ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸುಳ್ಯದ ಪೈಚಾರು ನಿವಾಸಿ, 29 ವರ್ಷದ ಸತೀಶ್ ಎಂದು ಗುರುತಿಸಲಾಗಿದೆ.
ಆರೋಪಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿ ನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3 ರಿಂದ ಜುಲೈ 22 ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ ರೂ. 2,20,000/- ಮೌಲ್ಯದ ಒಣ ಅಡಿಕೆ ಕಳವಿನ ಬಗ್ಗೆ ದಿನಾಂಕ: 23-07-2025 ರಂದು ಅಕ್ರ 112/2025 ಕಲಂ 306, ಬಿ.ಎನ್ .ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ.ರವರ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದರು.

ಆರೋಪಿಯಿಂದ ಕಳವುಗೈದ 74000 ರೂಪಾಯಿ ಮೌಲ್ಯದ 15 ಚೀಲ ಒಣ ಅಡಿಕೆ, ಕಳವು ಅಡಿಕೆಯನ್ನು ಮಾರಾಟ ಮಾಡಿದ ನಗದು ಹಣ 70,000 ರೂಪಾಯಿ ಸೇರಿದಂತೆ ಒಟ್ಟು ಮೌಲ್ಯ 1,44,000/- ಆಗಿದ್ದು ಹಾಗೂ ಕೃತ್ಯಕ್ಕೆ ಬಳಸಿದ ಆಪೆ ಗೂಡ್ಸ್ ಅಂದಾಜು ಮೌಲ್ಯ 80,000/- ಆಗಿದ್ದು ಒಟ್ಟು 2,24,000/- ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ .ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
