ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಸೊರಕೆ ಹೆಸರು ಮುಂಚೂಣಿಯಲ್ಲಿ..? ದ.ಕ ಜಿಲ್ಲೆಯ ‘ಆಲಿ’ ಗೆ ಸಿಗುತ್ತಾ ನಿಗಮ ಭಾಗ್ಯ..? ಕಾಂಗ್ರೆಸ್ ನಾಯಕರಲ್ಲಿ ಗರಿಗೆದರಿದ ‘ನಿಗಮ’ ನಿರೀಕ್ಷೆ.!

ಕರಾವಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ದೆಹಲಿ ಭೇಟಿ ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಹೊಸ ಹುರುಪನ್ನು ತಂದುಕೊಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಾ ಬಂದರೂ ಕಾರ್ಯಕರ್ತರು, ಎರಡನೇ ಹಂತದ ನಾಯಕರಿಗೆ ನಿಗಮ ಭಾಗ್ಯ ಪೂರ್ಣ ಪ್ರಮಾಣದಲ್ಲಿ ದೊರಕಿಲ್ಲ. ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಬೇಕು, ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ಯಾವಾಗ ಅನ್ನುವ ಅಸಮಾಧಾನಗಳು ಪಕ್ಷದೊಳಗೆ ನಡೆಯುತ್ತಿದೆ. ಇದೀಗ ಕೆಲವು ಬಾಕಿ ಉಳಿದಿರುವ ನಿಗಮ ಮಂಡಳಿಗಳಿಗೆ ನೇಮಕಾತಿ ಪಟ್ಟಿ ಫೈನಲ್ ಹಂತಕ್ಕೆ ತಲುಪಿದ್ದು, ಅಧಿಕೃತವಾಗಿ ಬಿಡುಗಡೆಗೊಳ್ಳಲು ಬಾಕಿ ಇದೆ ಅನ್ನುವ ಮಾಹಿತಿಗಳು ಕಾಂಗ್ರೆಸ್ ಮೂಲಗಳಿಂದ ಕೇಳಿ ಬರುತ್ತಿದೆ.

ಇನ್ನು ಕರಾವಳಿ ಭಾಗದ ಪ್ರತಿಷ್ಠಿತ ನಿಗಮ ಮಂಡಳಿ ಎಂದು ಕರೆಯಿಸಿಕೊಂಡಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆಗೇರಲು ಕರಾವಳಿ ಭಾಗದ ಹಲವು ಪ್ರಭಾವಿ ರಾಜಕಾರಣಿಗಳು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿತ್ತು. ಇದೀಗ ಅಧಿಕಾರ ಇಲ್ಲದೆ ಚಡಪಡಿಸುತ್ತಿರುವ ಮಾಜಿ ಸಚಿವರು, ಮಾಜಿ ಶಾಸಕರು ಕನಿಷ್ಠ ಪಕ್ಷ ನಿಗಮ ಮಂಡಳಿ ಸಿಕ್ಕರೂ ಸಾಕು ಎಂದು ದೆಹಲಿಯತ್ತ ಪ್ರಯಾಣ ಬೆಳೆಸುವ ಸಂಖ್ಯೆ ಹೆಚ್ಚಾಗುತ್ತಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕಾಗಿ ಕರಾವಳಿಯ ಇಬ್ಬರು ಮಾಜಿ ಸಚಿವರು ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ ಅನ್ನುವ ಮಾತುಗಳಿವೆ. ಅದರಲ್ಲೂ ರಾಜೀವ್ ಗಾಂಧಿ ಯವರ ನೀಲಿ ಕಣ್ಣಿನ ಹುಡುಗ ಎಂದು ಕರೆಯಿಸಿಕೊಂಡಿದ್ದ ಕರಾವಳಿಯ ಮಾಜಿ ಸಚಿವರೊಬ್ಬರಿಗೆ ಈ ಹುದ್ದೆ ಪಕ್ಕಾ ಆಗಿದೆ ಅನ್ನುವುದು ಕಾಂಗ್ರೆಸ್ ಮೂಲಗಳಿಂದ ಬಂದ ಮಾಹಿತಿ.

