ಬುದ್ಧಿವಂತರ ಜಿಲ್ಲೆಯಲ್ಲಿ ಲಕ್ಕಿ ಸ್ಕೀಮ್ ಉಂಡೆನಾಮ.!

ಕರಾವಳಿ

ಲಕ್ಕಿ ಸ್ಕೀಮ್‌ ಗೋಲ್‌ಮಾಲ್‌ ಬಟಾಬಯಲಾಗಿದೆ.
ಪ್ರಸಿದ್ಧ ಸತ್ಯವಂತ ಸಂಸ್ಥೆ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕೆಲ ಲಕ್ಕೀ ಸ್ಕೀಮ್‌ ಕಂಪೆನಿಗಳ ಉಂಡೆನಾಮ ಪುರಾಣ ಹೊರಬಂದಿದೆ. ಅಮಾಯಕರಿಗೆ ಮೋಸ ಮಾಡಿ ಅವರ ಬದುಕು ಬೀದಿಗೆ ತರುವ ಈ ಲಕ್ಕೀ ಸ್ಕೀಮ್‌ಗಳ ಬಗ್ಗೆ ಬುದ್ಧಿವಂತರ ಜಿಲ್ಲೆಯ ಜನ ಇನ್ನಾದರೂ ಎಚ್ಚೆತ್ತುಕೊಳ್ಳಲಿ.

ಲಕ್ಕಿ ಸ್ಕೀಮ್ ನಂಬಿದ್ರೆ ಉಂಡೆನಾಮ ಗ್ಯಾರಂಟಿ

ಈ ಹಿಂದೆ ಡ್ರೀಮ್ ಹೆಸರಿನ ಲಕ್ಕಿ ಸ್ಕೀಮ್ ವೊಂದು ಲೈವಲ್ಲೇ ತಮಗೆ ಬೇಕಾದವರ ಹೆಸರಿನ ಚೀಟಿಯನ್ನು ಬೆರಳಿನ ಸಂಧಿಯಲ್ಲಿ ಬಚ್ಚಿಟ್ಟು ಅವರಿಗೆ ಲಕ್ಕಿ ಡ್ರಾ ಆದ ಹಾಗೆ ಡ್ರಾಮಾ ಮಾಡಿ ಸಿಕ್ಕಿಬಿದ್ದಿದ್ದರು. ಈ ಲಕ್ಕಿ ಸ್ಕೀಮ್ ಗಳು ಇದೇ ರೀತಿ ತಮಗೆ ಬೇಕಾದವರಿಗೆ ದೊಡ್ಡ ದೊಡ್ಡ ಬಹುಮಾನ ಕೊಟ್ಟು ನಿಯತ್ತಾಗಿ ದುಡ್ಡು ಕಟ್ಟಿ ಬಹುಮಾನ ಬರುತ್ತೇ ಎಂದು ಕಾದು ಕುಳಿತವರಿಗೆ ನೀಟಾಗಿ ಉಂಡೆ ನಾಮ ಹಾಕುತ್ತಿದೆ. ಆದರೆ ನಮ್ಮ ಅಮಾಯಕ ಜನರಿಗೆ ಸ್ಕೀಮುಗಳ ಅಸಲಿಯತ್ತೇ ಗೊತ್ತಾಗುತ್ತಿಲ್ಲ.

ಸುಳ್ಳು ಜಾಹೀರಾತು ನೀಡ್ತಾರೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಫ್ಲ್ಯಾಟ್, ಕಾರು, ಬೈಕ್, ಚಿನ್ನದ ಬಹುಮಾನದ ಆಮಿಷವನ್ನು ನೀಡಿ ಗ್ರಾಹಕರನ್ನು ಸೆಳೆಯುವ ಬೇನಾಮಿ ಸ್ಕೀಮ್ ಗಳು ಜನರನ್ನು ನಂಬಿಸಲು ನಾನಾ ಅಡ್ಡದಾರಿ ಹಿಡಿದಿರುವ ಈ ವಂಚಕರು ಯಾರು ಫೇಮಸ್ ಇರುತ್ತಾರೋ ಅಂತಹ ನಟ ನಟಿಯರಿಂದ ಜಾಹೀರಾತು ಕೊಡಿಸುತ್ತಾರೆ. ಅಲ್ಲದೆ ಆರಂಭದಲ್ಲಿ ಗ್ರಾಹಕರಿಗೆ ಸಣ್ಣ ಪುಟ್ಟ ಉಡುಗೊರೆ ಕೊಟ್ಟು ಯಾಮಾರಿಸುತ್ತಾರೆ. ಜನ ಈ ಸ್ಕೀಮಿಗೆ ಜಾಯಿನ್ ಆಗುತ್ತಿದ್ದಂತೆ ನಖರಾ ತೋರಿಸುತ್ತಾರೆ. ಕೊನೆಗೆ ಬಾಗಿಲು ಎಳೆದುಕೊಂಡು ಪರಾರಿಯಾಗುತ್ತಾರೆ.

ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ, ಉಳ್ಳಾಲ, ಮಂಗಳೂರು ನಗರ, ಕಣ್ಣೂರು , ಬಿಸಿ ರೋಡ್, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಇಂತಹ ಉಂಡೆ ನಾಮ ಹಾಕುವ ಸ್ಕೀಮ್ ಗಳು ಸಕ್ರೀಯವಾಗಿದೆ. ಸೆಲೆಬ್ರಿಟಿಗಳನ್ನು ಬಳಸಿ ಫೇಸ್ ಬುಕ್, ಇನ್ ಸ್ಟ್ರಾಗ್ರಂ, ಎಕ್ಸ್, ಯೂಟ್ಯೂಬ್ ಖಾತೆಗಳ ಮೂಲಕ ಪ್ರಚಾರಪಡಿಸಲಾಗುತ್ತದೆ. ನ್ಯೂ ಇಂಡಿಯಾ, ಡ್ರೀಮ್, ಶೈನ್ ಈ ರೀತಿ ತರಹೇವಾರಿ ಹೆಸರುಳ್ಳ ಸ್ಕೀಮ್ ಗಳು ಜನರ ಮಧ್ಯೆ ಓಡಾಡುತ್ತಿದೆ. ಅದರಲ್ಲೂ ಸುರತ್ಕಲ್, ಕೃಷ್ಣಾಪುರದ ಬಹುತೇಕ ಸ್ಕೀಮ್ ಮಾಲಕರು ಗ್ರಾಹಕರಿಗೆ ಕೋಟ್ಯಂತರ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾರೆ. ಶೈನ್ ಸ್ಕೀಮ್ ಮಾಲೀಕ 13,000 ಗ್ರಾಹಕರಿಗೆ ಉಂಡೆನಾಮ ಹಾಕಿದ್ದಾನೆ. ಪ್ರತಿ ಓರ್ವ ಗ್ರಾಹಕರಿಂದ 12,000 ರೂಪಾಯಿಯಂತೆ 15 ಕೋಟಿ ರೂಪಾಯಿ ಮಕ್ಮಲ್ ಟೋಪಿ ಹಾಕಿದ್ದಾನೆ. ಇನ್ನು ನ್ಯೂ ಇಂಡಿಯಾ ಸ್ಕೀಮ್ ನ ಮಾಲಿಕ ಕನಿಷ್ಠ 9000 ಗ್ರಾಹಕರಿಗೆ ಮೂರು ನಾಮ ಹಾಕಿ 10 ಕೋಟಿಗೂ ಅಧಿಕ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ. ಹೀಗೆ ಜನರನ್ನು ಬೋಳಿಸಲೆಂದೇ ಹತ್ತಾರು ಸ್ಕೀಮ್ ಗಳು ರೆಡಿಯಾಗಿ ನಿಂತಿದೆ. ಆರ್ ಬಿಐ ನಿಯಮವನ್ನೇ ಗಾಳಿಗೆ ತೂರಿ ಹುಟ್ಟಿಕೊಂಡಿರುವ ಬ್ಲೇಡ್ ಕಂಪನಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತರು ಇಂತಹ ಬ್ಲೇಡ್ ಸ್ಕೀಮ್ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಪೊಲೀಸರು ನಿದ್ರೆಗೆ ಜಾರಿದ ಪರಿಣಾಮ ಮುಕ್ಕಲು ರೆಡಿಯಾಗಿ ನಿಂತಿದ್ದ ಸ್ಕೀಮ್ ಗಳು ಅಲ್ಲಲ್ಲಿ ಪೂರ್ತಿ ಮುಂಡಾಮೋಚಿ ಹಾಯಾಗಿದ್ದಾರೆ.

ನಗರದಲ್ಲಿ ಸ್ಕೀಮ್ ವೊಂದಕ್ಕೆ ತಿಂಗಳ ಕಂತು ಒಂದು ಸಾವಿರ ರೂಪಾಯಿ ನಿಗಡಿಪಡಿಸಲಾಗಿದ್ದು, ಅದರಲ್ಲಿ 10 ಸಾವಿರ ಮಂದಿ ಸದಸ್ಯರಾದರೆ 1 ಕೋಟಿ ರೂಪಾಯಿ ಸಂಗ್ರಹವಾಗಲಿದೆ. ಈ ಮೊತ್ತದಲ್ಲಿ ಪ್ರಥಮ ತಿಂಗಳ ಬಹುಮಾನವಾಗಿ ಫ್ಲ್ಯಾಟ್, ಕಾರು, ಬೈಕ್, ಚಿನ್ನ, ನಗದು ಸೇರಿದಂತೆ ಒಟ್ಟು 50 ಲಕ್ಷ ರೂಪಾಯಿ ಮೊತ್ತವನ್ನು ಮೀಸಲಿಡಬೇಕು. ಹೀಗಿರುವಾಗ ಆತನಲ್ಲಿ ಸಂಗ್ರಹವಾದ ಹಣದಲ್ಲಿ ಉಳಿದದ್ದು 50 ಲಕ್ಷ ರೂಪಾಯಿ ಮಾತ್ರ. ಇದೇ ರೀತಿ ಪ್ರತಿ ತಿಂಗಳು 50 ಲಕ್ಷದ ಬಹುಮಾನ ನೀಡಿ 50 ಲಕ್ಷದಂತೆ ಉಳಿಸಿದರೂ ಒಂದು ವರ್ಷದಲ್ಲಿ ಆತನಿಗೆ ಉಳಿಯುವುದು ಆರು ಕೋಟಿ ಮಾತ್ರ. ಕೊನೆಯ ಕಂತುಗಳಲ್ಲಿ ಸಂಸ್ಥೆಯವರು 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಮಾನ ನೀಡುವ ಭರವಸೆ ನೀಡುತ್ತಾರೆ. ಹಾಗಾದರೆ ಬಹುಮಾನ ಗೆದ್ದು ಬಾಕಿ ಉಳಿದ ಸದಸ್ಯರಿಗೆ ಅಂದಾಜು 9 ಕೋಟಿ ರೂಪಾಯಿ ಮರುಪಾವತಿ ಮಾಡಲೇಬೇಕಾಗಿದೆ.

