ಉಪ್ಪಿನಂಗಡಿ ಪೊಲೀಸರ ಕಾರ್ಯಾಚರಣೆ: ಚಿನ್ನದ ಸರ ಕಸಿದ ಆರೋಪಿಯ ಬಂಧನ, 5,05,000 ರೂ. ಮೌಲ್ಯದ ಸೊತ್ತು ವಶ

ಕರಾವಳಿ

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ, ಪಡುಬೆಟ್ಟು ಎಂಬಲ್ಲಿ ದಿನಾಂಕ 04-06-2025 ರಂದು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು, ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಎಳೆದು ಬಲವಂತವಾಗಿ ಕಸಿದುಕೊಂಡು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಪ್ಪಿನಂಗಡಿ ಠಾಣಾ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ಸುಳ್ಯ ಆಲೆಟ್ಟಿ ನಿವಾಸಿ ಅಬ್ದುಲ್ ರೆಹಮಾನ್ ಎಂಬಾತನನ್ನು ಪುತ್ತೂರು, ನೆಕ್ಕಿಲಾಡಿ ಸಮೀಪ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಆರೋಪಿತನಿಂದ ಅಂದಾಜು 4,54,000 ರೂ. ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಸೇರಿದಂತೆ, ಒಟ್ಟು 5,05,000 ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ರಿ ಬೈಕ್ ಗೆ ಸಂಬಂಧಿಸಿ ಮೈಸೂರು ನಗರದ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

ಪುತ್ತೂರು ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ಕಾರ್ಯಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.