ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆಯಲ್ಲಿ ಸಮರ್ಥ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ನೀಡುವ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದಿಂದ 19 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದು, ಮಂಗಳೂರು ಸಿಸಿಬಿ ಯಲ್ಲಿ ಎ.ಎಸ್.ಐ ಆಗಿರುವ ಸುಜನ್ ಶೆಟ್ಟಿ ಹಾಗೂ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇನ್ಸ್ ಪೆಕ್ಟರ್ ಶಾಂತರಾಮ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಇನ್ಸ್ ಪೆಕ್ಟರ್ ಶಾಂತರಾಮ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ, ಪಣಂಬೂರು, ಸಿಸಿಬಿ ಸೇರಿದಂತೆ ಹಲವು ಠಾಣೆಗಳಲ್ಲಿ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು, ಕರ್ತವ್ಯದ ಅವಧಿಯಲ್ಲಿ ದಕ್ಷ ಅಧಿಕಾರಿ ಅನ್ನುವ ಪ್ರಶಂಸೆಗೆ ಪಾತ್ರರಾಗಿದ್ದರು. ಹಲವು ಅಪರಾಧ ಪ್ರಕರಣಗಳನ್ನು ಬೇಧಿಸಿದ ಹಿರಿಮೆ ಇವರದ್ದು. ಪ್ರಸ್ತುತ ಬೆಂಗಳೂರಿನಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದಾರೆ.

ಸಿಸಿಬಿ ಎ.ಎಸ್.ಐ ಆಗಿರುವ ಸುಜನ್ ಶೆಟ್ಟಿ ಮಂಗಳೂರಿನಲ್ಲಿ ಹಲವು ವರ್ಷಗಳ ಕಾಲ ಸೇವೆಯಲ್ಲಿದ್ದು, ಹಲವು ನಿಗೂಢ ಪ್ರಕರಣಗಳನ್ನು ಬೇಧಿಸಿದ ತಂಡದಲ್ಲಿ ಇವರು ಪ್ರಮುಖರಾಗಿದ್ದರು. ಹಲವಾರು ಅಪರಾಧ ಪ್ರಕರಣಗಳನ್ನು ಬೇಧಿಸಿದ ಕೀರ್ತಿ ಇವರಿಗಿದೆ. ಅರ್ಹವಾಗಿಯೇ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
