ಡೆಡ್ಲಿ ಲೋನ್ ಆಪ್ ಗೆ ಗುರುಪುರದ ಸಲೀಂ ಬಲಿ.! ಪ್ರಾಥಮಿಕ ತನಿಖೆಯಲ್ಲಿ ಶಾಕಿಂಗ್ ವಿಚಾರ ಬಹಿರಂಗ
ಸೈಬರ್ ಖದೀಮರ ವಂಚನೆಗೆ ಬಲಿಯಾಗುವ ಮುನ್ನ ಎಚ್ಚರ
ವಿವಾಹವಾಗಿ ಬರೀ ಎರಡು ತಿಂಗಳು ಕಳೆದಿದೆ ಅಷ್ಟೇ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತಾಯಿಯೂ ಮೃತಪಟ್ಟಿದ್ದಳು. ಇದು ಗುರುಪುರ ಸಲೀಂ ಕುಟುಂಬದ ದುರಂತ ಕಥೆ. ಡೆಡ್ಲಿ ಲೋನ್ ಆಪ್ ನಂಬಿ ಸಾಲ ಶೋಲ ಮಾಡಿ ಬರೋಬ್ಬರಿ 17 ಲಕ್ಷ ಲಪಟಾಯಿಸಿದ ಸೈಬರ್ ವಂಚಕರ ದರೋಡೆಗೆ ಸಿಲುಕಿ ಕಂಡಕ್ಟರ್ ಸಲೀಂ ಗುರುಪುರ ಸಮೀಪದ ದೋಣಿಂಜೆಗುತ್ತು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಮೇ 25 ರಂದು ಬಜಾಲಿನ ಯುವತಿಯೊಂದಿಗೆ ವಿವಾಹವಾಗಿದ್ದ ಸಲೀಂ ಆಗಸ್ಟ್ 1 ರಂದು ನಾಪತ್ತೆಯಾಗಿದ್ದ. ಗುರುಪುರ ದೋಣಿಂಜೆಗುತ್ತು ಗುರುಪುರ ನದಿ ಸಮೀಪ ಸ್ಕೂಟರ್ ಮತ್ತು ಮೊಬೈಲ್ ಲಭಿಸಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿತ್ತು. ಅಂದುಕೊಂಡಂತೆ ಊರವರು ನದಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿತ್ತು.
ಗುರುಪುರ ಕಂಡಕ್ಟರ್ ಸಲೀಂ ಆತ್ಮಹತ್ಯೆ ಹಿಂದೆ ಬೆಟ್ಟಿಂಗ್ ದಂಧೆ ಎಂಬ ಗುಮಾನಿ ಮೊದಲು ಹಬ್ಬಿತ್ತು. ಆ ನಂತರ ಪೊಲೀಸರು ತನಿಖೆಗೆ ಇಳಿದಾಗ ಶಾಕಿಂಗ್ ವಿಚಾರ ಹೊರಬಿತ್ತು.

ಸೆಲೀನಾ ಬಸ್ ಕಂಡಕ್ಟರ್ ಆಗಿದ್ದ ಸಲೀಂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ. ಆತನ ಮೊಬೈಲಿಗೆ ಬಂದಿದ್ದ ಕರೆಯನ್ನು ನಂಬಿ ಇನ್ ವೆಸ್ಟ್ ಮೆಂಟ್ ಮಾಡಿದ್ದ. ಕರೆ ಮಾಡಿದ ಸೈಬರ್ ವಂಚಕರು ಲೋನ್ ನೀಡುವುದಾಗಿ ನಂಬಿಸಿದ್ದರು. ಜೂನ್ ಮೊದಲ ವಾರದಲ್ಲಿ ಎಂಭತ್ತು ಸಾವಿರದಷ್ಟು ಹಣವನ್ನು ಲೋನ್ ಆಪ್ ಗೆ ಸಂದಾಯ ಮಾಡಿದ್ದ. ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಲೋನ್ ಸ್ಯಾಂಕ್ಷನ್ ಆಗಿದ್ದ ವಿವರವನ್ನು ಈತನಿಗೆ ನೀಡಿದ್ದರು. ಸ್ವಲ್ಪವೂ ಅನುಮಾನವೇ ಬಾರದಷ್ಟು ದಾಖಲೆ ರೆಡಿ ಮಾಡಿ ಕಳುಹಿಸಿದ್ದರು. ಇನ್ನಷ್ಟು ಹಣ ಸಂದಾಯ ಮಾಡಿದರೆ ಲೋನ್ ಪಾಸಾಗುತ್ತದೆ ಎಂದು ನಂಬಿಸಿದ್ದರು. ಇದನ್ನೇ ನಂಬಿದ ಸಲೀಂ ಹಂತಹಂತವಾಗಿ ಹಣ ವರ್ಗಾಯಿಸಿದ್ದ. ಕುಟುಂಬಿಕರ ಚಿನ್ನ, ಸ್ನೇಹಿತರಿಂದ ಸಾಲ ಪಡೆದು ಬರೋಬ್ಬರಿ 17 ಲಕ್ಷ ರೂಪಾಯಿ ಪಾವತಿ ಮಾಡಿದ್ದ. ಆದರೆ ಲೋನ್ ಸಿಗಲೇ ಇಲ್ಲ. ಕುಟುಂಬಿಕರಲ್ಲಿ ನಮ್ಮ ಕಷ್ಟ ಎಲ್ಲಾ ಮುಗಿಯಿತು, ನನಗೆ ಶ್ರೀಘ್ರದಲ್ಲಿ ಲೋನ್ ಸಿಗುತ್ತದೆ ಎಂದು ಹೇಳಿದ್ದ. ಆದರೆ ತಾನು ವಂಚನೆಗೆ ಸಿಲುಕಿದ್ದೇನೆ ಅನ್ನುವ ಅರಿವಾದಾಗ ಕಾಲ ಮಿಂಚಿ ಹೋಗಿತ್ತು. ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದ. ಬಾಳಿ ಬದುಕಬೇಕಾಗಿದ್ದ ಯುವಕ ವಂಚಕರ ಜಾಲಕ್ಕೆ ಸಿಲುಕಿ ಜೀವ ಕಳೆದುಕೊಂಡ.
