ರಾಜ್ಯದ ಒಟ್ಟು 88 ಜನ ಪಾಕ್‌ ಪ್ರಜೆಗಳು. ಭಟ್ಕಳದಲ್ಲಿ 10 ಮಂದಿ ಮಹಿಳೆಯರು, ಮಂಗಳೂರುನಲ್ಲಿ ಮೂರು ಮಂದಿ ಮಹಿಳೆಯರು

ರಾಜ್ಯ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 88 ಜನ ಪಾಕ್‌ ಪ್ರಜೆಗಳಿದ್ದಾರೆ. ಈ ಪೈಕಿ ಅಲ್ಪಾವಧಿಯ ವೀಸಾ ಮೇಲೆ ಬಂದವರು ಇನ್ನೆರಡು ದಿನಗಳಲ್ಲಿ ದೇಶ ತೊರೆಯಬೇಕಾಗಿದೆ. ಪಹಲ್ಗಾಮ್‌ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನಿರ್ದೇಶನದಂತೆ ವಿದೇಶಾಂಗ ಸಚಿವಾಲಯ ನೀಡಿದ ಸೂಚನೆ ಪ್ರಕಾರ ಕ್ರಮ ಜರಗಿಸಲಾಗುವುದು. ಆದರೆ ದೀರ್ಘಾಕಾಲೀನ ವೀಸಾ ಹೊಂದಿದವರಿಗೆ ಇದು ಅನ್ವಯಿಸದು ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

88 ಮಂದಿಯಲ್ಲಿ ನಾಲ್ವರು ವೈದ್ಯಕೀಯ ಕಾರಣಗಳಿಗಾಗಿ ಭಾರತಕ್ಕೆ ಬಂದಿದ್ದಾರೆ. ಅವರು 4 ದಿನಗಳಲ್ಲಿ ದೇಶ ತೊರೆಯಬೇಕಿದೆ ಭಟ್ಕಳದಲ್ಲಿ 10 ಮಂದಿ ಮಹಿಳೆಯರು ಹಾಗೂ ಅವರ ಮೂವರು ಮಕ್ಕಳು, ಹೊನ್ನಾವರದ ವಲ್ಕಿ ಗ್ರಾಮ ಮತ್ತು ಕಾರವಾರದ ತೇಲಿರಾಂಜಿ ಗಲ್ಲಿಯಲ್ಲಿ ತಲಾ ಒಬ್ಬರು ನೆಲೆಸಿದ್ದಾರೆ. ಎಲ್ಲರೂ ಮಹಿಳೆಯರೇ ಆಗಿದ್ದು, ನವಾಯತ್‌ ಮುಸ್ಲಿಂ ಆಗಿದ್ದಾರೆ. ಅವರಿಗೆ ಜನಿಸಿದ ಮೂವರು ಮಕ್ಕಳ ತಂದೆ ಭಾರತೀಯ ಆಗಿರುವುದರಿಂದ ಅವರನ್ನು ವಾಪಸ್‌ ಕಳುಹಿಸಲಾಗದು. ವಲ್ಕಿಯ ಯುವತಿಯನ್ನು ಪಾಕಿಸ್ಥಾನಕ್ಕೆ ಮದುವೆ ಮಾಡಿ ಕೊಡಲಾಗಿದ್ದು, ಅವರು ಸದ್ಯ ತವರಿನಲ್ಲೇ ನೆಲೆಸಿದ್ದಾರೆ. ಮತ್ತೊಬ್ಬರು ಪಾಕ್‌ ಪಾಸ್‌ಪೋರ್ಟ್‌ ಮೂಲಕ ಬಂದು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಮಹಿಳೆಯೊಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಜಾಮೀನು ದೊರೆತಿದೆ ಎಂದು ವಿವರಿಸಿದರು.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪಾಕಿಸ್ಥಾನದಿಂದ ಬಂದು ಮದುವೆಯಾಗಿ ನೆಲೆಸಿರುವ ಮೂರು ಮಂದಿ ಮಹಿಳೆಯರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಓರ್ವ ಮಹಿಳೆ ನಗರದ ಹೊರವಲಯದ ವಾಮಂಜೂರು, ಮತ್ತೊಬ್ಬಳು ನಗರದ ಫಳ್ನೀರ್‌ನಲ್ಲಿ ವಾಸವಾಗಿದ್ದಾರೆ. ಮತ್ತೋರ್ವ ಮಹಿಳೆಯ ವಾಸವಿರುವ ಸ್ಥಳದ ಕುರಿತು ಮಾಹಿತಿ ಬಂದಿಲ್ಲ. ಈ ಮಹಿಳೆಯರು 12-13 ವರ್ಷಗಳ ಹಿಂದೆಯೇ ಮದುವೆಯಾಗಿ ನಗರಕ್ಕೆ ಬಂದು ವಾಸವಾಗಿದ್ದಾರೆ. ನಗರ ಪೊಲೀಸ್‌ ಆಯುಕ್ತಾಲಯದಿಂದ ಮಹಿಳೆಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ರಾಜ್ಯ ಗೃಹ ಇಲಾಖೆಗೆ ಕಳುಹಿಸಲಾಗಿದೆ.

ಮದುವೆಯಾಗಿ ಕುಟುಂಬದೊಂದಿಗೆ ವಾಸವಾಗಿರುವುದರಿಂದ, ಅವರನ್ನು ವಾಪಸು ಕಳುಹಿಸುವ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಯಾವ ರೀತಿಯ ನಿರ್ದೇಶನ ಬರುತ್ತದೆಯೋ ಅದರಂತೆ ಕ್ರಮ ವಹಿಸಲಾಗುವುದು. ದೀರ್ಘ‌ಕಾಲಿಕ ವೀಸಾ ಯೋಜನೆ ಮೂಲಕ ಅವರು ಭಾರತಕ್ಕೆ ಬಂದು ನೆಲೆಸಿದ್ದರು. ಸದ್ಯ ಈ ಬಗ್ಗೆ ಅಧಿಕೃತವಾಗಿ ಆದೇಶ ಬಂದಿಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಪಾಕಿಸ್ಥಾನಿ ಪ್ರಜೆಗಳು ಯಾರೂ ನೆಲೆಸಿಲ್ಲ ಎಂದು ತಿಳಿದುಬಂದಿದೆ.