ಖಾದರ್, ಐವನ್, ಭಂಡಾರಿ, ಹರೀಶ್ ಕುಮಾರ್ ವಿಫಲ ರಾಜಕಾರಣಿಗಳು.. ಕರಾವಳಿ ಜನಸಾಮಾನ್ಯರೆಡೆಯಲ್ಲಿ ಬಿ.ಕೆ ಹರಿಪ್ರಸಾದ್ ಶೈನಿಂಗ್.!

ಕರಾವಳಿ

ಇದೀಗ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ನಿರಂತರ ಕೋಮು ದಳ್ಳುರಿಗೆ ನಲುಗಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ, ದಮನಿತ ಸಮುದಾಯಗಳು ಬಿ ಕೆ ಹರಿಪ್ರಸಾದ್ ರಂತಹ ಸಚ್ಚಾರಿತ್ರ್ಯ, ಪ್ರಬಲ ಸೈದ್ಧಾಂತಿಕ ಉಳ್ಳ ನಾಯಕರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬರಲಿ ಎಂದು ಆಶಿಸುತ್ತಿದ್ದಾರೆ. ಕರಾವಳಿ ಕೋಮುವಾದಕ್ಕೆ ಅಂತ್ಯ ಹಾಡಲು ಬಿ ಕೆ ಸಮರ್ಥರು, ಅವರಿಗೆ ಅಧಿಕಾರ ಕೊಡಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕೂಡ ಇಲ್ಲಿನ ಇತರ ಅಧಿಕಾರಸ್ಥ ಕಾಂಗ್ರೆಸ್ ನಾಯಕರ ಬಗ್ಗೆ ಭ್ರಮನಿರಸನಗೊಂಡಿದ್ದು ಬಿ ಕೆ ಯಂತವರು ಮೈನ್ ಸ್ಟ್ರೀಮಿಗೆ ಬರಲಿ ಎಂದು ಆಶಿಸುತ್ತಿದ್ದಾರೆ.

ಬಿ ಕೆ ಹರಿಪ್ರಸಾದ್ ಪ್ರಬಲ ಬಿಲ್ಲವ ಸಮುದಾಯಕ್ಕೆ ಸೇರಿದವರು. ಜಿಲ್ಲೆಯಲ್ಲಿ ಬಹುಸಂಖ್ಯಾತ ಬಿಲ್ಲವ ಸಮುದಾಯ ಬಿಜೆಪಿಯ ಓಟು ಬ್ಯಾಂಕ್ ಆಗಿ ಪರಿವರ್ತಿತಗೊಂಡಿದ್ದರೂ, ಬಿಲ್ಲವ ಸಮುದಾಯದ ಹರಿಪ್ರಸಾದ್ ನಾಯಕತ್ವ, ದಿಟ್ಟ ನಡೆ, ಹೊಂದಾಣಿಕೆ ಇಲ್ಲದ ರಾಜಕಾರಣ ಅವರನ್ನು ಇಲ್ಲಿನ ಅಲ್ಪಸಂಖ್ಯಾತ ಆದಿಯಾಗಿ ಸಮಾನ ಮನಸ್ಕರು ನಂಬಿಕೆ ಇರಿಸಿಕೊಂಡಿದ್ದಾರೆ. ಬಿ ಕೆ ಕರಾವಳಿಗೆ ಎಂಟ್ರಿಯಾದರೆ ಕೋಮು ರಾಜಕಾರಣಕ್ಕೆ ಕಡಿವಾಣ ಬೀಳಬಹುದು, ಜನ ನೆಮ್ಮದಿಯಿಂದ ಜೀವಿಸಬಹುದು ಅನ್ನುವ ಕೊನೆಯ ಭರವಸೆ ಹೊಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರು ಕಾಂಗ್ರೆಸ್ ಸರಕಾರದ ವೈಫಲ್ಯದ ವಿರುದ್ಧ ಸಿಡಿದೆದ್ದು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಹೈಕಮಾಂಡ್ ಗೆ ಬಿಸಿ ಮುಟ್ಟಿಸುವಲ್ಲಿ ಸಫಲರಾಗಿದ್ದಾರೆ. ಕಾಂಗ್ರೆಸ್ ಮುಸ್ಲಿಂ ಮುಖಂಡರ ನಡೆಗೆ ಬೆದರಿದ ಕಾಂಗ್ರೆಸ್ ಹೈಕಮಾಂಡ್ ತರಾತುರಿಯಲ್ಲಿ ಬಿ ಕೆ ಹರಿಪ್ರಸಾದ್ ಗೆ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಅವಲೋಕಿಸುವ ಜವಾಬ್ದಾರಿಯನ್ನು ನೀಡಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಪ್ರಸಾದ್ ಮನೆಗೆ ಬ್ರೇಕ್ ಫಾಸ್ಟ್ ಗೆ ತೆರಳಿ ಕರಾವಳಿಯ ವಸ್ತು ಸ್ಥಿತಿಯ ಬಗ್ಗೆ ಅರಿತುಕೊಂಡಿದ್ದಾರೆ. ಕಾಂಗ್ರೆಸ್ ಮುಸ್ಲಿಂ ಮುಖಂಡರ ಸಾಮೂಹಿಕ ರಾಜೀನಾಮೆ ನಂತರ ಜಿಲ್ಲೆಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. ಇಬ್ಬರು ಖಡಕ್ ಅಧಿಕಾರಿಗಳನ್ನು ಮಂಗಳೂರಿಗೆ ನೇಮಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರಾಗಲಿ, ಜಿಲ್ಲೆಯ ಜನಸಾಮಾನ್ಯರಾಗಲಿ ಆಪತ್ತಿನ ಸಂದರ್ಭದಲ್ಲಿ ಯು.ಟಿ ಖಾದರ್ ಮಂತ್ರಿಯಾಗಲಿ ಎಂದು ಆಶಿಸುತ್ತಿಲ್ಲ. ವಿಧಾನಪರಿಷತ್ ಸದಸ್ಯರಾದ ಐವನ್, ಭಂಡಾರಿ, ಹರೀಶ್ ಕುಮಾರ್ ಮಂತ್ರಿಯಾಗಿ ಬರಲಿ ಅನ್ನುತ್ತಿಲ್ಲ. ಅದರಲ್ಲೂ ಜಿಲ್ಲೆಯ ಮುಸ್ಲಿಂ ಸಮುದಾಯದ ಏಕೈಕ ನಾಯಕರಾಗಿರುವ ಖಾದರ್ ಬೆನ್ನಿಗೆ ಇಲ್ಲಿನ ಸಮುದಾಯ ನಿಂತಿಲ್ಲ. ಬದಲಾಗಿ ಹಿಂದುಳಿದ ವರ್ಗದ ಬಿ ಕೆ ಹರಿಪ್ರಸಾದ್ ಮಂತ್ರಿಯಾಗಲಿ ಅನ್ನುತ್ತಿದ್ದಾರೆ.

