ಮಸೀದಿಯ ಅಂಗಳಕ್ಕೆ ಬಂದು ಹಿಂದೂ ಬಾಂಧವರಿಂದ ರಕ್ತದಾನ. ಮಳಲಿ ಮಸೀದಿ, SKSSF ಯೂನಿಟ್ ‘ಸೌಹಾರ್ದ ರಕ್ತದಾನ ಶಿಬಿರ’ ದ ಝಲಕ್.!

ಕರಾವಳಿ

ಐಕ್ಯತೆ ಒಡೆದು ದ್ವೇಷ ಹರಡಲು ಮುಂದಾಗಿದ್ದ ಸ್ವಯಂಘೋಷಿತ ಕೋಮುವಾದಿ ನಾಯಕರಿಗೆ ಮುಖಭಂಗ.!

ಅದು ಮಂಗಳೂರು ತಾಲೂಕಿನ ಗಂಜಿಮಠ ಬಳಿಯ ಮಳಲಿ ಅನ್ನುವ ಪ್ರದೇಶ. ಯಾವುದೇ ಕೋಮು ಸೋಂಕು ಹರಡದೆ ಹಿಂದೂ -ಮುಸ್ಲಿಮರು ಪರಸ್ಪರ ಸೌಹಾರ್ದತೆಯಿಂದ ಇದ್ದ ಊರದು. ಇಲ್ಲಿನ ಸೌಹಾರ್ದತೆಗೆ ಯಾರದ್ದೋ ಕಣ್ಣು ಕುಕ್ಕಿತ್ತೋ ಗೊತ್ತಿಲ್ಲ. ಪರಸ್ಪರ ಸೌಹಾರ್ದತೆಯಿಂದಿದ್ದ ಊರಿನಲ್ಲಿ ದ್ವೇಷದ ಬೆಳೆ ಬಿತ್ತಲು ಕೆಲವರು ಹವಣಿಸಿದರು. ಶತಮಾನಗಳಷ್ಟು ಇತಿಹಾಸವಿರುವ ಪುರಾತನ ಮಸೀದಿ ಹಿಂದೂಗಳ ದೇವಾಲಯವಾಗಿತ್ತು ಅನ್ನುವ ಪುಕಾರು ಹಬ್ಬಿಸಿ ಸೌಹಾರ್ದದ ಊರಿನಲ್ಲಿ ಅಶಾಂತಿಯ ಕಿಡಿ ಹಬ್ಬಿಸಿದರು.

ವಿಶೇಷವೆಂದರೆ ಇಲ್ಲಿನ ಸೌಹಾರ್ದ ಪ್ರಿಯ ಹಿಂದೂಗಳು ಮಳಲಿ ಮಸೀದಿಗೆ ಬಂದು ಪ್ರಾರ್ಥಿಸಿ ತಮ್ಮ ಕೆಲಸ ಕಾರ್ಯಕ್ಕೆ ಹೋಗುತ್ತಿದ್ದರು. ಅಷ್ಟೊಂದು ಭಾತೃತ್ವವಿದ್ದ ಊರದು. ಮಳಲಿಗೆ ಸಂಬಂಧವೇ ಇಲ್ಲದ ಪರವೂರಿನ ಕೆಲವು ಕೋಮುವಾದಿ ಶಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಲು ಪುರಾತನದಿಂದಲೂ ಸೌಹಾರ್ದತೆಯಿಂದಿದ್ದ ಮಳಲಿಯಲ್ಲಿ ಕೋಮು ಬೆಂಕಿ ಹಚ್ಚಲು ಪ್ರಯತ್ನಿಸಿದರು. ಹಳೆಯ ಮಳಲಿ ಮಸೀದಿ ಕೆಡವಿ ಅಲ್ಲಿ ನೂತನ ಮಸೀದಿ ನಿರ್ಮಿಸಲು ಮುಂದಾದಾಗ ನವೀಕರಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಜೆಸಿಬಿ ಚಲಾಯಿಸುತ್ತಿದ್ದ ಚಾಲಕನೊಬ್ಬ ಮಳಲಿ ಮಸೀದಿಯಲ್ಲಿ ದೇವಾಲಯದ ಕುರುಹುಗಳಿವೆ ಎಂಬ ಪುಕಾರು ಎಬ್ಬಿಸಿ ಜಿಲ್ಲೆಯ ಕೆಲವು ಕೋಮುವಾದಿಗಳಿಗೆ ತಲುಪಿಸಿದ್ದ. ಪ್ರಾಚೀನ ಕಾಲದ ಮಸೀದಿ, ಮಂದಿರಗಳು ಭಾರತೀಯ ಶಿಲ್ಪಕಲೆಯನ್ನು ಹೋಲುವ ಮಾದರಿಯಲ್ಲೇ ಇರುವಂತಹವು. ‌ಇದನ್ನೇ ದೇವಾಲಯವೆಂದು ಹುಯಿಲೆಬ್ಬಿಸಿದಾಗ ಊರಿಗೆ ಸಂಬಂಧವೇ ಇಲ್ಲದ ಕೆಲವು ಕೋಮುವಾದಿ ನಾಯಕರು ಮಳಲಿ ಪ್ರದೇಶಕ್ಕೆ ಬಂದು ಮಸೀದಿಯನ್ನು ವಿವಾದದ ಕೇಂದ್ರವಾಗಿಸಿಬಿಟ್ಟರು. ತಾಂಬೂಲ ನಡೆಸಿದರು. ಸರ್ವೇ ನಡೆಸಲು ನ್ಯಾಯಾಲಯದ ಮೊರೆ ಹೋದರು. ಇದೀಗ ಮಳಲಿ ಮಸೀದಿ ವಿವಾದ ನ್ಯಾಯಾಲಯದ ಅಂಗಳದಲ್ಲಿದೆ.

