ಇತ್ತೀಚೆಗೆ ಅಂಕೋಲಾದ ರಾಮನಗುಳಿ ಬಳಿ ಕ್ರೇಟಾ ಕಾರೊಂದರಲ್ಲಿ 1.14 ಕೋಟಿ ರೂಪಾಯಿ ನಗದು ಸಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಮುಂಬೈಯಿಂದ ಬಂಧಿಸಿ ಕರೆತರುತ್ತಿರುವಾಗ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ.

ಮಂಗಳೂರು ಮೂಲದ ಕುಖ್ಯಾತ ರೌಡಿ ತಲ್ಲತ್, ನಪ್ಪಾಲ್ ಹಾಗೂ ಸಾಹೀಲ್ ಅವರನ್ನು ಅಂಕೋಲಾ ಪೊಲೀಸರು ಮುಂಬಯಿಯಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಹಳಿಯಾಳದ ಭಾಗವತಿ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದ ವೇಳೆ ತಲ್ಲತ್ ಹಾಗೂ ನೌಫಾಲ್ ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಕಾಡಿನಲ್ಲಿ ಪರಾರಿಯಾಗಲು ಯತ್ನಿಸಿದರು. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದರು. ಮೂರನೇ ಆರೋಪಿ ಸಾಹೀಲ್ ವಾಹನದಲ್ಲಿ ಕುಳಿತುಕೊಂಡ ಕಾರಣ ಆತನಿಗೆ ಗುಂಡು ಹಾರಿಸದೆ ಅಂಕೋಲಾ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು, ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಆರೋಪಿಗಳು ಹಾಗೂ ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್ಪಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.

ಕಳೆದ ಜನವರಿ 28 ರಂದು ಅಂಕೋಲಾದ ರಾಮನಗುಳಿ ಬಳಿ ಮಂಗಳೂರಿನ ಚಿನ್ನದ ಆಂಗಡಿ ಮಾಲೀಕ ರಾಜೇಶ ಪವಾರ್ ಅವರಿಗೆ ಸೇರಿದ್ದ ಕಾರಿನಲ್ಲಿ 1.14 ಕೋಟಿ ರೂ. ನಗದು ಪತ್ತೆಯಾಗಿತ್ತು. ಘಟನೆ ನಡೆದ ಕೆಲ ದಿನಗಳ ಬಳಿಕ ಅಂಕೋಲಾ ಠಾಣೆಗೆ ತೆರಳಿ ದರೋಡೆ ಪ್ರಕರಣ ದಾಖಲಿಸಿದ್ದರು. ಈ ಕಾರಿನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಸೀಟಿನೊಳಗೆ ಕಂತೆ-ಕಂತೆ ಹಣ ಪತ್ತೆಯಾಗಿತ್ತು. ಜಾಡು ಹಿಡಿದ ಪೊಲೀಸರಿಗೆ ದರೋಡೆ ಮಾಹಿತಿ ದೊರಕಿತ್ತು. ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಸಿಕ್ಕ ಸುಳಿವಿನಂತೆ ಮಂಗಳೂರಿನ ಅಡ್ಯಾರ್-ಬಜಾಲ್ನ ಕುಖ್ಯಾತ ರೌಡಿ ತಲ್ಲತ್ ಗ್ಯಾಂಗ್ನ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತಲೆಮರೆಸಿಕೊಂಡಿದ್ದ ಮೂವರ ಪತ್ತೆಗೆ ಅಂಕೋಲಾ ಪೊಲೀಸರ ತಂಡ ಮುಂಬಯಿಗೆ ತೆರಳಿ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡಕೊಂಡಿತ್ತು.
