಾಗಿದ್ದರು. ಉಳ್ಳಾಲದ ಪ್ರಮುಖ ರಾಜಕಾರಣಿಗಳ ಸಹವರ್ತಿಗಳು ಹಾಗೂ ಬಿಲ್ಡರ್ ಗಳು ಸೇರಿದಂತೆ ಈ ಪ್ರಕರಣದಲ್ಲಿ 17 ಮಂದಿಯನ್ನು ಅಂದಿನ ಪೊಲೀಸ್ ಆಯುಕ್ತರಾದ ಶಶಿಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿತ್ತು.
ಕಾಸರಗೋಡಿನ ಉಪ್ಪಳದ ಶಮೀನಾ ಎಂಬಾಕೆ ಆಕೆಯ ಪತಿ ಅಬೂಬಕರ್ ಸಿದ್ದಿಕ್ ಮತ್ತು ಸಹವರ್ತಿಗಳಾದ ಅಸ್ಮಾ, ಐಸಮ್ಮ, ರೆಹಮತ್ ಮತ್ತು ಉಮ್ಮರ್ ಕುಂಞಿ ಅವರೊಂದಿಗೆ ಸೇರಿ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿತ್ತು.

ಪೊಲೀಸ್ ತನಿಖೆಯ ಪ್ರಕಾರ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಯುವತಿಯರನ್ನು, ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರನ್ನು ಐಷಾರಾಮಿ ಜೀವನಶೈಲಿ ಮತ್ತು ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ಕರೆತರಲಾಗಿತ್ತು. ಖಾಸಗಿ ಅಪಾರ್ಟ್ಮೆಂಟ್‌ಗಳಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಭೇಟಿಯಾಗಬಹುದು ಎಂದು ನಂಬಿಸಿ ವಿಟ ಪುರುಷರಿಗೆ ಜಾಲ ಬೀಸಲಾಗುತ್ತಿತ್ತು.
ಆರೋಪಿಗಳು ಕಾಲೇಜು ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ, ಅವರನ್ನು ಹೊರಗೆ ಕರೆದುಕೊಂಡು ಹೋಗಿ, ನಂತರ ಲಕ್ಷಾಂತರ ರೂಪಾಯಿಗಳನ್ನು ನೀಡಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿ 86 ಸಾಕ್ಷಿಗಳನ್ನು ಹಾಜರುಪಡಿಸಿದರೂ, ಪ್ರಮುಖ ಸಾಕ್ಷಿಗಳು ಸಾಕ್ಷಿ ನುಡಿಯದ ಕಾರಣ ಪ್ರಕರಣ ನ್ಯಾಯಾಲಯದಲ್ಲಿ ಹಿನ್ನಡೆ ಕಂಡಿದೆ.
