ಉಳ್ಳಾಲ: ನೇತ್ರಾವತಿ ಸೇತುವೆ ದುರಸ್ತಿ ಕಾರ್ಯ, ಪ್ರಯಾಣಿಕರು ಕಂಗಾಲು; ನಾಲ್ಕು ಮಂದಿ ಕಾರ್ಮಿಕರು, ಒಂದು ಟಿಪ್ಪರ್, ಸುತ್ತಿಗೆಯ ಬಡಿತದ ಶಬ್ದ ಮಾತ್ರ

ಕರಾವಳಿ

ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ಕಟ್ಟಲಾಗಿರುವ ಉಳ್ಳಾಲ ಹಳೆಯ ಸೇತುವೆಯಲ್ಲಿ ಹೊಂಡ, ಗುಂಡಿಯಾಗಿದ್ದ ಹಿನ್ನೆಲೆ 2016ರಲ್ಲಿ ರಸ್ತೆ ಬಂದ್ ಮಾಡಿ ದುರಸ್ತಿ ಕಾರ್ಯ ನಡೆದಿತ್ತು. ಬಳಿಕ 2024ರ ಡಿಸೆಂಬರ್ ತಿಂಗಳಲ್ಲಿ ಹಳೇ ಸೇತುವೆ ದುರಸ್ತಿ ನಡೆದಿದೆ. ಇದೀಗ ಮೂರು ತಿಂಗಳ ಬಳಿಕ ಮತ್ತೆ ರಿಪೇರಿ ಕಾಮಗಾರಿ ನಡೆಯುತ್ತಿದೆ. NHA 66 ಮಂಗಳೂರು ಟೂ ಕೇರಳಕ್ಕೆ ಸಂಪರ್ಕಿಸುವ ಉಳ್ಳಾಲ ಸೇತುವೆಯಲ್ಲಿ ಸಂಚರಿಸುವುದೇ ಒಂದು ಸಾಹಸದ ಪರಿಸ್ಥಿತಿಯಾಗಿ ನಿರ್ಮಾಣವಾಗಿದೆ.

ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ನಿರ್ಮಿಸಿರುವ ಹಳೆಯ ಸೇತುವೆಯನ್ನು ಇದೀಗ ದುರಸ್ತಿಗಾಗಿ ಒಂದು ತಿಂಗಳು ಬಂದ್ ಮಾಡಲಾಗಿದೆ. ಮಂಗಳೂರು ನಗರದ ಸಂಪರ್ಕದ ಕೊಂಡಿಯಾಗಿರುವ ಈ ಸೇತುವೆಯನ್ನು ಬಂದ್ ಮಾಡಿದ ಕಾರಣ, ವಾಹನ ಸವಾರರು ನಿತ್ಯ ಹೈರಾಣಾಗುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ಟ್ರಾಫಿಕ್ ಜಾಮ್ ತಲೆದೋರುತ್ತಿದೆ. ಕಳೆದ ಡಿಸೆಂಬರ್ ನಲ್ಲಷ್ಟೇ ಈ ಸೇತುವೆಯ ದುರಸ್ತಿ ನಡೆದಿತ್ತು, ಆದರೆ ಮತ್ತೆ ದುರಸ್ತಿಗೆ ಮುಂದಾಗಿರುವ ಕಾರಣ ಜನ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

