ಕಾನೂನು ಸೇವೆ ಒದಗಿಸಿ ಕೊಡುವುದಾಗಿ ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ಬೃಹತ್‌ ಸೈಬರ್‌ ವಂಚನೆ ಜಾಲವನ್ನು ಬೇಧಿಸಿದ ಸಿಸಿಬಿ ಪೊಲೀಸರು.

ರಾಷ್ಟ್ರೀಯ

ವಂಚನೆ ನಡೆಸಲು ಬಳಸುತ್ತಿದ್ದ ಹತ್ತು ಲಕ್ಷ ಮೌಲ್ಯದ ಉ‍ಪಕರಣ ಜಪ್ತಿ

ಸೈಬರ್ ವಂಚನೆಗೆ ಒಳಗಾದವರಿಗೆ ಕಾನೂನು ಸೇವೆ ಒದಗಿಸಿ ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಬೃಹತ್‌ ಸೈಬರ್‌ ವಂಚನೆ ಜಾಲ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ವಂಚನೆ ನಡೆಸಲು ಬಳಸುತ್ತಿದ್ದ ರೂ. ಹತ್ತು ಲಕ್ಷ ಮೌಲ್ಯದ ಉ‍ಪಕರಣಗಳನ್ನು ಜಪ್ತಿ ಮಾಡಿದ್ದಾರೆ.

ಆಗಸ್ಟ್‌ 2ರಂದು ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಆಧರಿಸಿ, ವೈಟ್‌ಫೀಲ್ಡ್‌ನ ಡೇಟಾ ಸೆಂಟರ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರು ಸಿಮ್‌ ಬಾಕ್ಸ್‌ಗಳು, 133 ಸಿಮ್‌ ಕಾರ್ಡ್‌ಗಳು, 12 ಡೇಟಾ ಸ್ಟೋರೇಜ್‌ ಸರ್ವರ್‌ ಒಂದು ನೆಟ್‌ ವರ್ಕ್‌ ರೌಟರ್‌ ಅನ್ನು ಜಪ್ತಿ ಮಾಡಿಕೊಂಡಿದ್ದರು.

ಕಾರ್ಯಾಚರಣೆಯಲ್ಲಿ ತಮಿಳುನಾಡಿನ ಬಿ.ಇ ಪದವೀಧರ ತುಫೈಲ್‌ ಅಹಮದ್ ಎಂಬಾತನನ್ನು ಬಂಧಿಸಲಾಗಿತ್ತು. ಆತನನ್ನು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದ್ದ. ಆ ಮಾಹಿತಿ ಆಧರಿಸಿ ಡೇಟಾ ಸೆಂಟರ್ ಮೇಲೆ ದಾಳಿ ನಡೆಸಲಾಯಿತು. ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ವಿದೇಶದಲ್ಲಿ ನೆಲಸಿರುವ ಶಂಕೆಯಿದ್ದು ಅವರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.