ಹಿಂದಿನಿಂದಲೂ ಭ್ರಾತೃತ್ವ ಹೊಂದಿದ್ದ ಮಳಲಿಯಲ್ಲಿ ಕೋಮು ನಂಜು ಹರಡಿ ನಾಯಕರೆನಿಸಿಕೊಂಡವರು ಹಾಯಾಗಿ ಹೋಗಿ ಬೆಚ್ಚಗೆ ಮಲಗಿದರು. ಆದರೆ ಇಲ್ಲಿನ ಸೌಹಾರ್ದತೆ ದೊಡ್ಡ ಮಟ್ಟದಲ್ಲಿ ಹಳಸದಿದ್ದರೂ ಹಿಂದೂ -ಮುಸ್ಲಿಮರ ಮಧ್ಯೆ ನಂಬಿಕೆ, ವಿಶ್ವಾಸವಂತೂ ಹಾಗೆಯೇ ಉಳಿಯಿತು.

ಆದರೆ ಸೌಹಾರ್ದತೆಯನ್ನು ಹಾಳುಗೆಡವಲು ಯತ್ನಿಸಿದವರಿಗೆ ತಾತ್ಕಾಲಿಕ ವಿಜಯ ಸಿಕ್ಕಿರಬಹುದು ಅಷ್ಟೇ. ರಾಜಕಾರಣದ ಮೆಟ್ಟಿಲನ್ನಾಗಿ ಮಾಡಿಸಿಕೊಂಡವರಿಗೂ ಅದು ದೀರ್ಘ ಕಾಲದ ಲಾಭ ತಂದುಕೊಡಲ್ಲ. ಮೂರು ವರ್ಷಗಳಿಂದ ಇಲ್ಲಿನ ಸೌಹಾರ್ದತೆ ಹಾಳುಗೆಡವಿದವರಿಗೆ ಇಲ್ಲಿನ ಹಿಂದೂ -ಮುಸ್ಲಿಮರು ಜೊತೆಯಾಗಿ ನಿಂತು ಕೋಮುವಾದಿ ನಾಯಕರ ಮುಖಕ್ಕೆ ಛಾಟಿ ಬೀಸಿದ್ದಾರೆ. ಅದು ಕೂಡ ಒಂದು ಮಸೀದಿ ಮತ್ತು ಧಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಅನ್ನುವುದು ಬಲು ಸೋಜಿಗ.

ಅಲ್ ಮಸ್ಜಿದುಲ್ ಬದ್ರಿಯಾ ಸಾನಬೆಟ್ಟು ಮಳಲಿ, SKSSF ನಾಡಜೆ ಭವಂತಿಬೆಟ್ಟು ಯೂನಿಟ್ ಇದರ ಜಂಟಿ ಆಶ್ರಯದಲ್ಲಿ SKSSF ವಿಖಾಯ ಕೈಕಂಬ ಹಾಗೂ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಸಹಯೋಗದಲ್ಲಿ ದಿನಾಂಕ 15-06-2025 ರಂದು ನಡೆದ ಬೃಹತ್ ರಕ್ತದಾನ ಶಿಬಿರ ಮಳಲಿ ಪರಿಸರದಲ್ಲಿ ಸೌಹಾರ್ದದ ಕಂಪನ್ನು ಬೀರುವ ರಕ್ತದಾನವಾಗಿ ಮಾರ್ಪಟ್ಟಿತು. ಮಸೀದಿ ಹಾಗೂ ಸಂಘಸಂಸ್ಥೆಗಳ ಪ್ರಮುಖರು, ಊರಿನ ಹಿಂದೂ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುವುದರ ಜೊತೆಗೆ ಇಲ್ಲಿನ ಬಹುಪಾಲು ಹಿಂದೂ ಬಾಂಧವರು ಮಸೀದಿ ಅಂಗಳಕ್ಕೆ ಬಂದು ರಕ್ತದಾನ ಮಾಡುವ ಮೂಲಕ ಮಳಲಿಯಲ್ಲಿ ಸೌಹಾರ್ದತೆ ಇನ್ನೂ ಜೀವಂತವಾಗಿದೆ. ನಮ್ಮ ಭಾತೃತ್ವವನ್ನು ಮಳಲಿಯ ಹೊರಗಿನ ಕೋಮು ಶಕ್ತಿಗಳು ಮುರಿಯಲು ಸಾಧ್ಯವಿಲ್ಲ ಅನ್ನುವ ಧೃಡ ಸಂದೇಶವನ್ನು ಸಾರಿದ್ದಾರೆ. ಪರಸ್ಪರ ಭಾತೃತ್ವದಲ್ಲಿದ್ದ ಊರಿನಲ್ಲಿ ಮಸೀದಿ-ಮಂದಿರ ವಿಚಾರದಲ್ಲಿ ದ್ವೇಷ ಹರಡಲು ಮುಂದಾದವರಿಗೆ ಇಲ್ಲಿನ ಹಿಂದೂ ಬಾಂಧವರು ಸರಿಯಾದ ತಪರಾಕಿಯನ್ನೇ ಕೊಟ್ಟಿದ್ದಾರೆ. ಇದು ಕರಾವಳಿಯ ಕೋಮು ಕ್ರಿಮಿಗಳಿಗೊಂದು ಪಾಠವಾಗಲಿ.