ಕಾನ್ಫಿಡೆಂಟ್ ಗ್ರೂಪ್ ನ ಮುಖ್ಯಸ್ಥ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ED ಅಧಿಕಾರಿಗಳಿಗೆ ಬೆಂಗಳೂರು ಬಿಟ್ಟು ತೆರಳದಂತೆ ಮಹತ್ವದ ಸೂಚನೆ

ರಾಷ್ಟ್ರೀಯ

‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ಚುರುಕುಗೊಳಿಸಿದ್ದು, ದಾಳಿ ನಡೆಸಲು ಬಂದಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ಬಿಟ್ಟು ತೆರಳದಂತೆ ಮಹತ್ವದ ಸೂಚನೆ ನೀಡಿದೆ. ಕೊಚ್ಚಿಯಿಂದ ಆಗಮಿಸಿದ್ದ ಐಆರ್‌ಎಸ್‌ ಅಧಿಕಾರಿ ಕೃಷ್ಣಪ್ರಸಾದ್‌ ನೇತೃತ್ವದ ಅಧಿಕಾರಿಗಳ ತಂಡವು ಕಾನ್ಫಿಡೆಂಟ್ ಗ್ರೂಪ್‌ಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ರಾಯ್ ಅವರ ಈ ದುಡುಕಿನ ನಿರ್ಧಾರಕ್ಕೆ ಐಟಿ ಅಧಿಕಾರಿಗಳ ದಾಳಿ ಹಾಗೂ ಅದರಿಂದ ಉಂಟಾದ ಒತ್ತಡವೇ ಕಾರಣವೇ ಅಥವಾ ವ್ಯವಹಾರಿಕ ಹಾಗೂ ವೈಯಕ್ತಿಕ ಸಮಸ್ಯೆಗಳು ಹಿನ್ನೆಲೆಯಾಗಿವೆಯೇ ಎಂಬ ಹಲವು ಆಯಾಮಗಳಲ್ಲಿ ಎಸ್‌ಐಟಿ ಈಗ ತನಿಖೆ ನಡೆಸುತ್ತಿದೆ.

ತನಿಖಾ ದೃಷ್ಟಿಯಿಂದ ಕೊಚ್ಚಿಯ ಐಟಿ ಅಧಿಕಾರಿಗಳ ತಂಡಕ್ಕೆ ಸದ್ಯ ನಗರ ಬಿಟ್ಟು ಹೋಗದಂತೆ ಎಸ್ಐಟಿ ತಂಡ ತಾಕೀತು ಮಾಡಿಡ್ಡು, ಅಗತ್ಯ ಬಿದ್ದರೆ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ವಂಶಿಕೃಷ್ಣ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ ಅವರ ನೇತೃತ್ವದ ವಿಶೇಷ ತಂಡವು ಶನಿವಾರದಿಂದಲೇ ವಿಚಾರಣೆ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದೆ.

ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವ ವಿಷಯಗಳನ್ನು ಪ್ರಸ್ತಾಪಿಸಿದ್ದರು ಮತ್ತು ರಾಯ್ ಅವರು ಕುಟುಂಬಸ್ಥರ ಬಳಿ ಏನನ್ನು ಹಂಚಿಕೊಂಡಿದ್ದರು ಎಂಬುದನ್ನು ತಿಳಿಯಲು ಸಹೋದರ ಮತ್ತು ಪುತ್ರ ಅವರ ಹೇಳಿಕೆಗಳನ್ನು ಪಡೆಯಲಾಗಿದೆ. ಪ್ರಕರಣದ ಹೆಚ್ಚಿನ ವಿವರಗಳಿಗಾಗಿ ಸೋಮವಾರದಂದು ರಾಯ್ ಅವರ ಪತ್ನಿ ಹಾಗೂ ಮಗಳನ್ನು ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ.

ಘಟನೆಯ ದಿನ ಕಚೇರಿಯಲ್ಲಿದ್ದ ನಿರ್ದೇಶಕರು, ಹಣಕಾಸು ವಿಭಾಗದ ಸಿಬ್ಬಂದಿ ಹಾಗೂ ಆಪ್ತರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ರಾಯ್ ಬಳಸುತ್ತಿದ್ದ ಎರಡು ಐಫೋನ್‌ಗಳನ್ನು ಜಪ್ತಿ ಮಾಡಲಾಗಿದ್ದು, ದತ್ತಾಂಶ ಮರುಸಂಗ್ರಹಕ್ಕಾಗಿ (Data Recovery) ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸಾಮಾನ್ಯವಾಗಿ ತನಿಖಾ ಸಂಸ್ಥೆಗಳು ಶೋಧಕಾರ್ಯ ನಡೆಸುವಾಗ ಆರೋಪಿಗಳ ಬಳಿಯಿರುವ ಮೊಬೈಲ್ ಮತ್ತು ಶಸ್ತ್ರಾಸ್ತ್ರಗಳನ್ನು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ವಶಕ್ಕೆ ಪಡೆಯುತ್ತವೆ. ಆದರೆ, ರಾಯ್ ಅವರ ಪ್ರಕರಣದಲ್ಲಿ ಐಟಿ ಅಧಿಕಾರಿಗಳು ಪರವಾನಗಿ ಹೊಂದಿದ್ದ ಪಿಸ್ತೂಲ್ ಅನ್ನು ಏಕೆ ವಶಕ್ಕೆ ಪಡೆದಿರಲಿಲ್ಲ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಎಸ್‌ಐಟಿ ಪಿಸ್ತೂಲ್ ಮತ್ತು ಲ್ಯಾಪ್‌ಟಾಪ್ ಅನ್ನು ವಶಕ್ಕೆ ಪಡೆದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ.