ವಿಜಯೇಂದ್ರ ಅಧ್ಯಕ್ಷರಾಗುತ್ತಿದ್ದಂತೆ ತವರು ನೆಲದಲ್ಲೇ ‘ವಿಜಯ’ ಮರೀಚಿಕೆ.!
ಶಿಕಾರಿಪುರದ ಬಿಜೆಪಿ ಶಾಸಕ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಆದರೆ ಅವರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ 30 ವರ್ಷಗಳ ದಾಖಲೆಯೊಂದನ್ನು ಮುರಿದು ಹಾಕಿದೆ. ಬಿ ಎಸ್. ಯಡಿಯೂರಪ್ಪ, ಅವರ ಪ್ರಭಾವ ಇರುವ ಕ್ಷೇತ್ರ ಶಿಕಾರಿಪುರ.
2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿ. ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದರು. ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ. ವೈ. ವಿಜಯೇಂದ್ರಗೆ ಬಿಟ್ಟುಕೊಟ್ಟು ವಿಜಯೇಂದ್ರ 81,810 ಮತಗಳನ್ನು ಪಡೆದು ಮೊದಲ ಬಾರಿಗೆ ಅಯ್ಕೆಯಾಗಿದ್ದರು.
ಇತಿಹಾಸ ಮುರಿದ ಕಾಂಗ್ರೆಸ್ ಬಿ. ವೈ. ವಿಜಯೇಂದ್ರ ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರದ ತರಲಘಟ್ಟ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಸಾಧಿಸಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪಂಚಾಯಿತಿ ಅಧಿಕಾರವನ್ನು ಪಡೆದಿದೆ. ಗ್ರಾಮ ಪಂಚಾಯಿತಿ ಒಟ್ಟು ಸದಸ್ಯ ಬಲ 16. ಕಾಂಗ್ರೆಸ್ ಮತ್ತು ಬಿಜೆಪಿ ತಲಾ 8 ಸ್ಥಾನದಲ್ಲಿ ಜಯಗಳಿಸಿದ್ದವು. ಅಧ್ಯಕ್ಷರಾಗಿ ಮಂಜಮ್ಮ ಜ್ಞಾನೇಶ್ ಮತ್ತು ಉಪಾಧ್ಯಕ್ಷರಾಗಿ ಕುಮಾರ್ ನಾಯ್ಕ್ ಆಯ್ಕೆಯಾದರು. ಈ ಮೂಲಕ ಸ್ಥಳೀಯ ಬಿಜೆಪಿ ಶಾಸಕರಿಗೆ ಕ್ಷೇತ್ರದಲ್ಲೇ ಹಿನ್ನಡೆಯಾಗಿದೆ. 30 ವರ್ಷದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಅಧಿಕಾರ ಕಾಂಗ್ರೆಸ್ ‘ಕೈ’ ಸೇರಿದೆ. ಅದರಲ್ಲೂ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.