ದುಷ್ಕರ್ಮಿಗಳು ಸೋಶಿಯಲ್ ಮೀಡಿಯಾದಲ್ಲೇ ಸುಹಾಸ್ ಶೆಟ್ಟಿಗೆ ಪ್ರತೀಕಾರದ ಎಚ್ಚರಿಕೆ ಕೊಟ್ಟಿದ್ದರಂತೆ
ಮಂಗಳೂರು: ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ನ ಫಾಜಿಲ್ ಎಂಬಾತನ ಹತ್ಯೆ ಮಾಡಲಾಗಿತ್ತು. ಮಾರ್ಚ್ 31ರಂದೇ ಸುಹಾಸ್ ಶೆಟ್ಟಿ ಹತ್ಯೆಗೆ ಮುಹೂರ್ತ ಫಿಕ್ಸ್ ಆಗಿತ್ತಾ ಎಂಬ ಅನುಮಾನಗಳು ಸದ್ಯ ಹುಟ್ಟಿಕೊಂಡಿವೆ. ಏಕೆಂದರೆ ಅಂದೇ ಟಾರ್ಗೆಟ್ ಕಿಲ್ಲರ್-03 ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಸುಹಾಸ್ ಶೆಟ್ಟಿ ಫೋಟೋ ಹಾಕಿ ಶೀಘ್ರದಲ್ಲೇ ಸೇಡು ತೀರಿಸಿಕೊಳ್ಳುವುದಾಗಿ ಪ್ರಚೋದನಕಾರಿ ಪೋಸ್ಟ್ ಹಾಕಲಾಗಿತ್ತು. ‘ಫಿನೀಶ್’ ಅಂತ ಪೋಸ್ಟ್ ಬಹಿರಂಗವಾಗಿತ್ತು.
ಸುಹಾಸ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಇನ್ಸ್ಟಾಗ್ರಾಂ ಪೇಜ್ನಲ್ಲಿ ‘ಫಿನೀಶ್’ ಅಂತ ಪೋಸ್ಟ್ಹಾಕಲಾಗಿತ್ತು. ಹತ್ಯೆಯ ಬೆನ್ನಲ್ಲೇ ವಿಡಿಯೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಲಾಗಿದೆ. ಜೊತೆಗೆ ಮುಂದಿನ ವಿಕೇಟ್ ಅಂತ ಪೋಸ್ಟ್ ಮಾಡಲಾಗಿದೆ. ಕೊಲೆಯಾದ ಸುಹಾಸ್ ಶೆಟ್ಟಿ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. ಸುಹಾಸ್ ಶೆಟ್ಟಿ ವಿರುದ್ಧ ಒಟ್ಟು 5 ಕ್ರಿಮಿನಲ್ ಪ್ರಕರಣಗಳು ಬಜಪೆ, ಬೆಳ್ತಂಗಡಿ, ಸುರತ್ಕಲ್ ಠಾಣೆಯಲ್ಲಿ ದಾಖಲಾಗಿದ್ದವು. ಒಂದು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದು, ಬಾಕಿ ವಿಚಾರಣೆ ಹಂತದಲ್ಲಿದ್ದವು. ಎರಡರಲ್ಲಿ ಖುಲಾಸೆಗೊಂಡಿದ್ದ.

ಸುರತ್ಕಲ್ನಲ್ಲಿ ನಡೆದಿದ್ದ ಫಾಜಿಲ್ ಕೊಲೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಒಂದನೇ ಆರೋಪಿಯಾಗಿದ್ದು, ಹೈಕೋರ್ಟ್ನಿಂದ ಜಾಮೀನು ಪಡೆದು ಹೊರ ಬಂದಿದ್ದ. ಸುಹಾಸ್ ಶೆಟ್ಟಿ ತನ್ನ ಸಹಚರರೊಂದಿಗೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮೀನಿನ ಟೆಂಪೋ ಮತ್ತು ಒಂದು ಸ್ವಿಫ್ಟ್ ಕಾರಿನ ಮೂಲಕ ಸುಹಾಸ್ ಕಾರನ್ನು ಚೇಸ್ ಮಾಡಿದ ಆಗಂತುಕರು ಬಜಪೆ ಕಿನ್ನಿಪದವು ಬಳಿ, ಮೀನಿನ ಟೆಂಪೋ ಮೂಲಕ ಸುಹಾಸ್ ಕಾರಿಗೆ ಡಿಕ್ಕಿಹೊಡೆದು ಅಟ್ಟಾಡಿಸಿ ಕೊಲೆಗೈದಿದ್ದಾರೆ.
ತನಿಖೆ ವೇಳೆ ಕೊಲೆ ಕೇಸ್ಗೆ ಸಂಬಂಧಿಸಿದ ಕೆಲವು ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ದುಷ್ಕರ್ಮಿಗಳು ಸೋಶಿಯಲ್ ಮೀಡಿಯಾದಲ್ಲೇ ಸುಹಾಸ್ ಶೆಟ್ಟಿಗೆ ಪ್ರತೀಕಾರದ ಎಚ್ಚರಿಕೆ ಕೊಟ್ಟಿದ್ದರು ಎಂದು ಗೊತ್ತಾಗಿದೆ.

