ನೇರ ನಡೆ ನುಡಿಯ, ಅಪರೂಪದ ದಕ್ಷ, ನಿಷ್ಠಾವಂತ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಬೆಳ್ಳಿಯಪ್ಪ

ರಾಜ್ಯ

ಪೊಲೀಸ್ ಅನ್ನುವ ಪದಕ್ಕೆ ಗೌರವ, ಪ್ರಾಮಾಣಿಕತೆಯ ಹೆಸರು ತಂದುಕೊಟ್ಟವರು ಕೆ.ಯು. ಬೆಳ್ಳಿಯಪ್ಪ ಅವರು. ತನ್ನ ದಕ್ಷ, ಸಮರ್ಥ ಕಾರ್ಯ ನಿರ್ವಹಣೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನಸ್ಸಿನಲ್ಲಿ ಬೇರೂರಿರುವ ಅಪರೂಪದ ಪೊಲೀಸ್ ಅಧಿಕಾರಿ ಆಗಿದ್ದಾರೆ ಡಿವೈಎಸ್ಪಿ ಬೆಳ್ಳಿಯಪ್ಪ.

ನೇರ ನಡೆ ನುಡಿಯ ದಕ್ಷ ಪೊಲೀಸ್ ಅಧಿಕಾರಿ ಆಗಿರುವ ಬೆಳ್ಳಿಯಪ್ಪ ತಮ್ಮ ಸೇವಾವಧಿಯನ್ನು ಹೆಚ್ಚಿನ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದರು.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಹಲವು ಠಾಣೆಗಳಲ್ಲಿ ಸೇವೆ ಸಲ್ಲಿಸಿ ಉತ್ತಮ ಅಧಿಕಾರಿ ಎಂದು ಜನಮನ್ನಣೆ ಗಳಿಸಿದರು. ಪಾಂಡೇಶ್ವರ, ಸುರತ್ಕಲ್, ಮಂಗಳೂರು ಗ್ರಾಮಾಂತರ, ಕರಾವಳಿ ಗಸ್ತುಪಡೆ, ಲೋಕಾಯುಕ್ತ, ಬಂಟ್ವಾಳ, ಉಳ್ಳಾಲ ದಲ್ಲಿ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತಂದಿದ್ದರು. ಹಲವಾರು ಅಪರಾಧ ಪ್ರಕರಣಗಳನ್ನು ನಿರ್ಭೀತಿಯಿಂದ ಭೇದಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಜಿಲ್ಲೆಯಲ್ಲಿ ಹಲವು ಮತೀಯ ಪ್ರಕರಣ ಜರುಗಿದಾಗ ಅದನ್ನು ಭೇದಿಸಲು ಇಲಾಖೆ ರಚಿಸುವ ತಂಡಕ್ಕೆ ಬೆಳ್ಳಿಯಪ್ಪ ಮುಖ್ಯ ಭೂಮಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ, ರಿಕ್ಷಾ ಚಾಲಕ ರಾಜೇಶ್ ಹತ್ಯಾ ಪ್ರಕರಣ ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಇದೇ ಬೆಳ್ಳಿಯಪ್ಪ ಅವರು. ಕೋಮು ಸೂಕ್ಷ್ಮ ಭಟ್ಕಳದಲ್ಲೂ ದಕ್ಷ ಕಾರ್ಯನಿರ್ವಹಿಸಿದ ಖ್ಯಾತಿ ಇವರದ್ದು. ರಾಷ್ಟ್ರಮಟ್ಟದಲ್ಲಿ ಚರ್ಚೆಗೀಡಾಗಿದ್ದ ಉಡುಪಿ ಶೌಚಾಲಯ ವಿಡಿಯೋ ಪ್ರಕರಣ ಭೇದಿಸಿದ ಕೀರ್ತಿ ಇವರದ್ದು.

ನೇರ ನಡೆನುಡಿಯ ನಿರ್ಭೀತ, ನಿಷ್ಪಕ್ಷಪಾತೀಯ ಪೊಲೀಸ್ ಅಧಿಕಾರಿ ಎಂದು ಜನಮನ್ನಣೆ ಗಳಿಸಿದವರು. ಬೆಳ್ಳಿಯಪ್ಪರದ್ದು ಚಿನ್ನದಂತಹ ಮನಸ್ಸು. ಖಡಕ್ ಪೊಲೀಸ್ ಆಫೀಸರ್ಸ್ ಆದರೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅಪರೂಪದ ಅಧಿಕಾರಿ. ಕರ್ನಾಟಕ ಪೊಲೀಸ್ ಕಂಡ ಅತ್ಯುತ್ತಮ ಅಧಿಕಾರಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.