ಬೆಂಗಳೂರು: ಬಿಜೆಪಿಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ಆರೆಸ್ಸೆಸ್ ನಾಯಕರಿಂದ ಭಾರೀ ಮೊತ್ತದ ವಸೂಲಿ ನಡೆದಿದೆ ಎಂಬ ಆಡಿಯೋ ವೈರಲ್ ವಿಚಾರದಲ್ಲಿ ಪತ್ರಕರ್ತರಿಗೆ ಬೆದರಿಕೆ ಹಾಕಿರುವ ಪ್ರಕರಣ ಇದೀಗ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದೆ.
ಪತ್ರಕರ್ತನಿಗೆ RSS ಧುರೀಣನ ಹೆಸರಲ್ಲಿ ಬೆದರಿಕೆ ಒಡ್ಡಲಾಗಿದೆ ಎಂಬ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶುಕ್ರವಾರ (ಡಿ.6) ದೂರು ಸಲ್ಲಿಕೆಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಅವರು ತಮಗೆ ನಿರಂತರ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಖ್ಯಾತ ಪತ್ರಕರ್ತ ಕಾರ್ತಿಕ್ ಸಧನ್ ಅವರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ತಾನು ಪ್ರತಿಷ್ಠಿತ ಮಾಧ್ಯಮದ ಮುಖ್ಯಸ್ಥನಾಗಿದ್ದೇನೆ ಎಂದು ಹೇಳಿಕೊಂಡಿರುವ ಅವರು, ತನ್ನ ಕುರಿತ ಆಡಿಯೋ ವೈರಲ್ ಮಾಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜೀವನವನ್ನೇ ಹಾಳು ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಪತ್ರಕರ್ತ ಕಾರ್ತಿಕ್ ಸಧನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕಾಶ್ ಮಾತ್ರವಲ್ಲ, ಅವರ ಆಪ್ತರೆಂದು ಹೇಳಿಕೊಂಡ ಹಲವರಿಂದ ನಿರಂತರ ಬೆದರಿಕೆ ಕರೆ ಬರುತ್ತಿದೆ. ಈ ಬಗ್ಗೆ ಐದಾರು ಬಾರಿ ಬೆಂಗಳೂರಿನ ಬಸವೇಶ್ವರ ನಗರ ಠಾಣೆಗೆ ಭೇಟಿ ನೀಡಿ ಮೌಖಿಕ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ನಿರಂತರ ಬೆದರಿಕೆ ಕರೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರಿಗೆ ದೂರು ನೀಡಿರುವುದಾಗಿ ಕಾರ್ತಿಕ್ ಸಧನ್ ತಿಳಿಸಿದ್ದಾರೆ.