ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬಿಜೆಪಿ ಸಭೆ.

ಕರಾವಳಿ

ಕರ್ತವ್ಯ ಲೋಪ, ಬೇಜವಾಬ್ದಾರಿ ಆರೋಪದಲ್ಲಿ ಪಿ.ಡಿ.ಒ.ಗೋಕುಲ್ ದಾಸ್ ಭಕ್ತ ಸಸ್ಪೆಂಡ್.

ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಇದೇ ಸಂದರ್ಭದಲ್ಲಿ ಬಂಟ್ವಾಳ ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಸಭೆ ನಡೆದಿದೆ. ರಾಜಕೀಯ ಪಕ್ಷಗಳ ಸಭೆಗಳು ಪಂಚಾಯತ್ ಸಭಾಂಗಣದಲ್ಲಿ ನಡೆಯುವಂತಿಲ್ಲ ಎಂಬ ಕಾನೂನು ಇದ್ದರೂ ಇಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ಅವಕಾಶ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಸಾಮಾಜಿಕ ಕಾರ್ಯಕರ್ತರೊಬ್ಬರು ಪಿ.ಡಿ.ಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ತಕ್ಷಣವೆ ದೂರು ನೀಡಿದ್ದರು.

ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರು ಘಟನೆಯ ಬಗ್ಗೆ ವಿವರಣೆ ನೀಡುವಂತೆ ಕಾರಣ ಕೇಳಿ ಪಿ.ಡಿ.ಒ. ಗೋಕುಲ್ ದಾಸ್ ಭಕ್ತ ಅವರಿಗೆ ನೋಟೀಸ್ ಜಾರಿ ಮಾಡಿದ್ದರು. ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಸಭೆ ನಡೆಸಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂಬ ಉಡಾಫೆಯ ಉತ್ತರ ಗೋಕುಲ್ ದಾಸ್ ಭಕ್ತ ಅವರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ತಾಲೂಕು ಪಂಚಾಯತ್ ಅಧಿಕಾರಿಯವರು ವರದಿ ನೀಡಿದ್ದಾರೆ.

ವರದಿಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ಬೇಜವಾಬ್ದಾರಿ ಮತ್ತು ಲೋಪ ಕಂಡು ಬಂದ ಕಾರಣಕ್ಕಾಗಿ ಪಿ.ಡಿ.ಒ. ಗೋಕುಲ್ ದಾಸ್ ಭಕ್ತ ಅವರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ. ಸರ್ಕಾರಿ ಸಿಬ್ಬಂದಿಗಳು ತಾವು ಸೇವೆಯಲ್ಲಿರುವಷ್ಟು ಕಾಲ ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ಒಲವು ತೋರಬಾರದು ಎಂಬುದು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.