ಹಾಗಾದರೆ ಆತನು ಈ ಹಣವನ್ನು ಹೊಂದಿಸಲು ಸಾಧ್ಯವೇ? ತೆರಿಗೆ ಪಾವತಿಸದೆ ಬಹುಮಾನ ನೀಡುವುದಾದರೂ ಹೇಗೆ? ಅದಕ್ಕಿಂತ 10 ರಿಂದ 15 ಕೋಟಿ ಮುಂಡಾಮೋಚಿ ಓಡಿ ಹೋಗುವುದು ಬೆಟರ್ ಅಂತ ಸಂಸ್ಥೆಯವರು ತಿಳಿದುಕೊಂಡಿದ್ದಾರೆ. ಇದೀಗ ಇಂತಹ ನಾಲ್ಕೈದು ಪ್ರಕರಣ ವರದಿಯಾಗಿದೆ.

ಸ್ಕೀಮ್ ಆರಂಭಿಸುವ ಸಂಸ್ಥೆಗಳು ಸ್ಕೀಮ್ ಪ್ರಚಾರಕ್ಕೆ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ಕೆಲವು ಏಜೆಂಟರನ್ನು ನೇಮಿಸಿಕೊಳ್ಳುತ್ತಾರೆ. ಏಜೆಂಟರುಗಳು ಉದ್ಯೋಗಸ್ಥರು, ಸಮಾಜದಲ್ಲಿ ಒಳ್ಳೆಯ ಹೆಸರು ಇದ್ದವರು ಇರುತ್ತಾರೆ. ಲಕ್ಷ ಲಕ್ಷ ಕಮೀಷನ್ ಸಿಗುತ್ತದೆ ಅಂತೇಳಿ ಸಾವಿರಾರು ಸದಸ್ಯರನ್ನು ಸೇರಿಸುತ್ತಾರೆ. ಆದರೆ ಸಂಸ್ಥೆ ಮುಂಡಾಮೋಚಿದರೆ ಜನರ ಕೈಗೆ ಸಿಗುವುದು ಏಜೆಂಟರು. ಸಣ್ಣ ಮೊತ್ತದ ಕಮೀಷನ್ ಆಸೆಗೆ ಹೋಗಿ ಗುಂಡಿಗೆ ಬೀಳುತ್ತಾರೆ.

ಇನ್ನು ಸಂಸ್ಥೆಯವರು ಸುಮಧುರ ಧ್ವನಿಯ ಯುವತಿಯರನ್ನು ಇಟ್ಟುಕೊಂಡು ಅವರಿಂದ ಫೋನ್ ಕರೆ ಮಾಡಿಸಿ ಸ್ಕೀಮ್ ಗೆ ಸೇರುವಂತೆ ಪ್ರೇರೇಪಿಸಲಾಗುತ್ತದೆ. ಆಕೆಯ ಮಾತಿಗೆ ಕಟ್ಟುಬಿದ್ದು ಸ್ಕೀಮ್ ಗೂ ಸೇರಿದವರು ಇದ್ದಾರೆ. ಸ್ಕೀಮ್ ಬೇಡವೆಂದರೂ ಬೇರೆ ಯುವತಿಯರು ದಿನ ಹತ್ತಾರು ಬಾರಿ ಫೋನ್ ಕರೆ ಮಾಡುವುದು ಇದೆ. ಕೊನೆಗೆ ಫೋನ್ ಕರೆಯ ಹಳ್ಳಕ್ಕೆ ಗ್ರಾಹಕ ಬೀಳುತ್ತಾನೆ. ಹೀಗೆ ವಿಭಿನ್ನ ದಾರಿಗಳ ಮೂಲಕ ಗ್ರಾಹಕರಿಗೆ ಆಮಿಷ ಒಡ್ಡಿ ಇಂತಹ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಬುದ್ಧಿವಂತರ ಜಿಲ್ಲೆ ಜನರೇ ಇಂತಹ ಬ್ಲೇಡ್ ಸ್ಕೀಮ್ ಗೆ ಬಲಿಯಾಗುತ್ತಿರುವುದು ವಿಪರ್ಯಾಸ.