ದೇಶದ ಇತಿಹಾಸದಲ್ಲಿ ಸೈಬರ್ ವಂಚಕರಿಗೆ ಶಿಕ್ಷೆಗೊಳಗಾದ ಮೊದಲ ಪ್ರಕರಣ; 8 ತಿಂಗಳಲ್ಲೇ ತನಿಖೆ ಪೂರ್ಣ.. ಸೈಬರ್ ವಂಚಕರಿಗೆ ಮುಂದೈತೆ ಮಾರಿಹಬ್ಬ.!
ಸ್ವಲ್ಪ ಯಾಮಾರಿದರೂ ಮುಗೀತು.. ಹೊಸ ಸೈಬರ್ ವಂಚನೆಗೆ ಬಲಿಪಶು ಆಗುವುದಂತೂ ಖಂಡಿತ. ಇಂದು ದೇಶದಾದ್ಯಂತ ಡಿಜಿಟಲ್ ತಂತ್ರಜ್ಞಾನಕ್ಕೆ ಜನಸಾಮಾನ್ಯರು ಒಗ್ಗಿ ಹೋದ ಪರಿಣಾಮ ವಂಚಕರು ಎಲ್ಲೋ ಕೂತು ಡಿಜಿಟಲ್ ಅರೆಸ್ಟ್ ಮೂಲಕ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ದೇಶದ ಪ್ರಧಾನ ಮಂತ್ರಿ ಡಿಜಿಟಲ್ ಅರೆಸ್ಟ್ ಅನ್ನುವುದು ಕಾನೂನು ಬಾಹಿರ ಕೃತ್ಯ ಎಂದು ದೇಶವಾಸಿಗಳಿಗೆ ಅರಿವು ಮೂಡಿಸಿದರೂ ಸೈಬರ್ ವಂಚನೆಗೆ ಬಲಿಯಾಗುತ್ತಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಬಹುಪಾಲು ಶಿಕ್ಷಿತರೇ ಡಿಜಿಟಲ್ ಅರೆಸ್ಟ್ ಅನ್ನುವ ಮಾಯಾಜಾಲದೊಳಗೆ ಸಿಲುಕಿ ವಂಚನೆಗೆ ಸಿಲುಕುತ್ತಿದ್ದಾರೆ.
ಇದೀಗ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕಲ್ಯಾಣಿ ನ್ಯಾಯಾಲಯವು ಒಂಬತ್ತು ಮಂದಿ ಡಿಜಿಟಲ್ ಅರೆಸ್ಟ್ ಖದೀಮರಿಗೆ ಜೀವಾವಧಿ ಶಿಕ್ಷೆ ಘೋಷಿಸುವ ಮೂಲಕ ದೇಶದ ಇತಿಹಾಸದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮೊದಲ ಪ್ರಕರಣ ಇದಾಗಿದೆ.

ಪಶ್ಚಿಮ ಬಂಗಾಳದ ನಿವೃತ್ತ ವಿಜ್ಞಾನಿ ಪಾರ್ಥ ಕುಮಾರ್ ಮುಖರ್ಜಿ ಅವರಿಗೆ ಡಿಜಿಟಲ್ ಅರೆಸ್ಟ್ ಮಾಡಿದ ಸೈಬರ್ ಖದೀಮರು ಅವರಿಂದ 1 ಲಕ್ಷ ರೂಪಾಯಿ ಹಣ ಪೀಕಿಸಿತ್ತು. ಈ ಸೈಬರ್ ಖದೀಮರು ಕೃತಕ ಖಾತೆಗಳ ಮೂಲಕ ಇ-ಮೇಲ್, ಮೆಸೇಜ್, ಫೋನ್ ಮೂಲಕ ಹಲವರಿಗೂ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಿಸಿತ್ತು. ತನಿಖೆಗೆ ಇಳಿದ ಪೊಲೀಸರು ಮಹಾರಾಷ್ಟ್ರದ ಮೊಹಮ್ಮದ್ ಇಮ್ತಿಯಾಜ್ ಅನ್ಸಾರಿ, ಶಾಹಿದ್ ಆಲಿ ಶೇಖ್, ಶಾರುಖ್ ರಫೀಖ್ ಶೇಖ್, ಜತಿನ್ ಅನೂಪ್ ಲಾಡ್ವಾಲ್, ಹರಿಯಾಣದ ರೋಹಿತ್ ಸಿಂಗ್, ರೂಪೇಶ್ ಯಾದವ್, ಸಾಹಿಲ್ ಸಿಂಗ್, ಗುಜರಾತಿನ ಪಠಾಣ್ ಸುಮೈಯಾ ಬಾನು, ಫಾಲ್ಡು ಅಶೋಕ್ ಎಂಬ ಸೈಬರ್ ವಂಚಕರನ್ನು ಬಂಧಿಸಿದ್ದರು.
ಬಂಧಿತರ ವಿರುದ್ಧ ನ್ಯಾಯಾಲಯ ತ್ವರಿತವಾಗಿ ವಿಚಾರಣೆ ಆರಂಭಿಸಿದ್ದು, ಬಂಧಿತ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನಾಡಿಯಾ ಜಿಲ್ಲೆಯ ಕಲ್ಯಾಣಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಘೋಷಿಸಿದೆ. ಬರೀ ಎಂಟು ತಿಂಗಳ ಅವಧಿಯಲ್ಲಿ ಬಂಧನ, ತನಿಖೆ, ವಿಚಾರಣೆ ಪೂರ್ಣಗೊಂಡು ನ್ಯಾಯಾಲಯ ತೀರ್ಪು ನೀಡಿರುವುದು ಐತಿಹಾಸಿಕ ತೀರ್ಪು ಎಂದು ಬಣ್ಣನೆಗೆ ಕಾರಣವಾಗಿದೆ.
ದೇಶದಲ್ಲಿ ಡಿಜಿಟಲ್ ಬಂಧನಕ್ಕೆ ಸಂಬಂಧಿಸಿದ ಮೊದಲ ಶಿಕ್ಷೆ ಇದಾಗಿದೆ. ಸೈಬರ್ ಹೋರಾಟದಲ್ಲಿ ಇದು ಹೊಸ ಮೈಲಿಗಲ್ಲು. ಸೈಬರ್ ವಂಚಕರಿಗೆ ಇದು ಎಚ್ಚರಿಕೆಯ ಸಂದೇಶವಾಗಿದೆ.
