ಕೋಚಿಂಗ್ ಸೆಂಟರ್ ಮಾಫಿಯಾಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಾಥ್.!

ರಾಜ್ಯ

ನಾಯಿಕೊಡೆಗಳಂತೆ ಹುಟ್ಟುತ್ತಿರುವ ಟ್ಯೂಶನ್ ಸೆಂಟರ್ ಗಳಿಗೆ ಕಡಿವಾಣ ಹಾಕಲು ಮುಂದಾದ ಪದವಿಪೂರ್ವ ಶಿಕ್ಷಣ ಇಲಾಖೆ;

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ನಡೆಯುವಷ್ಟು ಮಾಫಿಯಾ ಬಹುಶಃ ಬೇರೆ ಯಾವುದೇ ಇಲಾಖೆಗಳಲ್ಲಿ ನಡೆಯುತ್ತಿಲ್ಲ ಅನ್ನುವಷ್ಟು ಹಗರಣಗಳು ಬೃಹದಾಕಾರವಾಗಿ ಬೆಳೆದಿದೆ. ಲಕ್ಷ ಲಕ್ಷ ಡೊನೇಷನ್ ಪೀಕಿಸುವ ಶಿಕ್ಷಣ ಸಂಸ್ಥೆಗಳು ಒಂದು ಕಡೆಯಾದರೆ, ನಮ್ಮ ಕೋಚಿಂಗ್ ಸೆಂಟರ್ ನಲ್ಲಿ ಟ್ಯೂಶನ್ ಪಡೆದವರು ಉನ್ನತ ಮಾರ್ಕ್ಸ್ ಪಡೆದಿದ್ದಾರೆ ಅನ್ನುವ ಜಾಹೀರಾತು ಬಿತ್ತರಿಸಿ ಪೋಷಕ ವರ್ಗವನ್ನು ಆಮಿಷಕ್ಕೆ ಒಳಪಡಿಸಿ ದುಡ್ಡು ಪೀಕಿಸುವ ದಂಧೆ ಕೂಡ ನಡೆಯುತ್ತಿರುವುದು ಸುಳ್ಳಲ್ಲ. ಇದರ ಜೊತೆಗೆ ಯಾವುದೇ ಅನುಮತಿ ಪಡೆಯದೆ ನೂರಾರು ಕೋಚಿಂಗ್ ಸೆಂಟರ್ ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಪೂರ್ತಿ ಮುಂಡಾಮೋಚಲು ಮುಂದಾಗಿದ್ದು, ಕೆಲವೊಂದು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಇವರ ಜೊತೆ ಶಾಮೀಲಾಗಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿದೆ.

ಶಿಕ್ಷಣ ಇಲಾಖೆಯ ವತಿಯಿಂದ ಯಾವುದೇ ಪರವಾನಿಗೆ ಇಲ್ಲದೆ, ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್ ಗಳಿಗೆ ಆಗಮಿಸುವ ಮಕ್ಕಳು ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆದು ಕೋಚಿಂಗ್ ಸೆಂಟರ್ ಗೆ ತೆರಳುತ್ತಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ನೀಡುವ ಮೂಲಕ ತರಬೇತಿ ಕೇಂದ್ರಗಳಿಗೆ ಆಯಾ ಶಾಲೆಯ ಶಿಕ್ಷಕರು ಸಾಥ್ ನೀಡುತ್ತಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿವೆ.

ಶಿಕ್ಷಣ ಇಲಾಖೆಯ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಪದವಿಪೂರ್ವ ಶಿಕ್ಷಣ ಇಲಾಖೆ ಇದೀಗ ಸುತ್ತೋಲೆಯನ್ನು ಹೊರಡಿಸಿದ್ದು, ಅನಧಿಕೃತ ಕೋಚಿಂಗ್ ಸೆಂಟರ್ ಬಾಗಿಲು ಮುಚ್ಚಿಸುವ ಕೆಲಸಕ್ಕೆ ಮುಂದಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ 1983 ಅನುಚ್ಚೇದ 35ರ ಪ್ರಕಾರ ಹಾಗೂ ಕರ್ನಾಟಕ ಟ್ಯುಟೋರಿಯಲ್ ಇನ್ಸಿಟ್ಯೂಷನ್ಸ್ ನಿಯಮಗಳು 2001 ಈ ನಿಯಮವು ಸರ್ಕಾರದ ಅಧಿಸೂಚನೆ ಇಡಿ 43 ವಿವಧ 2000, ದಿ: 05/03/2002 ರಿಂದ ಜಾರಿಗೆ ಬಂದಿದ್ದು, ಈ ನಿಯಮಗಳ ಅಡಿಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಕೋಚಿಂಗ್ ಸೆಂಟ‌ರ್/ ಸಂಸ್ಥೆಗಳನ್ನು ನಡೆಸಲು ಉದ್ದೇಶಿಸಿದ ಹಾಗೂ ಈಗಾಗಲೇ ನಡೆಸುತ್ತಿರುವ ಕೋಚಿಂಗ್ ಸೆಂಟರ್/ಸಂಸ್ಥೆಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿದ್ದು, ಮತ್ತು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು.
ಅನಧಿಕೃತವಾಗಿ ಕೋಚಿಂಗ್ ಸೆಂಟರ್/ಸಂಸ್ಥೆಗಳನ್ನು ನಡೆಸುತ್ತಿರುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮಗಳನ್ನು ಜರುಗಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.