ವಾರದಲ್ಲಿ ಎರಡು ಬಾರಿ ದೆಹಲಿ ಯಾತ್ರೆ.. ಕುತೂಹಲ ಮೂಡಿಸುತ್ತಿದೆ ಹೈಕಮಾಂಡ್ ನಡೆ
ಮೈಸೂರಿನಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶ ಕಾರ್ಯಕ್ರಮದಿಂದ ಅರ್ಧಕ್ಕೇ ನಿರ್ಗಮಿಸಿದ್ದ ಉಪ ಮುಖ್ಯಮಂತ್ರಿ ಡಿಕೆಶಿ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಪ್ರಯಾಣ ಎಂಬ ಮಾಹಿತಿ ಲಭ್ಯವಾಗಿದ್ದರೂ, ಮೈಸೂರಿನಲ್ಲಿ ನಡೆದ ಸರ್ಕಾರದ ಕಾರ್ಯಕ್ರಮದಿಂದ ಅರ್ಧಕ್ಕೆ ನಿರ್ಗಮಿಸಿ ತರಾತುರಿಯಲ್ಲಿ ದೆಹಲಿಗೆ ಹೊರಟಿದ್ದು ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಶಿರಡಿಗೆ ತೆರಳಿದ್ದ ಡಿಕೆಶಿ ದಿಢೀರ್ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಇದಾದ 8 ದಿನಗಳ ಅಂತರದಲ್ಲೇ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ ಕೆ ಶಿವಕುಮಾರ್, ಭಾಷಣ ಮಾಡಿದ ನಂತರ ವೇದಿಕೆಯಿಂದ ಕೆಳಗಿಳಿದು ನಿರ್ಗಮಿಸಿದರು. ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವುದಕ್ಕೂ ಮುನ್ನವೇ ಡಿಕೆ ಶಿವಕುಮಾರ್ ಮೈಸೂರು ತೊರೆದಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಶುರು ಮಾಡುತ್ತಿದ್ದಂತೆ ಡಿಕೆಶಿ ಖರ್ಚಿಯಿಂದ ಎದ್ದು ಹೊರಟೇಬಿಟ್ಟಿದ್ದರು. ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗ ಡಿ ಕೆ ಶಿವಕುಮಾರ್ ಹೆಸರು ಪ್ರಸಾಪಿಸಲಿಲ್ಲ ಎಂದು ವೇದಿಕೆಯ ಮೇಲಿದ್ದ ಕಾಂಗ್ರೆಸ್ ಮುಖಂಡರೊಬ್ಬರು ಸಿದ್ದರಾಮಯ್ಯನವರ ಗಮನ ಸೆಳೆದರು. ಆದರೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆದರು.