ವಿನಯ್‌ ಕುಮಾರ್‌ ಸೊರಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದು ,ನಗರಾಭಿವೃದ್ದಿ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು. ಪುತ್ತೂರು ಹಾಗೂ ಕಾಪು ಕ್ಷೇತ್ರದ ಶಾಸಕರಾಗಿ, ಉಡುಪಿ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೀಗ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೇರಲು ಹೈಕಮಾಂಡ್ ಮಟ್ಟದಲ್ಲಿ ಶತಪ್ರಯತ್ನ ನಡೆಸುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಸಚಿವ ರಮಾನಾಥ ರೈ ಅವರು ಕೂಡ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಮಾಜಿ ಸಚಿವರಾಗಿದ್ದ ನಾಗರಾಜ ಶೆಟ್ಟಿ ಈ ಹುದ್ದೆಗೆ ಏರಿದ್ದರು. ಇದೀಗ ಅಧಿಕಾರ ಇಲ್ಲದೆ ಏಕಾಂಗಿಯಾಗಿರುವ ರಮಾನಾಥ ರೈ ಕನಿಷ್ಠ ಪಕ್ಷ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸಿಕ್ಕರೂ ಓಕೆ ಅನ್ನುವ ಸ್ಥಿತಿಯಲ್ಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಕ್ಕೆ ಪ್ರಭಾವಶಾಲಿ ರಾಜಕಾರಣಿಗಳು ಅಖಾಡಕ್ಕೆ ಇಳಿದಿರುವುದರಿಂದ ಕಾಂಗ್ರೆಸ್‌ ಹೈಕಮಾಂಡ್‌ ಇದುವರೆಗೂ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಪ್ರಭಾವಶಾಲಿ ಕರಾವಳಿಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇನ್ನು ಪುತ್ತೂರು ಭಾಗದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಾದ, ಹಿರಿಯ ನಾಯಕರಾಗಿರುವ ಮುಹಮ್ಮದ್ ಆಲಿ ಯವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುವ ಅವಕಾಶ ಹೆಚ್ಚಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಪುತ್ತೂರು ಕಾಂಗ್ರೆಸ್ ನಗರ ಅಧ್ಯಕ್ಷ ಸ್ಥಾನದಲ್ಲಿರುವ ಮುಹಮ್ಮದ್ ಆಲಿ ಯವರನ್ನು ಆ ಸ್ಥಾನದಿಂದ ಕಿತ್ತು ಹಾಕಲು ತೆರೆಮರೆಯ ಯತ್ನ ನಡೆಯುತ್ತಿದೆ. ಪುಡಾ ಅಧ್ಯಕ್ಷರಾಗುವ ಅವಕಾಶ ಕೊನೆಯ ಕ್ಷಣದಲ್ಲಿ ತಪ್ಪಿ ಹೋಗಿತ್ತು. ಆಲಿ ಬದಲು ಅಮಲ ರಾಮಚಂದ್ರ ಪಾಲಾಗಿತ್ತು. ಸದ್ಯ ಪುತ್ತೂರು ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ವಿದ್ಯಮಾನದಿಂದ ಮುಹಮ್ಮದ್ ಆಲಿ ಬೇಸೆತ್ತಿದ್ದು, ಕಾಂಗ್ರೆಸ್ ನಾಯಕರ ವಿರುದ್ಧವೇ ಮುನಿಸು ತೋರಿಸಿದ್ದಾರೆ. ಇದೀಗ ನಿಗಮ ಮಂಡಳಿಯಲ್ಲಿ ಜಾಗ ಕಲ್ಪಿಸುವ ಮೂಲಕ ಅವರ ಅಸಮಾಧಾನವನ್ನು ಬಗೆಹರಿಸಲು ಮುಂದಾಗಬಹುದು ಅನ್ನುವ ಮಾತುಗಳಿವೆ. ಮುಹಮ್ಮದ್ ಆಲಿ ಯವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವ ಮೂಲಕ ಕರಾವಳಿಯ ಅಲ್ಪಸಂಖ್ಯಾತ ಸಮುದಾಯದ ಒಲವನ್ನು ಪಡೆಯಲು ಕಾಂಗ್ರೆಸ್ ಪಕ್ಷ ಮುಂದಾಗಬಹುದು ಅನ್ನುವ ಅಂದಾಜಿದೆ. ಎಲ್ಲದಕ್ಕೂ ನಿಗಮ ಮಂಡಳಿ ಪಟ್ಟಿ ಬಿಡುಗಡೆ ನಂತರವೇ ಇದಕ್ಕೆಲ್ಲ ಪೂರ್ಣ ವಿರಾಮ ಬೀಳಬಹುದು.