ದೇಶದಾದ್ಯಂತ ಟ್ರೆಂಡ್ ಆಗಿರುವ ‘ಯ್ಯೂ ಶೇಫ್ ಕ್ಲಾಸ್ ರೂಂ’ ಮಲಯಾಳಿ ಪ್ರಾಡಕ್ಟ್ ಅನ್ನುವವರು ಈ ಸುದ್ದಿ ಓದಿ..

ರಾಜ್ಯ

1996 ರಲ್ಲಿ ಸುಳ್ಯದ ಶಿಕ್ಷಕ ಡಾ. ಚಂದ್ರಶೇಖರ ದಾಮ್ಲೆ, 2024 ರಲ್ಲಿ ದಾವಣಗೆರೆ ಶಿಕ್ಷಕಿ ನಾಗವೇಣಿ ಯ್ಯೂ ಶೇಪ್ ಕ್ಲಾಸ್ ರೂಂ ಅಳವಡಿಸಿ ಭೇಷ್ ಅನ್ನಿಸಿದ್ದರು. ರಾಜ್ಯ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಈ ವಿಶಿಷ್ಟ ಪ್ರಯೋಗ ಯಶಸ್ವಿಯಾಗಿಲ್ಲ.

ದೇಶದಾದ್ಯಂತ ಟ್ರೆಂಡ್ ಆಗಿರುವ ಯ್ಯೂ ಶೇಪ್ ಕ್ಲಾಸ್ ರೂಂ ಕಾನ್ಸೆಪ್ಟ್ ಮೊದಲ ಬಾರಿಗೆ ಪ್ರಯೋಗ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆ ಅಂದರೆ ನೀವು ನಂಬುತ್ತೀರಾ.. ನಂಬಲೇಬೇಕು. ಮಲಯಾಳಿ ಸಿನೆಮಾದ ಕಾನ್ಸೆಪ್ಟ್ ಎಂದು ಪ್ರಚಾರ ಪಡೆದಿರುವ ಯ್ಯೂ ಶೇಪ್ ಮಾದರಿ ಕ್ಲಾಸ್ ರೂಂ ಅನ್ನು 1996 ರಲ್ಲೇ ಸುಳ್ಯದಲ್ಲಿ ಡಾ. ಚಂದ್ರಶೇಖರ ದಾಮ್ಲೆ ಎಂಬ ಶಿಕ್ಷಕರು ಪ್ರಾಯೋಗಿಕವಾಗಿ ಆರಂಭಿಸಿದ್ದರು. ಆದರೆ ಅವತ್ತು ಯಾವುದೇ ಪ್ರಚಾರ ಸಿಗದೆ ಈ ಕಾನ್ಸೆಪ್ಟ್ ನೆನೆಗುದಿಗೆ ಬಿದ್ದಿತ್ತು.

ಶಾಲಾ ತರಗತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಸಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಲಾಸ್ಟ್ ಬೆಂಚ್ ಹಾಗೂ ಫಸ್ಟ್ ಬೆಂಚ್ ಆಸನ ವ್ಯವಸ್ಥೆ ಬದಲಿಗೆ ಯ್ಯೂ ಶೇಪ್ ಮಾದರಿಯ ಆಸನ ವ್ಯವಸ್ಥೆ ಇಂದು ದೇಶದಾದ್ಯಂತ ಗಮನ ಸೆಳೆದಿದೆ. ಮಲಯಾಳಿ ಸಿನೆಮಾವೊಂದರ ಪ್ರೇರಣೆಯಿಂದ ಕೇರಳದಲ್ಲಿ ಇದೀಗ ಯ್ಯೂ ಶೇಪ್ ಮಾದರಿಯ ಕ್ಲಾಸ್ ರೂಂ ವ್ಯವಸ್ಥೆ ಜಾರಿಗೆ ಬಂದಿದೆ. ಕೇರಳದ ಈ ವ್ಯವಸ್ಥೆಗೆ ಬಹುಪರಾಕ್ ಕೊಟ್ಟು ತಮಿಳುನಾಡು, ಪಂಜಾಬ್, ಪಶ್ಚಿಮ ಬಂಗಾಳದಲ್ಲೂ ಇದೀಗ ಜಾರಿಗೆ ತರಲಾಗಿದೆ.

1996 ರಲ್ಲೇ ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಸುಳ್ಯದ ಶಿಕ್ಷಕರೊಬ್ಬರು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದರು. ಆಂಗ್ಲ ಮಾಧ್ಯಮದ ಪ್ರಭಾವಕ್ಕೆ ಸಿಲುಕಿ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿಶಿಷ್ಟವಾಗಿ ಇರಬೇಕೆಂದು ವೃತ್ತಾಕಾರದ ಕಟ್ಟಡಗಳನ್ನು ಕಟ್ಟುವ ಮೂಲಕ ಮಕ್ಕಳನ್ನು ವೃತ್ತಕಾರದಲ್ಲೇ ಕೂರಿಸಿ ತರಗತಿಯನ್ನು ನಡೆಸಿದ್ದರು. ಆದರೆ ಪ್ರಚಾರದ ಕೊರತೆಯಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಲ್ಲಿ ವಿಫಲವಾಗಿತ್ತು.

ಇದೇ ಮಾದರಿಯ ವ್ಯವಸ್ಥೆಯನ್ನು 2024 ರಲ್ಲಿ ದಾವಣಗೆರೆ ಜಿಲ್ಲೆಯ ಸರಕಾರಿ ಶಾಲಾ ಶಿಕ್ಷಕಿ ನಾಗವೇಣಿ ಅವರು ಯ್ಯೂ ಆಕಾರದ ಆಸನ ವ್ಯವಸ್ಥೆಯನ್ನು ತರಗತಿಯಲ್ಲಿ ಅಳವಡಿಸಿದ್ದರು. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತನ್ನ ಅಧಿಕೃತ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿತ್ತು. ಆದರೆ ರಾಷ್ಟ್ರಕ್ಕೆ ಮಾದರಿಯಾಗಬೇಕಿದ್ದ ಈ ಉಪಕ್ರಮದ ಬಗ್ಗೆ ಯಾರೂ ಗಮನಹರಿಸದಿದ್ದುದರಿಂದ ಅದು ಫಲಪ್ರದವಾಗಲಿಲ್ಲ.

ರಾಜ್ಯ ಶಿಕ್ಷಣ ಇಲಾಖೆಯು ನಮ್ಮ ರಾಜ್ಯದಲ್ಲೇ ಕೆಲವು ಪ್ರತಿಭಾವಂತ ಶಿಕ್ಷಕರು ಇಂತಹ ಪ್ರಯೋಗ ಮಾಡಿದಾಗ ಅವರ ಬೆನ್ನು ತಟ್ಟದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಈ ಮಾದರಿಯ ಕ್ರೆಡಿಟ್ ಬೇರೆ ರಾಜ್ಯಕ್ಕೆ ಹೋಗಿದೆ. ಇದು ರಾಜ್ಯ ಶಿಕ್ಷಣ ಇಲಾಖೆಯ ದುರಂತ ಅನ್ನದೇ ವಿಧಿಯಿಲ್ಲ.