ನೇತ್ರಾವತಿ ಸೇತುವೆಯನ್ನು ರಿಪೇರಿ ಮಾಡುವ ಕಂಪೆನಿಯನ್ನು ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳು ಒಮ್ಮೆ ತಲಪಾಡಿಯಿಂದ ಕೇರಳದ ಹೆದ್ದಾರಿ ಕೆಲಸಗಳು ನಡೆಯುವಲ್ಲಿಗೆ ಕರೆದುಕೊಂಡು ಹೋಗಿ ತೋರಿಸುವ ಕೆಲಸವನ್ನು ಯಾರಾದರೂ ಮಾಡಿದರೆ ಉತ್ತಮ. ಜಗತ್ತು ಇಷ್ಟು ಅಧುನಿಕ ತಂತ್ರಜ್ಞಾನದಿಂದ ಮುಂದುವರಿದಿರುವಾಗ ನೇತ್ರಾವತಿ ಸೇತುವೆ ರಿಪೇರಿಗೆ ನಾಲ್ಕು ಮಂದಿ ಕಾರ್ಮಿಕರು, ಒಂದು ಟಿಪ್ಪರ್ ಇದ್ದು ಸುತ್ತಿಗೆಯ ಬಡಿತದ ಶಬ್ದ ಮಾತ್ರ ಕೇಳಿಸುತ್ತದೆ. ಈ ಸೇತುವೆಯಲ್ಲಿ ದಿನನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಕೇರಳ ಮತ್ತು ಕರ್ನಾಟಕದ ಕೊಂಡಿಯಾಗಿರುವ ಈ ಸೇತುವೆಯನ್ನು ರಿಪೇರಿಯ ಹೆಸರಲ್ಲಿ ಬಂದ್ ಮಾಡಿರುವುದರಿಂದ ಜನರು ಹೈರಾಣಗಿದ್ದಾರೆ. ಹೆದ್ದಾರಿಗೆ ಅಡ್ಡವಾಗಿ ತಡೆಗೋಡೆ ಕಟ್ಟಿ ದೊಡ್ಡ ಮಟ್ಟದಲ್ಲಿ ಹಗಲಿರುಳು ಕೆಲಸ ನಡೆಯುತ್ತದೆ ಎಂದು ಹೊರಗಡೆ ತೋರಿಸುವ ತಂತ್ರವನ್ನು ಹೆದ್ದಾರಿ ಇಲಾಖೆ ಮಾಡುತ್ತಿದೆ.

ಈ ಹಿಂದೆ ಉಳ್ಳಾಲ ನೇತ್ರಾವತಿ ಹಳೇ ಸೇತುವೆಯಲ್ಲಿ ಹೊಂಡ-ಗುಂಡಿಯಾಗಿದ್ದ ಕಾರಣ ಈ ರಸ್ತೆಯಲ್ಲಿಸಾಗುವ ನಾಗರಿಕರು ಭಾರಿ ತೊಂದರೆ ಅನುಭವಿಸಿದ್ದರು. ಸೇತುವೆಯ ನಾನಾ ಕಡೆ ಕಾಂಕ್ರೀಟ್‌ ರಸ್ತೆಯ ರಾಡ್‌, ಚಲನ್‌ ಕಾಣುತ್ತಿತ್ತು. ಕಾರೊಂದು ಈ ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಹೊಂಡಕ್ಕಿಳಿದ ಪರಿಣಾಮ ಎರಡೂ ಚಕ್ರಗಳು ಸ್ಫೋಟಗೊಂಡಿದ್ದವು. ಈ ಘಟನೆಯಿಂದ ಬೇಸತ್ತ ಕಾರಿನ ಪ್ರಯಾಣಿಕರು ಸಾಮಾಜಿಕ ಜಾಲತಾಣ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ತೇಪೆ ಕಾರ್ಯ ನಡೆಸಲಾಗಿತ್ತು. ವಾಹನ ಸಂದಣಿ ಜಾಸ್ತಿಯಿರುವುದರಿಂದ ರಾತ್ರಿ ಹೊತ್ತಿನಲ್ಲಿ ದುರಸ್ತಿ ಕಾರ್ಯ ನಡೆಸಿದರೆ ಅನುಕೂಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಪದೇ ಪದೇ ರಸ್ತೆ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ರಸ್ತೆ ಬಂದ್‌ ಮಾಡುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧ ಪಟ್ಟವರು ಮೌನಿಯಾಗಿದ್ದಾರೆ.