ಉತ್ತರ ಭಾರತ ಮೂಲದ ಖದೀಮರು
ಕಂಡಕ್ಟರ್ ಸಲೀಂ ಗೆ ಲೋನ್ ಆಸೆ ಹುಟ್ಟಿಸಿ ಯಾಮಾರಿಸಿದವರು ಬಿಹಾರ, ಜಾರ್ಖಂಡ್ ಮೂಲದವರು. ಫ್ರಾಡ್ ಲೋನ್ ಆಪ್ ಮೂಲಕ ಇವರು ಹಲವರಿಗೆ ವಂಚಿಸಿದ್ದರು. ಉತ್ತರ ಭಾರತ ಮೂಲದ ಸೈಬರ್ ಖದೀಮರ ಆಟಾಟೋಪಕ್ಕೆ ಹಲವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಆಪ್, ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಜೀವ ತೆತ್ತವರು ಇದ್ದಾರೆ. ಡಿಜಿಟಲ್ ಅರೆಸ್ಟ್ ಮೂಲಕವೂ ವಂಚನೆ ಮಾಡುವ ಜಾಲವು ಸಕ್ರೀಯವಾಗಿದೆ. ಇದನ್ನು ನಂಬಿ ಅವರ ಜಾಲಕ್ಕೆ ಸಿಲುಕಿದರೆ ಬದುಕು ಬರ್ಬಾದ್ ಆಗುವುದಂತೂ ಖಂಡಿತ. ಪೊಲೀಸ್ ಇಲಾಖೆ ಇಂತಹ ಸೈಬರ್ ಖದೀಮರ ಹೆಡೆಮುರಿ ಕಟ್ಟುವ ಕೆಲಸ ಮಾಡಬೇಕಿದೆ. ಆ ಮೂಲಕ ಹಲವಾರು ಕುಟುಂಬದ ಬೆಳಕು ನಂದುವುದು ತಪ್ಪುತ್ತದೆ.
ಆರ್ ಬಿಐ ರಿಜಿಸ್ಟ್ರೇಷನ್ ಆಗದ ನೂರಾರು ಫೇಕ್ ಲೋನ್ ಆಪ್ ಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಕ್ಲಿಕ್ಕಿಸುವ ಮುನ್ನ ನೂರಾರು ಬಾರಿ ಯೋಚನೆ ಮಾಡಬೇಕು. ಜನರ ಹಣದ ಸಮಸ್ಯೆ, ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡಿರುವ ಲೋನ್ ಆಪ್ ಗಳು ಮೋಸದ ಬಲೆಗೆ ಸಿಲುಕಿಸಿ ದರೋಡೆ ಮಾಡುವ ತಂಡ ಸಕ್ರೀಯವಾಗಿದೆ. ಇತ್ತೀಚೆಗೆ ಬಂಟ್ವಾಳದ ಭಾರತಿ ಎಂಬ ಮಹಿಳೆಯೂ ಕೂಡ ಸೈಬರ್ ವಂಚಕರ ಬಲೆಗೆ ಸಿಲುಕಿದ ಪ್ರಕರಣ ವರದಿಯಾಗಿತ್ತು. ದುಬಾರಿ ಗಿಫ್ಟ್ ಬಂದಿದೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದರು. ದೆಹಲಿಯ ಎಕ್ಸ್ ಪ್ರೆಸ್ ಕೊರಿಯರ್ ಸರ್ವೀಸ್ ನಲ್ಲಿ ಗೋಲ್ಡ್, ಐಫೋನ್, 49 ಲಕ್ಷ ಕರೆನ್ಸಿ ಸಹಿತ ದುಬಾರಿ ಗಿಫ್ಟ್ ಪಡೆಯಲು ಬಜಾಜ್ ನಿಂದ ಲೋನ್ ಆಪ್ ಮಾಡಿ ಪಡೆದುಕೊಳ್ಳಿ ಎಂದು ಎರಡೂವರೆ ಲಕ್ಷ ರೂಪಾಯಿ ಪಂಗನಾಮ ಹಾಕಿದ್ದರು.
ಇನ್ನಾದರೂ ಡೆಡ್ಲಿ ಆಫ್ ಬಗ್ಗೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕಿದೆ.