ಮಾರ್ಚ್ 31, 2025ರಂದು ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಮಾರ್ಚ್ ಅಂತ್ಯದಲ್ಲೇ ಸುಹಾಸ್ ಶೆಟ್ಟಿಯ ತಲೆ ಉರುಳಿಸಲು ಹಂತಕರು ಪ್ಲಾನ್ ಮಾಡಿದ್ದರು. ಹಂತಕರು ಸುಹಾಸ್ ಫೋಟೋ ಸಹಿತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಟಾರ್ಗೆಟ್ ಫಿಕ್ಸ್ ಮಾಡಿದ್ದರಲ್ಲದೆ, ಅದನ್ನು ಸ್ವತಃ ಸುಹಾಸ್ಗೆ ಟ್ಯಾಗ್ ಮಾಡಿದ್ದರು. ಆ ಟ್ಯಾಗ್ ಮಾಡಿದ ವಿಡಿಯೋವನ್ನು ಸುಹಾಸ್ ಶೆಟ್ಟಿ ಡೌನ್ ಲೋಡ್ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ.
ಟಾರ್ಗೆಟ್ ಕಿಲ್ಲರ್ ಹೆಸರಿನ ಇನ್ಸ್ಟಾಗ್ರಾಂ ಪೇಜ್ ಕೂಡ ಕ್ರಿಯೇಟ್ ಮಾಡಿದ್ದ ದುಷ್ಕರ್ಮಿಗಳು, ಸುಹಾಸ್ಗೆ ಟಾರ್ಗೆಟ್ ಫಿಕ್ಸ್ ಮಾಡಿರುವುದಾಗಿಯೂ ಹೇಳಿದ್ದರು. 2022ರ ಜುಲೈ 28ರಂದು ಹತ್ಯೆಯಾದ ಸುರತ್ಕಲ್ನ ಫಾಜೀಲ್ನ ಫೋಟೋ ಜೊತೆಗೆ ಸುಹಾಸ್ನ ಫೋಟೋ ಹಾಕಿ “ರಿವೇಂಜ್ ಸೂನ್” ಎಂದು ಪೋಸ್ಟ್ ಮಾಡಿದ್ದರು. ಮಂಗಳೂರಿನಲ್ಲಿ ನಡೆದ ಬಶೀರ್ ಹತ್ಯೆ ಆರೋಪಿಯ ರಿವೇಂಜ್ ಬಗ್ಗೆಯೂ ಪೋಸ್ಟ್ ಮಾಡಿದ್ದರು. 2018ರ ಜನವರಿ 3ರಂದು ನಡೆದಿದ್ದ ಬಶೀರ್ ಹತ್ಯೆ ಪ್ರಕರಣದಲ್ಲಿ ಬಶೀರ್ ಹತ್ಯೆ ಆರೋಪಿ ಶ್ರೀಜಿತ್ ಫೋಟೋ ಕೂಡ ಬಳಸಿ “ರಿವೇಂಜ್ ಸೂನ್” ಎಂದು ಪೋಸ್ಟ್ ಮಾಡಿದ್ದರು. ಫಾಜಿಲ್ ಹತ್ಯೆಗೆ ಪ್ರತೀಕಾರವಾಗಿ ಹಂತಕರು ಸುಹಾಸನ ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿ ಸುದ್ದಿ ಇದೆ.

ಸುಹಾಸ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕಾರಿಂಜದ ಪುಳಿಮಜಲು ಎಂಬಲ್ಲಿಯ ನಿವಾಸಿಯಾಗಿದ್ದು, ಅವರ ಸ್ವಗ್ರಾಮ ಪುಳಿಮಜಲುವಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ರೌಡಿಶೀಟರ್, ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೀಮಿತವಾಗಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮೇ ತಿಂಗಳ 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
