ಆರೋಪಿಗಳ ಪರ ಜಾಮೀನು ಕೊಡುವವರು ಆರೋಪಿಯ ಪೂರ್ವಾಪರ ತಿಳಿದುಕೊಂಡು ಎಚ್ಚರ ವಹಿಸಿ: ಮಂಗಳೂರು ಪೊಲೀಸ್ ಆಯುಕ್ತರು
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತ್ತಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ತನಿಖೆಯನ್ನು ಪೂರೈಸಿ, ಮಾನ್ಯ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ನಂತರ ಕೆಲವು ಪ್ರಕರಣಗಳಲ್ಲಿ ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿರುವ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಆರೋಪಿಗಳ ಬಿಡುಗಡೆ ಸಮಯದಲ್ಲಿ ಸ್ಯೂರಿಟಿದಾರರು ಭದ್ರತೆಯ ಆಧಾರವಾಗಿ ನೀಡಿದ ಜಮೀನು/ಸೊತ್ತು ವಿವರಗಳನ್ನು ಸಂಗ್ರಹಿಸಲಾಗಿದೆ.
ಮಾನ್ಯ ನ್ಯಾಯಾಲಯದಿಂದ ಆದೇಶವನ್ನು ಪಡೆದು ಸ್ಯೂರಿಟಿದಾರರಿಗೆ ಸಂಬಂಧಿಸಿದ ಸೊತ್ತುಗಳನ್ನು ಮುಟ್ಟುಗೋಲು ಹಾಕಲು, ಸ್ಯೂರಿಟಿದಾರರಿಂದ ಆಧಾರವಾಗಿಟ್ಟಿದ್ದ ದಂಡವನ್ನು ವಸೂಲಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಮುಟ್ಟುಗೋಲು ಮಾಡಲಾಗಿರುವ ಆಸ್ತಿಯ ಆರ್.ಟಿ.ಸಿ.ಯಲ್ಲಿ ವಿವರಗಳನ್ನು ನಮೂದಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಮುಟ್ಟುಗೋಲು ಪ್ರಕ್ರಿಯೆಗಳು ಚಾಲ್ತಿಯಲ್ಲಿರುತ್ತದೆ.

ಕಳೆದ ಒಂದು ತಿಂಗಳಿನಿಂದ ಐದು ಅಪರಾಧ ಪ್ರಕರಣಗಳಲ್ಲಿ ಸ್ಯೂರಿಟಿಗಾಗಿ ಇರಿಸಲಾಗಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದು, ಎರಡು ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯದಿಂದ ದಂಡ ವಿಧಿಸಲಾಗಿದೆ. ನಾಲ್ಕು ಪ್ರಕರಣಗಳಲ್ಲಿ ಮುಟ್ಟುಗೋಲು ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಈ ಕಾರ್ಯಾಚರಣೆ ಆರಂಭವಾದ ಬಳಿಕ ಎರಡು ಪ್ರಕರಣಗಳಲ್ಲಿ ಆರೋಪಿಗಳು ಸ್ವತಃ ನ್ಯಾಯಾಲಯಕ್ಕೆ ಶರಣಾಗಿರುತ್ತಾರೆ.
ಸದರಿ ಕಾರ್ಯಾಚರಣೆಯು ಮುಂದುವರಿದಿದ್ದು, ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇನೆಂದರೆ ಆರೋಪಿಗಳ ಪರ ಜಾಮೀನು ಕೊಡುವಾಗ ಆರೋಪಿಯ ಪೂರ್ವಾಪರ ತಿಳಿದುಕೊಂಡು ಎಚ್ಚರ ವಹಿಸಬೇಕಾಗಿದೆ.
