ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಮೂರು ಶವಗಳ ಪೈಕಿ ಒಂದು ಕಾರ್ಕಳದ ಶಿರ್ಲಾಲು ಮೂಲದ ಯುವಕನಾಗಿದ್ದು, ಇನ್ನಿಬ್ಬರು ಬೆಳ್ತಂಗಡಿ ನಿವಾಸಿಗಳು. ಇವರ ಶವ ಕಾರಿನೊಳಗೆ ಸುಟ್ಟುಕರಕಲಾದ ಸ್ಥಿತಿಯಲ್ಲಿ ತುಮಕೂರಿನ ಕೋರ ಹೋಬಳಿಯ ಕುಚ್ಚಂಗಿ ಕೆರೆ ಬಳಿ ಪತ್ತೆಯಾಗಿತ್ತು. ಕಾರಿನ ಮಾಹಿತಿ ದೊರೆತು ತನಿಖೆ ನಡೆಸಿದಾಗ ಬೆಳ್ತಂಗಡಿಯ ರಫೀಕ್ ಎಂಬವರಿಗೆ ಸೇರಿದ್ದಾಗಿದ್ದು, ಕಾರಿನ ಢಿಕ್ಕಿಯಲ್ಲಿ ಎರಡು ಮೃತದೇಹಗಳು ಹಾಗೂ ಹಿಂಬದಿಯ ಸೀಟಿನಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಮೂವರನ್ನು ಕೊಲೆಗೈದು ಕಾರಿನೊಳಗೆ ಹಾಕಿ ಕಾರಿಗೆ ಬೆಂಕಿ ಕೊಟ್ಟಿರಬಹುದೆಂದು ಶಂಕಿಸಲಾಗಿದೆ.
ಆಟೋ ಚಾಲಕರಾಗಿರುವ ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್ ಕುಂಟಿನಿ ನಿವಾಸಿ ಸಾಹುಲ್ ಹಮೀದ್ (45), ವಿದೇಶದಿಂದ ಬಂದು ಮನೆಯಲ್ಲೇ ಇದ್ದ, ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್ ಕುಂಟಿನಿ ನಿವಾಸಿ ಇಸಾಕ್ (50), ಬೆಳ್ತಂಗಡಿಯಲ್ಲಿ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ, ಶಿರ್ಲಾಲು ಗ್ರಾಮದ ನಿವಾಸಿ ಸಿದ್ದಿಕ್ ಮೃತಪಟ್ಟವರು ಎಂಬುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಸುಮಾರು 12 ದಿನಗಳ ಹಿಂದೆ ಇಸಾಕ್ ಅವರು ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ರಫೀಕ್ ಅವರ ಕೆ.ಎ.43 N1571 ನೋಂದಣಿಯ ಕಾರನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದು ದಿನಾಂಕ 20-03-2024 ರಂದು ಇಸಾಕ್ ಅವರು ಕಾರು ಮಾಲಕ ರಫೀಕ್ ಅವರಿಗೆ ಕರೆ ಮಾಡಿ ಇನ್ನೆರಡು ದಿನಗಳಲ್ಲಿ ಬರುತ್ತೇವೆ ಎಂದು ತಿಳಿಸಿದ್ದರೆಂದು ಮಾಹಿತಿ ತಿಳಿದು ಬಂದಿದೆ. ಅನಂತರ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.
ಇನ್ನು ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ. ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