ಅಧಿಕಾರದ ಹೆಸರಿನಲ್ಲಿ ಇವರುಗಳು ಲಿಕ್ಕರ್ ಮಾಫಿಯಾ, ಶಿಕ್ಷಣ ವ್ಯಾಪಾರ, ಮೆಡಿಕಲ್ ಮಾಫಿಯಾ ನಡೆಸಿದ್ದೇ ಹೆಗ್ಗುರುತು . ಬೆಳಿಗ್ಗೆ ಕಾಂಗ್ರೆಸ್, ರಾತ್ರಿ ಬಿಜೆಪಿಯಾಗುವ ಇಂತಹ ನಾಯಕರ ಬಗ್ಗೆ ಜಿಲ್ಲೆಯ ಕಾಂಗ್ರೆಸ್ಸಿಗರೆ ಭ್ರಮನಿರಸನಗೊಂಡಿದ್ದಾರೆ. ಹೊಂದಾಣಿಕೆ ರಾಜಕಾರಣದಿಂದಾಗಿ ಕಾಂಗ್ರೆಸ್ಸನ್ನು ಜೊತೆಗೆ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ಹಕ್ಕನ್ನೆ ಲಗಾಡಿ ತೆಗೆದಿದ್ದಾರೆ. ಇಲ್ಲಿನ ನಾಯಕರ ಸರಣಿ ವೈಫಲ್ಯಗಳ ವಿರುದ್ಧ ಕೊನೆಗೂ ಸ್ಪೋಟಗೊಂಡು ನಾಯಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಬಹಿರಂಗವಾಗಿ ಬೀದಿಗೆ ಇಳಿಯುವಂತಾಗಿದೆ.

ಅಧಿಕಾರ ಅವಕಾಶ ಎಲ್ಲರಿಗೂ ಸಿಗಲ್ಲ. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಂಡಿದ್ದಾರೆ, ಜನಸಾಮಾನ್ಯರ ನೆಮ್ಮದಿಗೆ ಎಷ್ಟು ಕೊಡುಗೆ ನೀಡಿದ್ದಾರೆ ಅನ್ನುವ ಮೂಲಕ ಇತಿಹಾಸದಲ್ಲಿ ದಾಖಲಾಗುತ್ತಾರೆ. ಸಮುದಾಯದ ಹೆಸರಿನಲ್ಲಿ ಮತ ಪಡೆದು ಸಮುದಾಯ ಸಂಕಷ್ಟ ಅನುಭವಿಸಿದಾಗ ಅವರ ನೆರವಿಗೆ ಬರದೆ ಮೌನ ವಹಿಸಿದರೆ ಜನರು ಹೆಚ್ಚು ಸಮಯ ಇಂತಹ ನಿರ್ಲಕ್ಷ್ಯ ವನ್ನು ಸಹಿಸಿಕೊಳ್ಳಲ್ಲ ಅನ್ನುವುದಕ್ಕೆ ನಿನ್ನೆ ಶಾದಿಮಹಲ್ ನಲ್ಲಿ ನಡೆದ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶವೇ ಸಾಕ್ಷಿ. ಖಾದರ್, ಐವನ್, ಭಂಡಾರಿ, ಹರೀಶ್ ಕುಮಾರ್ ರಂತಹ ಘಟಾನುಘಟಿಗಳು ಜಿಲ್ಲೆಯಲ್ಲಿದ್ದರೂ ಇಲ್ಲಿನ ಕಾಂಗ್ರೆಸ್ಸಿಗರು, ಜನಸಾಮಾನ್ಯರು ಇವರೆಲ್ಲ ನಂಬಿಕೆಗೆ ಅರ್ಹರಲ್ಲ ಎಂದು ನಿರ್ಧರಿಸಿ ಹರಿಪ್ರಸಾದ್ ಜಿಲ್ಲೆಗೆ ಬರಲಿ ಎಂದು ಆಗ್ರಹಿಸುತ್ತಿರುವುದು ಇವರೆಲ್ಲ ವಿಫಲ ನಾಯಕರು ಅನ್ನುವುದಕ್ಕೆ ಸಾಕ್ಷಿ. ಇನ್ನಾದರೂ ವಿಫಲ ನಾಯಕರು ತಮ್ಮ ಎದೆಯ ಮೇಲೆ ಕೈ ಇಟ್ಟು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಿದೆ.