ಮೂಲ್ಕಿ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಚಿನ್ನದ ಅಂಗಡಿ ಮಾಲಿಕ ಅಬ್ದುಲ್ ಲತೀಫ್ ಹತ್ಯಾ ಆರೋಪಿ ಮುಸ್ತಫಾ ಅರೆಸ್ಟ್

ಕರಾವಳಿ

ಮಾವನ ಬದಲು ಅಳಿಯ ಟಾರ್ಗೆಟ್.. ಜಾಮೀನಿನ ಮೇಲೆ ಹೊರಬಂದಿದ್ದರೂ ಮತ್ತೆ ಜೈಲಿಗೆ ಹೋದ ಹಂತಕರು.! ಜಿಲ್ಲೆಯಲ್ಲೊಂದು ಅಪರೂಪದ ಮರ್ಡರ್ ಕೇಸ್.!

ಐದು ವರ್ಷಗಳ ಹಿಂದೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಸನ್ನಿಧಿ ಹೆದ್ದಾರಿ ಬಳಿ ಹಾಡಹಗಲೇ ನಡೆದಿದ್ದ ಚಿನ್ನದ ಅಂಗಡಿ ಮಾಲಿಕ ಅಬ್ದುಲ್ ಲತೀಫ್ ಹತ್ಯೆಗೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಮುಹಮ್ಮದ್ ಮುಸ್ತಫಾ ಯಾನೆ ಮುಸ್ತಾ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2020 ರ ಜೂನ್ 5 ರಂದು ಅಬ್ದುಲ್ ಲತೀಫ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮೂಲ್ಕಿ ಕಾರ್ನಾಡ್ ಪರಿಸರದಲ್ಲಿ ಮುನೀರ್ ಹಾಗೂ ದಾವೂದ್ ಹಕೀಂ ಮಧ್ಯೆ ಸಣ್ಣ ಮಟ್ಟಿನ ವೈಷಮ್ಯವಿತ್ತು. ಹಕೀಂ ತಂಡ ಮುನೀರ್ ಹತ್ಯೆಗೆ ಹೊಂಚು ಹಾಕಿ ತಲವಾರು ಬೀಸಿತ್ತು. ಆಗ ಅಲ್ಲಿಯೇ ಇದ್ದ ಮುನೀರ್ ಮಗಳ ಗಂಡ ಅಬ್ದುಲ್ ಲತೀಫ್ ಜಗಳ ಬಿಡಿಸಲು ಬಂದಾಗ ದುಷ್ಕರ್ಮಿಗಳು ಲತೀಫ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದಿದ್ದರು. ಹಂತಕರಿಗೆ ಟಾರ್ಗೆಟ್ ಇದ್ದಿದ್ದು ಮಾವ ಮುನೀರ್, ಆದರೆ ಜೀವ ಕಳೆದುಕೊಂಡಿದ್ದು ಅಳಿಯ ಲತೀಫ್‌.

ಅಬ್ದುಲ್ ಲತೀಫ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಎರಡೇ ವರ್ಷದಲ್ಲಿ ಆರೋಪಿಗಳು ಜಾಮೀನು ಮೇಲೆ ಬಿಡುಗಡೆಗೊಂಡು ಹೊರಬಂದಿದ್ದರು. ಲತೀಫ್ ಪತ್ನಿ ವಕೀಲೆ ಆಗಿದ್ದರಿಂದ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಳು. ಜೈಲಿನಿಂದ ಬಿಡುಗಡೆಗೊಂಡಿದ್ದ ಅರೋಪಿಗಳ ಜಾಮೀನು ರದ್ದುಗೊಳಿಸಿ ಮರಳಿ ಜೈಲಿಗಟ್ಟುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಮೂಲ್ಕಿ ಪೊಲೀಸರು ಒಂಭತ್ತು ಮಂದಿ ಆರೋಪಿಗಳನ್ನು ಪುನಃ ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಮುಸ್ತಫಾ ಜಾಮೀನಿನ ಮೇಲೆ ಹೊರಬಂದು ನಕಲಿ ಪಾಸ್ ಪೋರ್ಟ್ ಬಳಿಸಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.

ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿರುವ ಮುಸ್ತಾಫ ನನ್ನು ಬಂಧಿಸಿ ಜೈಲಿಗಟ್ಟುವಂತೆ ಅಬ್ದುಲ್ ಲತೀಫ್ ಪತ್ನಿ ರಾಜ್ಯ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅಂದಿನ ಕಮೀಷನರ್ ಶಶಿಕುಮಾರ್ ಅವರಿಗೆ ಸಮನ್ಸ್ ನೀಡಿತ್ತು.

ನಕಲಿ ಪಾಸ್ ಪೋರ್ಟ್ ಬಳಸಿ ಪರಾರಿಯಾಗಿದ್ದ ಮುಹಮ್ಮದ್ ಮುಸ್ತಫಾ ಇತ್ತೀಚೆಗೆ ಊರಿಗೆ ಬಂದಿದ್ದು, ಖಚಿತ ಮಾಹಿತಿ ಪಡೆದ ಪೊಲೀಸರು ದಿನಾಂಕ 30-06-2025 ರಂದು ಮೂಲ್ಕಿ ಪಕ್ಷಿಕೆರೆ ಬಳಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮುಸ್ತಫಾ ಮೇಲೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ, ಮೂಲ್ಕಿ ಪೊಲೀಸ್ ಠಾಣೆ ಸೇರಿದಂತೆ ಐದು ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿ ಮುಹಮ್ಮದ್ ಮುಸ್ತಫಾ ಯಾನೆ ಮುಸ್ತಾನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಕೊಲೆ ಪ್ರಕರಣದಲ್ಲಿ ಒಮ್ಮೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದು ಮತ್ತೆ ಜಾಮೀನು ರದ್ದಾಗಿ ಎಲ್ಲಾ ಆರೋಪಿಗಳು ಜೈಲಿಗೆ ಹೋಗಿರುವುದು ಜಿಲ್ಲೆಯ ಅಪರೂಪದ ಒಂದು ಪ್ರಕರಣ ಇದಾಗಿದೆ. ಹತ್ಯೆಗೀಡಾದ ಅಬ್ದುಲ್ ಲತೀಫ್ ಪತ್ನಿ ವಕೀಲೆ ಆಗಿದ್ದು, ಕಾನೂನು ಹೋರಾಟದಲ್ಲಿ ಗೆಲುವು ಕಂಡಿದ್ದಾರೆ.