ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಗರ್ಭಿಣಿ ಮೃತಪಟ್ಟ ಪ್ರಕರಣದಲ್ಲಿ ದ ಕ ಜಿಲ್ಲಾ ಗ್ರಾಹಕರ ನ್ಯಾಯಾಲಯ, ವೈದ್ಯರಿಂದ ಮತ್ತು ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ ಮತ್ತು ಸೇವಾ ನ್ಯೂನ್ಯತೆ ಸಂಭವಿಸಿದೆ ಎಂದು ತೀರ್ಪು ನೀಡಿ, ದೂರುದಾರ (ಮೃತಳ ಗಂಡ) ರವರಿಗೆ ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದೆ. ವ್ಯಾಜ್ಯ ವೆಚ್ಚವಾಗಿ ರೂ.30 ಸಾವಿರ ನೀಡುವಂತೆ ಆದೇಶ ನೀಡಿದೆ. ಅದೇ ರೀತಿ 10 ಲಕ್ಷದ ಮೊತ್ತದ ಜೊತೆಗೆ 6 ಶೇಕಡಾ ಬಡ್ಡಿಯನ್ನು ಪ್ರಕರಣ ದಾಖಲಾತಿ ಸಮಯದಿಂದ ವಸೂಲಾಗುವವರೆಗೆ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿದ್ದು, 45 ದಿವಸದೊಳಗೆ ಪರಿಹಾರ ನೀಡದಿದ್ದರೆ 8 % ಬಡ್ಡಿಯಂತೆ ಪರಿಹಾರ ನೀಡತಕ್ಕದೆಂದು ನ್ಯಾಯಾಲಯ ಆದೇಶ ನೀಡಿದೆ.
45 ದಿವಸಗಳೊಳಗೆ ಪರಿಹಾರ ನೀಡದಿದ್ದರೆ ವಸೂಲಾತಿಗಾಗಿ ಸೂಕ್ತ ಕ್ರಿಮಿನಲ್ ಅಥವಾ ಸಿವಿಲ್ ವ್ಯವಹರಣೆಯನ್ನು ಆರಂಬಿಸಬಹುದು ಎಂದು ಆದೇಶದಲ್ಲಿ ತಿಳಿಸಿದೆ.
2014 ರಂದು ದಾಖಾಲಾದ ಪ್ರಕರಣವನ್ನು ಜಿಲ್ಲಾ ಗ್ರಾಹಕರ ನ್ಯಾಯಾಲಯ ವಜಾ ಮಾಡಿದ ಕುರಿತು ಮೃತರ ಪತಿ ದೂರುದಾರರು ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದು, ರಾಜ್ಯ ಗ್ರಾಹಕ ನ್ಯಾಯಾಲಯ 29-03-2022 ರಂದು ಪ್ರಕರಣವನ್ನು ಮರುವಿಚಾರಣೆ ನಡೆಸಬೇಕೆಂದು ಆದೇಶನೀಡಿತ್ತು. ಮರುವಿಚಾರಣೆಗೆ ಆದೇಶವಾದ ನಂತರ ದೂರುದಾರರು ಈ ಪ್ರಕರಣದ ವಕಾಲತನ್ನು ಪುತ್ತೂರಿನ ಎಚ್ & ಡಿ ಲೀಗಲ್ನ ನ್ಯಾಯವಾದಿಗಳಾದ ಹರೀಶ್ ಕುಮಾರ್ ಬಳಕ್ಕ ಮತ್ತು ದೀಪಕ್ ಬೊಳುವಾರು ರವರಿಗೆ ವಹಿಸಿದ್ದರು.
2022ರ ನಂತರ ಈ ಪ್ರಕರಣ ಮರುವಿಚಾರಣೆ ದ ಕ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಆರಂಭವಾಗಿ ಎಲ್ಲಾ ಸಾಕ್ಷಧಾರಗಳನ್ನು ಪರಿಗಣಿಸಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ. ಗರ್ಭಿಣಿಯನ್ನು ಹೆರಿಗೆ ಕೋಣೆಗೆ ಕಳುಹಿಸುವ ಮೊದಲು ಎಲ್ಲಾ ವ್ಯವಸ್ಥೆಗಳನ್ನು ಹೊಂದಿರಬೇಕಾದದ್ದು ವೈದ್ಯೆಯ ಕರ್ತವ್ಯ. ಹೆರಿಗೆ ಕೊಠಡಿಯಲ್ಲಿ ರಕ್ತ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಹೆರಿಗೆ ಪೂರ್ವ ಹೊಂದಿರತಕ್ಕದ್ದು ಆದರೆ ಈ ಪ್ರಕರಣದಲ್ಲಿ ಹೆರಿಗೆ ನಂತರ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ವೈದ್ಯೆ ಸಂಪೂರ್ಣ ವಿಫಲವಾಗಿದ್ದಾರೆ. ಈ ಮೂಲಕ ಜೀವ ಉಳಿಸುವ ಬಹು ಮುಖ್ಯ ತುರ್ತು ಸಮಯದಲ್ಲಿ ಸೂಕ್ತ ವ್ಯವಸ್ಥೆಯ ಕೊರತೆ ಕಂಡುಬರುತ್ತದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಒಬ್ಬ ಜವಾಬ್ದಾರಿಯುತ ವೈದ್ಯ ತುರ್ತು ಸಮಯದಲ್ಲಿ ರಕ್ತ, ಅಮ್ಲಜನಕ ದಂತಹ ಅವಶ್ಯಕತೆಗಳ ವಿಷಯದಲ್ಲಿ ಹೊಂದಬೇಕಾದ ಮುಂಜಾಗರೂಕತೆ ಈ ಪ್ರಕರಣದ ವಿಫಲವಾಗಿದೆ.
ಸದ್ರಿ ರೋಗಿಗೆ ಸಂಬಂಧಿಸಿದ ಕೇಸ್ ಶೀಟ್ ಎಲ್ಲ ವ್ಯವಸ್ಥೆ ಸಮರ್ಪಕವಾಗಿರುವುದನ್ನು ತೋರಿಸುವುದರಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅದೇ ರೀತಿ ಮಂಗಳೂರಿಗೆ ಆಸ್ಪತ್ರೆಗೆ ಶಿಫ್ಟ್ ಮಾಡುವಾಗ ಬರವಣಿಗೆ ಅಥವಾ ಮೌಖಿಕ ಒಪ್ಪಿಗೆ ಪಡೆಯದಿರುವುದು ಕೂಡ ಈ ಪ್ರಕರಣದಲ್ಲಿ ಕಂಡುಬರುತ್ತದೆ. ಅದೇ ರೀತಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಕಾಯಿದೆಯಂತೆ 72 ಗಂಟೆಯೊಳಗೆ ಕೇಸ್ಶೀಟ್ ಡಿಸ್ಚಾರ್ಜ್ ಸಮ್ಮರಿಗಳನ್ನು ದೂರುದಾರರಿಗೆ ಆಸ್ಪತ್ರೆ ಒದಗಿಸದೆ ವೃತ್ತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ತೀರ್ಪುನೀಡಿದೆ.
ದೂರುದಾರರ ಪರವಾಗಿ ಎಚ್ & ಡಿ ಲೀಗಲ್ನ ಹರೀಶ್ ಕುಮಾರ್ ಬಳಕ್ಕ ಮತ್ತು ದೀಪಕ್ ಬೊಳುವಾರು, ಭುವನೇಶ್ವರಿ ಎಮ್, ಪಿ ವಿಷೀಕಾ ಸಂತ್ರಸ್ತರ ಪರ ವಾದಿಸಿದರು.
