ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೃಹತ್ ಪ್ರಮಾಣದ ಗಾಂಜಾ ಸಾಗಾಟ ಪತ್ತೆ, ಆರೋಪಿಗಳ ಬಂಧನ

ಕರಾವಳಿ

ಮಂಗಳೂರು ನಗರ ಸಿಸಿಬಿ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಕೈಗೊಂಡಿರುವ ಭಾಗವಾಗಿ ಇಂದು ದೊಡ್ಡ ಪ್ರಮಾಣದ 123 ಕೆಜಿ ಗಾಂಜಾ ಮತ್ತು ಅದನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದರು.

ಎರಡು ಕಾರುಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು, ಮೂಡಬಿದಿರೆ ತಾಲ್ಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ನ ಮಠದಕೆರೆ ಎಂಬ ಸ್ಥಳದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾ ಸಮೇತ 2 ವಾಹನಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುತ್ತಾರೆ. ಕಾಸರಗೋಡು ನಿವಾಸಿ ಮಸೂದ್ ಎಂ.ಕೆ, ಮೊಹಮ್ಮದ್ ಆಶಿಕ್, ಸುಬೇರ್ ಮೂರು ಮಂದಿ ಆರೋಪಿಗಳು ಕಾಸರಗೋಡು ನಿವಾಸಿಗಳಾಗಿರುತ್ತಾರೆ. ಬಂಧಿತ ಆರೋಪಿಗಳಿಂದ 123 ಕೆಜಿ ಗಾಂಜಾ, ಎರಡು ವಾಹನಗಳು (KA-21-P-9084 ಹಾಗೂ KL-14-AF-7010) ಮತ್ತು 5 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದು, ಈ ಎಲ್ಲಾ ಸೊತ್ತಿನ ಒಟ್ಟು ಮೌಲ್ಯ ಸುಮಾರು 46,20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಂಗಳೂರು ನಗರ ಪೊಲೀಸರಿಂದ ನಿರಂತರವಾಗಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯು ಮುಂದುವರೆದಿರುತ್ತದೆ, ಈ ಬೃಹತ್ ಗಾಂಜಾ ಮಾರಾಟ, ಸಾಗಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಸಿಬಿ ಘಟಕದ ಸಿಬ್ಬಂದಗಳು ಪಾಲ್ಗೊಂಡಿದ್ದರು.